
ಆ ಹುಡುಗಿ ಹೇಳಿ ಮುಗಿಸಿದ್ದಳು. ನಾನು ಗೊಂದಲದಲ್ಲಿದ್ದೆ. ಆಕೆಗೆ ಏನು ಉತ್ತರಿಸಬೇಕು? ಇಷ್ಟಕ್ಕೂ ಆಕೆ ನನ್ನಿಂದ ಸಲಹೆಯನ್ನು ನಿರೀಕ್ಷಿಸುತ್ತಿದ್ದಳಾ? ಕೆಲವು ಸಂಗತಿಗಳು ಹಾಗೆಯೇ ಇದು ನಿಮ್ಮ ಗಮನಕ್ಕೂ ಬಂದಿರುತ್ತದೆ. ಅಥವಾ ನಾವು ನೀವು ಹಾಗೆ ಹೇಳಿಕೊಂಡಿರುತ್ತೀವಿ. ನಮ್ಮ ಮನದ ಆಳದಲ್ಲಿ ಹುದುಗಿ ಪದೇ ಪದೇ ಕಾಡುವ ನೋವನ್ನು ಯಾರಾದರೊಬ್ಬ ಆತ್ಮೀಯರೆದಿರು ಹೇಳಿಕೊಂಡು ಬಿಡುತ್ತೇವೆ. ಅದನ್ನು ಕೇಳಿಸಿಕೊಂಡಾತ ನಮ್ಮನ್ನು ಸಮಾಧಾನಿಸಲಿ ಎಂಬ ನಿರೀಕ್ಷೆ ಇರುವುದಿಲ್ಲ. ಜಸ್ಟ್ ಅದು ನಮ್ಮ ಮನಸ್ಸಿನ ಭಾರ ಇಳಿಸಿಕೊಳ್ಳುವುದು ಅಂತೀವಲ್ಲ ಹಾಗೆ. ಕೆಲವರು ಆತ್ಮೀಯರು ಸಿಕ್ಕರೆ ಅವರ ಭುಜದ ಮೇಲೆ ತಲೆ ಇಟ್ಟು ಅತ್ತು ಹಗುರಾಗುತ್ತಾರೆ. ಅಲ್ಲಿ ಪ್ರಶ್ನೆ ಉತ್ತರಗಳ ಹಂಗಿರುವುದಿಲ್ಲ. ಆದರೆ ಮೊನ್ನೆ ಎದುರಿಗೆ ಕುಳಿತ ಹುಡುಗಿ ನನ್ನಿಂದ ಸಲಹೆ ನಿರೀಕ್ಷಿಸಿದ್ದಳು. ಆದರೆ ಏನು ಹೇಳಬೇಕು ಎಂಬುದು ನನ್ನ ಸಮಸ್ಯೆಯಾಗಿತ್ತು. ಒಬ್ಬ ಹುಡುಗಿ ಮನೆಯಿಂದ ಹೊರಹೊರಟು ವಾಪಾಸ್ ಮನೆಗೆ ಬರೋ ತನಕ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬಸ್ಸಿನಲ್ಲಿ ಕಾಡುವವರನ್ನ, ಕಾಲೇಜಿನಿಂದ ಹಿಂಬಾಲಿಸಿಕೊಂಡು ಬರೋ ಹುಡುಗನ ಕಣ್ತಪ್ಪಿಸಿ ಬರುವ ಹುಡುಗಿಗೆ ದಾರಿಯುದ್ದಕ್ಕೂ ಆತಂಕವಿರುತ್ತದೆ. ಆದರೆ ಒಮ್ಮೆ ಮನೆಯ ಗೇಟ್ ದಾಟಿ ಬಿಟ್ಟರೆ ಅಬ್ಬ ಬಚಾವ್ ಆದೆ ಅಂತ ರಿಲೀಫ್. ಬಸ್ನಲ್ಲಿ, ಬಸ್ಸ್ಟಾಂಡಿನಲ್ಲಿ ಅಸಹ್ಯಕರ ನೋಟಗಳನ್ನ ಎದುರಿಸೋ ಹೆಣ್ಣು ಮಕ್ಕಳಿಗೆ ಮನೆಗೆ ಬಂದರೆ ಅದು ತಾಯಿಯ ಗರ್ಭದೊಳಕ್ಕೆ ಸೇರಿಕೊಂಡಂತೆ ಸೇಫ್. ಆದರೆ ಈ ಹುಡುಗಿಯ ಸಮಸ್ಯೆ ಶುರುವಾಗುತ್ತಿದ್ದಿದ್ದೆ ಮನೆಯೊಳಕ್ಕೆ ಬಂದ ನಂತರ! ಸರ್ ನಂಗೆ ಅಪ್ಪ ಅಂದ್ರೆ ನಿಜಕ್ಕೂ ಇಷ್ಟ ಸರ್ ಆದ್ರೆ ಅವರಿಗೆ ನನ್ನ ಬಗ್ಗೆ ಅದ್ಯಾಕೆ ಕೆಟ್ಟ ಭಾವನೆ ಬರುತ್ತೋ ಗೊತ್ತಿಲ್ಲ. ಇದ್ರಲ್ಲಿ ನಂದೇನಾದ್ರು ತಪ್ಪಿದೆಯಾ ಸರ್ ಅಂತ ಕೇಳಿದ್ದಳು. ನಂಗೆ ಇದು ಹೊಸದಲ್ಲ. ಆಕೆ ಸುಳ್ಳು ಹೇಳ್ತಿಲ್ಲ. ಯಾಕೆಂದರೆ ಯಾವುದೇ ಹೆಣ್ಣಿಗೆ ತನ್ನ ಭುಜದ ಮೇಲೆ ಯಾರಾದರು ಕೈ ಇರಿಸಿದರೆ ಆ ಸ್ಪರ್ಶದಲ್ಲಿ ಯಾವ ಭಾವವಿದೆ ಅನ್ನುವುದು ಅರ್ಥವಾಗಿ ಬಿಡುತ್ತದೆ! ಅಂಥದ್ದೊಂದು ಶಕ್ತಿ ಪ್ರತಿಯೊಬ್ಬ ಹೆಣ್ಣಿಗೂ ಇದ್ದೇ ಇರುತ್ತದೆ. ಇಲ್ಲಿ ಈ ಹುಡುಗಿ ಹೇಳಿದ್ದನ್ನೂ ಯಾರೂ ನಂಬುವುದಿಲ್ಲ. ಯಾಕೆಂದರೆ ನಾವು ಸಂಬಂಧಗಳ ಬಗ್ಗೆ ತುಂಬಾ ಗೌರವ ಇರಿಸಿಕೊಂಡಿದ್ದೇವೆ. ತಂದೆ, ಅಣ್ಣ, ಭಾವ, ಮಾವ(ಗಂಡನ ತಂದೆ) ಈ ಎಲ್ಲಾ ಸಂಬಂಧಗಳನ್ನು ನಾವು ನಂಬಿಕೆಯ ನೆಲೆಗಟ್ಟಿನಲ್ಲಿ ಸ್ಥಾಪಿಸಿಕೊಂಡು ಬಿಟ್ಟಿದ್ದೇವೆ. ಹಾಗಾಗಿ ಇಂಥ ವಿಚಾರ ಬಂದಾಗ ನಾವು ನಂಬುವುದಿಲ್ಲ. ಆದರೆ ನಾನು ಇತ್ತೀಚೆಗೆ ಒಬ್ಬ ಹೆಂಗಸು ತನ್ನ ಮಾವನ ವರ್ತನೆ ಬಗ್ಗೆ ಹೇಳಿಕೊಂಡಿದ್ದನ್ನ ಹಾಗೂ ಸಾಕ್ಷಿ ಎಂಬಂತೆ ಆಕೆ ತನ್ನ ಮಾವ ಆಡಿದ ಮಾತನ್ನು ರೇಕಾರ್ಡ್ ಮಾಡಿದ್ದನ್ನ ಕೇಳಿಸಿಕೊಂಡಿದ್ದೇನೆ. ಅಷ್ಟೇ ಅಲ್ಲ ನಂಗೆ ಹೀಗೆ ಮನೆಯೆಂಬ ನರಕದಲ್ಲಿ ಬದುಕುತ್ತಿರುವ ಹೆಣ್ಣು ಮಕ್ಕಳು ಗೊತ್ತೂ.. ಹಾಗೆ ಮನೆಯೊಳಗೆ ಹುಟ್ಟಿಕೊಂಡ ಗುಪ್ತ್ ಗುಪ್ತ್ ಸಂಬಂಧಗಳ ಬಗ್ಗೆಯೂ ಗೊತ್ತು. ಬಿಡಿ, ಅದಿಲ್ಲಿ ಬೇಡ. ನೋಡು, ಅಪ್ಪನನ್ನು ದ್ವೇಶಿಸೋಕೆ ಹೋಗಬೇಡ. ಅಪ್ಪಾ ನೀವು ಅಂದ್ರೆ ನಂಗೆ ಗೌರವ, ನಿಮ್ಮನ್ನ ನಾನು ತಂದೆಯಾಗಿ ಪಡೆದಿದ್ದಕ್ಕೆ ನಂಗೆ ಹೆಮ್ಮೆ ಇದೆ. ಏನ್ ಗೊತ್ತಾ ಅಪ್ಪ ಇವತ್ತು ಅವನಾರೋ ಬಸ್ನಲ್ಲಿ ನನ್ನ ಒಂಥರಾ ನೊಡ್ತಾ ಇದ್ದ ಎಷ್ಟು ಅಸಹ್ಯ ಆಯ್ತು ಗೊತ್ತಾ ಕಣ್ಣು ಕಿತ್ತು ಹಾಕೋಣ ಅಂತ ಅನಿಸಿ ಬಿಡ್ತು ಹೀಗೆ ಮಾತಾಡಿದರೆ ಆತನಿಗೆ ಮಗಳ ಸೂಕ್ಷ್ಮ ಅರ್ಥವಾದೀತು. ಇನ್ನೊಂದು ಸಂಗತಿ ಇದೆ. ಹೊರಗೆ ಇದ್ದ ಅಷ್ಟು ಹೊತ್ತು ತನ್ನ ಮೇಲೆ, ಇದರ ಬಗ್ಗೆ ಜಾಗೃತೆ ವಹಿಸೋ ಹೆಣ್ಣು ಮಕ್ಕಳು ಮನೆಗೆ ಬಂದ ಕೂಡಲೆ ವೇಲ್ ಕಿತ್ತೆಸೆದೋ, ಸೆರಗು ಸರಿಸಿ ಫ್ಯಾನಿನ ಗಾಳಿಗೆ ಮೈಯೊಡ್ಡಿ ನಿಂತಿರುತ್ತಾರೆ. ಅಫ್ಕೋರ್ಸ್ ಅದು ಸಹಜ. ಅದು ನಮ್ಮ ಮನೆ ಇರುವವರು ತಮ್ಮವರೆ ಎಂಬ ಕಂಫರ್ಟ್. ಆದರೆ ಯಾರೋ ಒಬ್ಬರ ದೃಷ್ಠಿ ನಿಮ್ಮ ಮೇಲೆ ಬಿದ್ದಿದೆ ಅಂತ ಗೊತ್ತಾದ್ರೆ ಕೊಂಚ ಜಾಗೃತರಾಗಿ, ರಾತ್ರಿ ಮಲಗೋವಾಗ ಬಾಗಿಲನ್ನ ಭದ್ರಪಡಿಸಿಕೊಂಡು ಮಲಗಿ. ನಿಮ್ಮ ಉಡುಗೆಗಳ ಬಗ್ಗೆಯೂ ಗಮನವಿರಲಿ. ಅದಕ್ಕಿಂತ ಮಿಗಿಲಾಗಿ ಒಂದು ಟೆಕ್ನಿಕ್ ಇದೆ. ಬಸ್ಸಿನಲ್ಲಿ ಕಾಡುವವರನ್ನ, ರಸ್ತೆಯಲ್ಲಿ ಮತ್ತೆ ಹೀಗೆ ಮನೆಯೊಳಗೆ ಕಾಡುವವರನ್ನ ಸುಮ್ಮನೆ ಸಹಿಸಿಕೊಳ್ಳಬೇಡಿ. ಒಂದು ಸಲ ಗಟ್ಟಿಯಾದ ದನಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಿ ಎದುಗಿರುವವನು ಎಷ್ಟೇ ಸ್ಟ್ರಾಂಗ್ ಆದರು ಥರಗಟ್ಟಿ ಹೋಗುತ್ತಾನೆ. ಯಾಕೆಂದರೆ ಸುತ್ತಲಿನವರ ಗಮನ ಅತ್ತ ಸೆಳೆದಿರುತ್ತದೆ. ಇದರಿಂದ ನಿಮಗೆ ಖಂಡಿತ ಅವಮಾನವಾಗುವುದಿಲ್ಲ. ನಮ್ಮನ್ನು ಯಾರು ತಪ್ಪು ತಿಳಿಯುವುದೂ ಇಲ್ಲ. ಮನೆಯಲ್ಲಿರೋ ತಾಯಂದಿರು, ಮಗಳು ಓದಿನಲ್ಲಿ ಹಿಂದೆ ಬಿದ್ದರೆ, ಇದ್ದಕ್ಕಿದ್ದಂತೆ ಮೌನಿಯಾಗಿಬಿಟ್ಟರೆ, ಏನಾಯ್ತು ಅಂತ ಕಾಡಬೇಡಿ. ಮಗಳು ಕೈತಪ್ಪುತ್ತಾಳಾ ಅಂತ ದಿಗಿಲುಗೊಳ್ಳೋ ಮೊದಲು ಮನೆಯಲ್ಲಿ ಸೂಕ್ಷ್ಮವಾಗಿ ಅವಳ ಮೇಲೊಂದು ಕಣ್ಣಿಡಿ. ನೀವು ಎಷ್ಟೇ ಆತ್ಮೀಯತೆ ತೋರಿದರೂ ನಿಮ್ಮಲ್ಲೂ ಹೇಳಿಕೊಳ್ಳಲಾಗದ ಸಂಗತಿಗಳು ನಿಮ್ಮ ಮಗಳಿಗಿರುತ್ತದೆ.







