
ಅದೊಂದು ಸರ್ಟೀಫಿಕೇಟು ನಂಗೆ ಸಿಕ್ಕು ಬಿಟ್ಟಿತ್ತು. ಯಾವಾಗ, ಏಕೆ ಮತ್ತು ಹೇಗೆ ಸಿಕ್ತು ಅಂತ ಗೊತ್ತಾಗಿಲ್ಲ. ಅವನು ಸರಿ ಇಲ್ಲ ಅನ್ನೋ ಮಾತು ನನ್ನ ಪಾಲಿಗೆ ನಿತ್ಯದ ಸ್ಲೋಗೋನ್!. ಬಹುಶಃ ಇವತ್ತಿಗೂ ಕೆಲವರ ಪಾಲಿಗೆ ನಾನು ಸರಿ ಇಲ್ಲ. ಆಗಷ್ಟೇ ಓದು ಮುಗಿದಿತ್ತು. ಸರಿಯಾದ ಉದ್ಯೋಗ ಒಲಿದಿರಲಿಲ್ಲ. ಹಾಗಂತ ನಾವು ಫ್ರೀಯಾಗಿದ್ದೆವು ಅಂತಲ್ಲ. ಬಸ್ಸಿನ ಕಿಟಕಿಯಲ್ಲಿ ನಕ್ಕ ಹುಡುಗಿಯನ್ನ ಪ್ರತಿದಿನ ನೋಡುವುದು ಕೂಡ ಆಗ ನಮ್ಮ ಪಾಲಿಗದು ಉದ್ಯೋಗವೇ ಆಗಿತ್ತು. ಹಾಗಂತ ಆ ಹುಡುಗಿಯನ್ನ ನಿಲ್ಲಿಸಿ ಮಾತಾಡುವ ಧೈರ್ಯವೇ ಇರಲಿಲ್ಲ. ನಮ್ಮದೇ ಒಂದಿಷ್ಟು ಗುಂಪಿತ್ತು. ಬಹುತೇಕ ಎಲ್ಲರಿಗೂ ಒಬ್ಬೊಬ್ಬ ಹುಡುಗಿ ಫಿಕ್ಸ್ ಆಗಿದ್ದಳು. ಮತ್ತು ಎಲ್ಲರಿಗೂ ಪ್ರೇಮ ಪತ್ರ ಬರೆದುಕೊಡುವ ಮಹತ್ತರವಾದ ಜವಾಬ್ದಾರಿ ಮಾತ್ರ ನಂದೇ! ನಮ್ಮಲ್ಲಿಯ ಕೆಲವರಿಗೆ ಕುಡಿತ, ಸಿಗರೇಟು ಅಭ್ಯಾಸವಾಗಿ ಹೋಗಿತ್ತು. ಅದೇಕೋ ಗೊತ್ತಿಲ್ಲ. ನಂಗೆ ಮಾತ್ರ ಅವೆರಡು ಒಲಿಯಲಿಲ್ಲ. ಕುಡಿತ, ಸಿಗರೇಟು ಸೇದುವ ಹುಡುಗರು ಮರ್ಯಾದಸ್ತ ಮನೆಯವರಾಗಿದ್ದರು. ತೀರಾ ಕದ್ದು ದಂ ಹೊಡೆಯುವ ಅನಿವಾರ್ಯತೆ ಅವರಿಗಿತ್ತು. ಸಿಗರೇಟು ಸೇದದ ನಾನು ಅವರಿಗಾಗಿ ಖರೀದಿಸಿ ತರುತ್ತಿದ್ದೆ. ಬಹುಶಃ ಸೇದುವುದಿಲ್ಲ ಎಂಬ ನಂಬಿಕೆಯಿಂದ ನಂಗೆ ಖರೀದಿಸಲು ಯಾವ ಅಳುಕು ಇರುತ್ತಿರಲಿಲ್ಲ. ಆದರೆ ತಮಾಷೆ ಸಂಗತಿ ನೋಡಿ ಸಿಗರೇಟು ಕೊಟ್ಟ ಅಂಗಡಿಯ ಪುಣ್ಯಾತ್ಮ ನನ್ನ ಜೊತೆಗಾರರಿಗೆ ಕರೆದು ನೀವು ರಾಘು ಜೊತೆ ಸೇರಬೇಡಿ ಅವ ಈಗ್ಲೆ ದಂ ಹೊಡೆಯೋಕೆ ಶುರು ಮಾಡಿದಾನೆ ಅಂತ ಬುದ್ದಿ ಹೇಳಿ ಕಳುಹಿಸುತ್ತಿದ್ದ. ಈ ನನ್ನ ಜೊತೆಗಾರರು ಬಾಯಿಬಿಟ್ಟರೆ ಸಿಗರೇಟಿನ ವಾಸನೆ ಬರುತ್ತೆ ಅಂತ ಮಿಂಟಿ ತಗೊಂಡು ತೆಪ್ಪಗೆ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದರು. ಬಹುಶಃ ಈ ಕಾರಣಕ್ಕಾಗಿಯೇ ನಂಗೆ ಸರಿ ಇಲ್ಲ ಅನ್ನೋ ಪಟ್ಟ ಸಿಕ್ಕೀತಾ ಗೊತ್ತಿಲ್ಲ. ಬೀ ಹಾನೆಸ್ಟ್. ನಾನು ತುಂಬಾ ಒಳ್ಳೆಯವನಲ್ಲ. ಆದರೆ ನನ್ನ ಆತ್ಮಸಾಕ್ಷಿಯ ಮುಂದೆ ನಾನೇ ತಲೆ ತಗ್ಗಿಸಬಹುದಾದ ಯಾವ ಕೆಲಸವನ್ನು ನಾನು ಮಾಡಿಲ್ಲ. ಅದಿರಲಿ, ಈ ಸರಿ ಇಲ್ಲ ಅನ್ನೋ ಮಾತು ಆರಂಭದಲ್ಲಿ ನೋವು ಕೊಡ್ತಾ ಇದ್ದದ್ದು ನಿಜ. ಆದರೆ ಇದರಿಂದ ತುಂಬಾ ದೊಡ್ಡ ಲಾಭವಿದೆ. ನಿಮ್ಗೆ ಯಾರಾದ್ರು ಸರಿ ಇಲ್ಲ ಅಂತ ಹೇಳಿ ನೀವು ಎಲ್ಲರ ದೃಷ್ಠಿಯಲ್ಲಿ ಹಾಗೆ ಕಾಣಿಸಿಕೊಂಡು ಬಿಡಿ. ನಿಮಗೆ ಇಷ್ಟ ಬಂದ ಹಾಗೆ ನೀವು ಬದುಕಬಹುದು. ನಿಮ್ಮ ನಿರ್ಧಾರಗಳನ್ನು ಯಾರು ಪ್ರಶ್ನಿಸುವುದಿಲ್ಲ. ನೀವು ಯಾರನ್ನ ಬೇಕಾದರು ಪ್ರಶ್ನಿಸಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ನೀವು ಒಳ್ಳೆಯವರು ಎಂಬ ಮುಖವಾಡ ಹಾಕಿಕೊಳ್ಳದೆ ಬದುಕಬಹುದು. ಯಾವುದೋ ಸಭೆಗಳಲ್ಲಿ, ಪಾರ್ಟಿಗಳಲ್ಲಿ ಯಾರು ಏನೆಂದು ಕೊಳ್ತಾರೋ ಅನ್ನೋ ಆತಂಕವಿಲ್ಲದೆ ಎಂಜಾಯ್ ಮಾಡಬಹುದು. ಈ ಸಮಾಜದಲ್ಲಿ ಒಳ್ಳೆಯವನು ಅಂತ ಕರೆಸಿಕೊಂಡವನ ಹಿಂದೆ ಸಾವಿರ ಕಣ್ಣುಗಳಿರುತ್ತವೆ. ಆತ ಒಂದು ಸಣ್ಣ ತಪ್ಪು ಮಾಡಿದರೂ ಅದನ್ನ ಭೂತಗನ್ನಡಿಯಲ್ಲಿ ಶೋಧಿಸಲಾಗುತ್ತದೆ. ಹಾಗಂತ ನಾನು ಯಾರನ್ನು ಒಳ್ಳೆಯವರಾಗಬೇಡಿ ಅಂತಿಲ್ಲ. ಜನ ಹೇಳಿದರೂ ಅಂತ ನೀವು ಒಳ್ಳೆಯವರಾಗಿ ಕಾಣಿಸೋಕೆ ಪ್ರಯತ್ನಿಸಬೇಡಿ ಅಂತ ಹೇಳ್ತೀನಿ. ಒಳ್ಳೆಯತನದ ಮುಖವಾಡ ಹಾಕಿಕೊಂಡು ಒಮ್ಮೆ ಅದು ಕಳಚಿಬಿದ್ದರೆ ನಿಮ್ಮ ಮುಖ ಸರಿ ಇಲ್ಲದವನ ಮುಖಕ್ಕಿಂತ ವಿಕಾರವಾಗಿ ಕಾಣಿಸುತ್ತದೆ!. ಈ ಸಮಾಜಕ್ಕಾಗಿ ನೀವು ತಲೆ ಕೆಡಿಸಿಕೊಳ್ಳಬೇಡಿ ಅದಕ್ಕಾಗಿ ನೀವು ಒಳ್ಳೆಯವರಾಗಬೇಡಿ. ನಿಮಗಿಷ್ಟ ಬಂದಂತೆ ನೀವು ಬದುಕಿ ಬಿಡಿ. ಆದರೆ ನೆನಪಿಡಿ, ನಮ್ಮ ‘ಆತ್ಮಸಾಕ್ಷಿ’ಗೆ ನಮ್ಮನ್ನು ಪ್ರಶ್ನಿಸದಂತೆ ಬದುಕು ಸಾಗಬೇಕು. ಮತ್ತಾರಾದರು ಏನೆಂದುಕೊಂಡರೆ ನನಗೇನು? ‘ನಾನು ಸರಿ ಇಲ್ಲ!’ ಹಾಗಂತ ನಿಮ್ಗೆ ಅನಿಸ್ತಾ ?







