
ಕೆಲವರು ಯಾಕೆ ಹಾಗೆ ಬದಲಾಗುತ್ತಾರೆ? ಈ ಪ್ರಶ್ನೆ ನಮ್ಮಲ್ಲಿ ಅನೇಕರ ಬಗ್ಗೆ ಹಲವರಲ್ಲಿರುತ್ತದೆ? ಅವರು ಬದಲಾಗಿದ್ದಾರೆಂಬ ಸ್ಪಷ್ಟ ಸುಳಿವು ಸಿಕ್ಕು ಬಿಟ್ಟಿರುತ್ತದೆ. ಆಫ್ಕೋರ್ಸ್, ಕಾರಣವು ನಿಮಗೆ ಗೊತ್ತಾಗಿರುತ್ತದೆ. ತೀರಾ ಕರೆದಾಗೆಲ್ಲ ಬಂದು ದಂ ಎಳೆದು ಕಾಫಿಗೆ ಜೊತೆಯಾಗುತ್ತಿದ್ದ ಗೆಳೆಯ ಚಿಕ್ಕ ಪಾನ್ ಅಂಗಡಿ ತೆರೆಯುತ್ತಿದ್ದಂತೆಯೇ ಬದಲಾಗಿ ಬಿಟ್ಟಿದ್ದಾನೆ! ಆಗಿನ ಸುತ್ತಾಟಕ್ಕೆ, ಟೈಂ ಪಾಸ್ಗೆ, ಕಾಫಿಗೆ, ದಮ್ಗೆ… ಊಹುಂ ಯಾವುದಕ್ಕೂ ಬರುತ್ತಿಲ್ಲ. ಮಾತಾದರೂ ಅಷ್ಟಕ್ಕಷ್ಟೆ. ಇನ್ನು ಅವಳು ಮೂರು ವರ್ಷ ಡಿಗ್ರಿ ಮುಗಿಯೋ ತನಕ ಒಂದಿನವೂ ಬಿಟ್ಟಿಲ್ಲದವಳು ಈಗ ದೊಡ್ಡ ಕಂಪನಿಯಲ್ಲಿ ಕೆಲ್ಸ ಸಿಗುತ್ತಿದ್ದಂತೆಯೇ ನಿಮ್ಮ ನೆನಪೇ ಇಲ್ಲದಂತಿದ್ದಾಳೆ. ಯಾವಾಗಲೋ ಒಂದು ಮೇಸೇಜ್, ಒಂದು ಹಾಯ್ ಅಷ್ಟೆ… ನೆರೆ ಮನೆಯವರು ಮಗಳಿಗೆ ಶ್ರೀಮಂತ ಹುಡುಗನ ಸಂಬಂಧ ಕುದುರುತ್ತಿದ್ದಂತೆಯೇ, ಆತ ಕೈಗೆ ಸಿಗುವುದಿಲ್ಲ, ಕಂಡರೂ ಕಾಣದಂತೆ ಹೋಗುತ್ತಿದ್ದಾನೆ… ಇವರು ಮಾತ್ರವಲ್ಲ, ಹೊಸ ಮನೆ ಕಟ್ಟಿದವರು, ಹೊಸ ಕಾರು ಖರೀದಿಸಿದವರು, ಹೊಸ ಉದ್ಯಮ ಸ್ಥಾಪಿಸಿದವರು ಬದಲಾಗಿ ಬಿಡುತ್ತಾರೆ! ಅದು ಅಹಂಕಾರ, ದೊಡ್ಡಸ್ತಿಕೆ ಅಂತ ನಾವು ನೀವು ಹೇಳುತ್ತೇವಲ್ಲ. ಕೆಲವರು ಜಂಭ ಅಂತಲೂ ಹೇಳಬಹುದು ಅಲ್ವಾ?
ಎಸ್! ಕರೆಕ್ಟ್ ಸರ್..
ಅಂತ ಖುಷಿಯಾಗಿ ತಲೆ ಆಡಿಸಬೇಡಿ. ನಾನು ಹೇಳುವುದು ಇನ್ನೂ ಬಾಕಿ ಇದೆ. ನಿಜ ಸ್ನೇಹಿತರೇ, ಒಂದು ಹಂತದಲ್ಲಿ ನಮ್ಮ ಬದುಕಿನ ಮಗ್ಗಲು ಬದಲಾಗುತ್ತದೆ. ಬದಲಾಗಲೇ ಬೇಕು. ನಮ್ಮ ಸುತ್ತಲಿನ ಜಗತ್ತು ಕೂಡ ಇದಕ್ಕೆ ಹೊರತಾಗಿಲ್ಲ. ನೀವು ಅಂದುಕೊಂಡಂತೆ ಕೇವಲ ಬೆರಳೆಣಿಕೆಯ ಮಂದಿಗೆ ದೊಡ್ಡಸ್ಥಿಕೆ, ಅಹಂಕಾರ, ಹಣದ ಮದ ಬರಬಹುದೆ ಹೊರತು ಬದಲಾಗಿ ಎಲ್ಲರಿಗೂ ಹಾಗಾಗಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳಬೇಕಿರುತ್ತದೆ!
ಪ್ರತಿದಿನ ದಮ್ಗೆ ಜೊತೆಯಾಗುತ್ತಿದ್ದ ಗೆಳೆಯನೊಬ್ಬ ಪಾನ್ ಅಂಗಡಿ ತೆರೆದು ಸ್ವತಃ ತಾನೇ ಸಿಗರೇಟು ವ್ಯಾಪಾರಕ್ಕೆ ನಿಂತಾಗ ಆತ ತನ್ನ ಸ್ವಭಾವವನ್ನು ಬದಲಿಸಿಕೊಳ್ಳಬೇಕು. ಮೊದಲು ತಾನು ಸಿಗರೇಟು ಬಿಡಬೇಕು! ಮತ್ತು ತನ್ನ ಗೆಳೆಯರ ಬಳಗದೊಂದಿಗೆ ಕೊಂಚ ಮಟ್ಟಿಗೆ ಅಂತರ ಕಾಯ್ದುಕೊಂಡಾಗ ಮಾತ್ರ ಆತ ಯಶಸ್ವಿ ವ್ಯಾಪಾರಿಯಾಗುತ್ತಾನೆ. ಇಲ್ಲವಾದರೆ ಆತನ ಪಾನ್ ಅಂಗಡಿ ಬಂದ್ ಆಗಲು ಹೆಚ್ಚು ದಿನ ಬೇಕಿರುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಗೆಳೆಯನ ಪರಿಸ್ಥಿತಿ ಅರಿತುಕೊಳ್ಳಬೇಕೇ ಹೊರತು ಪಾನ್ ಅಂಗಡಿ ಹಾಕಿದ ಮೇಲೆ ಅವನಿಗೆ ದೊಡ್ಡಸ್ಥಿಕೆ ಬಂತು ಅಂತ ಆಡಿಕೊಂಡರೆ ಅದು ನಮ್ಮೊಳಗಿನ ‘ನಂಜು’ ಎನಿಸಿಕೊಂಡು ಬಿಡುತ್ತದೆ. ಇನ್ನು ಅವಳು, ಡಿಗ್ರಿಯ ಜೊತೆಗಾತಿ, ದೊಡ್ಡ ಕಂಪನಿಯಲ್ಲಿ ಸೇರಿ ಕೊಂಡಿದ್ದಾಳೆ. ಈಗ ಅವಳ ಮೆಸೇಜ್, ಕಾಲ್ ಯಾವುದೂ ಇಲ್ಲ. ಅಂದರೆ ಅವಳಿಗೆ ಆ ಕಂಪನಿ ಬಿಟ್ಟಿ ಸಂಬಳ ಕೊಡುವುದಿಲ್ಲ. ದೊಡ್ಡ ಹುದ್ದೆಯಲ್ಲಿದ್ದಾಗ ಸ್ವಲ್ಪ ಎಡವಟ್ಟಾದರೂ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಹಾಗೆಯೇ ಮಗಳಿಗೆ ಶ್ರೀಮಂತ ಹುಡುಗನ ಸಂಬಂಧ ನೋಡಿದ ತಂದೆಗೆ, ಕಾರು ಕೊಂಡವನಿಗೆ, ಹೊಸ ಮನೆ ಕಟ್ಟಿದವನಿಗೆ ಅವರದೇ ಆದ ಒತ್ತಡಗಳಿರುತ್ತವೆ, ಆತಂಕಗಳಿರುತ್ತವೆ, ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಯಶಸ್ಸಿನ ಏಣಿಯನ್ನು ಏರುತ್ತಾ ಏರುತ್ತಾ ಹೋದಂತೆಯೇ ನಾನು ಆಯ ತಪ್ಪುತ್ತೇನಾ ಭಯ ಪ್ರತಿಯೊಬ್ಬನಲ್ಲೂ ಕಾಡುತ್ತದೆ. ಆಗೆಲ್ಲ ಅವರು ಏಣಿಯ ಹಿಡಿತವನ್ನು ಗಮನಿಸಬೇಕೇ ಹೊರತು ಕೆಳಗಿದ್ದ ನಿಮ್ಮನಲ್ಲ! ಇನ್ನೂ ಸರಳವಾಗಿ ಹೇಳಬೇಕೆಂದರೆ ನೀವು ಸಂತೆಯಲ್ಲೋ, ಸರ್ಕಸ್ ನಲ್ಲೋ ಈ ಹಗ್ಗದ ಮೇಲೆ ನಡೆಯುವರನ್ನು ಗಮನಿಸಿದ್ದೀರಾ. ಅವರು ನಿಮ್ಮ ಚಪ್ಪಾಳೆ, ಸಿಳ್ಳೆ, ಕೇಕೆ ಯಾವುದನ್ನೂ ಗಮನಿಸದೆ ಕೈಯಲ್ಲಿ ಕೋಲನ್ನು ಹಿಡಿದು ನಡೆಯುತ್ತಾರೆ. ಅಲ್ಲಿ ಅವರಿಗೆ ನಾನು ಮಾತ್ರ ಹಗ್ಗದ ಮೇಲೆ ನಡೆಯುತ್ತಿದ್ದೇನೆ ಎಂಬ ಅಹಂಕಾರ ಇರುವುದಿಲ್ಲ. ಬದಲಿಗೆ ತನ್ನ ನಡಿಗೆಯ ಮೇಲೆ ತಮ್ಮ ಮನಸ್ಸನ್ನ ಕೇಂದ್ರೀಕರಿಸಿರುತ್ತಾರೆ! ನಿಮ್ಮ ಚಪ್ಪಾಳೆಯತ್ತ ತಿರುಗಿದರೆ ಕೆಳಗೆ ಬೀಳುವುದು ನಿಶ್ಚಿತ. ಬದುಕಿನ ಮಗ್ಗಲು ಬದಲಿಸಿದವರ ಕತೆಯೂ ಹೀಗೆಯೇ ಅವರದೂ ಹಗ್ಗದ ಮೇಲಿನ ನಡಿಗೆಯೇ! ಅವರಿಗೆ ಧಿಮಾಕು, ಕೊಬ್ಬು, ಜಂಭ, ದೊಡ್ಡಸ್ತಿಕೆ, ಅಹಂಕಾರ ಅಂತ ನಿಮ್ಮಷ್ಟಕ್ಕೆ ನೀವೇ ಅಂದುಕೊಂಡು ನಿಮ್ಮೊಳಗೆ ನಂಜೇರಿಸಿಕೊಳ್ಳಬೇಡಿ, ಅದರ ಬದಲಾಗಿ ನಿಮ್ಮ ಬದುಕಿನ ಮಗ್ಗಲನ್ನ ಬದಲಿಸಿಕೊಳ್ಳಿ, ಯಶಸ್ಸಿನ ಏಣಿಗೆ ನೀವೇನು ಭಾರವಾಗುವುದಿಲ್ಲ. ಹತ್ತಲು ಪ್ರಯತ್ನಿಸಿ.Small changes ನ ಅನಿವಾರ್ಯತೆ ನಿಮಗೂ ಎದಿರಾಗುತ್ತದೆ. ಈಗ ಜನ ನಿಮ್ಮ ಕುರಿತು ಧಿಮಾಕು, ದೊಡ್ಡ ಜನ ಅಂತ ಮಾತಾಡಿ ಕೊಳ್ಳುತ್ತಿದ್ದಾರಾ… ಜಾಸ್ತಿ ತಲೆ ಕೆಡಿಸಿಕೊಳ್ಳದಿರಿ. ಅಂತಹ ನಂಜುಂಡರು ಗಲ್ಲಿಗೊಬ್ಬರು ಇರುತ್ತಾರೆ. ಅವರ ಕೊಂಕು ಮಾತು ಬದಲಾಗದು! ನೀವು ಗಮನಿಸಿ ನೋಡಿ ಸದಾ ಕುಡಿದು ತೂರಾಡುತ್ತಾ, ಗಲಾಟೆ ಮಾಡುತ್ತಾ ಇದ್ದ ವ್ಯಕ್ತಿಯೊಬ್ಬ ತನ್ನ ಕುಡಿತವನ್ನು ಬಿಟ್ಟು ಶಿಸ್ತಿನಿಂದ ಬದುಕಲು ಶುರು ಮಾಡಿದರೆ ಊಹುಂ ಅವನ ಬಗ್ಗೆ ಊರಲ್ಲಿ ಮಾತಿರುವುದಿಲ್ಲ. ಬದಲಾಗಿದ್ದಾನೆ, ಒಳ್ಳೆಯವನಾಗಿದ್ದಾನೆ ಎಂಬಂತಹ ಮೆಚ್ಚುಗೆಯ ಮಾತು ಕೇಳುವುದಿಲ್ಲ. ಕಾರಣವಿಷ್ಟೆ. ಒಳ್ಳೆಯತನ ಇನ್ನೊಬ್ಬರಲ್ಲಿ ಮತ್ಸರ, ಹೊಟ್ಟೆಗಿಚ್ಚನ್ನ ಹುಟ್ಟು ಹಾಕುವುದಿಲ್ಲ. ಆದರೆ ಯಶಸ್ಸನ್ನು ಬೆನ್ನತ್ತಿದವರ ಬಗ್ಗೆ ಜನಕ್ಕೆ ಗಾಂಧಾರಿಯ ಮಾತ್ಸರ್ಯ! ಆಡಿಕೊಳ್ಳುವವರಿಗೆ ನೀವೊಂದು ಸರಕು.. ಬಿಡಿ. ನಿಜವಾದ ಗೆಳೆಯರು ನೀವು ಏರಿದ ಎತ್ತರವನ್ನು ನೋಡುತ್ತಾ..ಒಳಿತಾಗಲಿ ಎಂದು ಹರಸುತ್ತಾ ಇರುತ್ತಾರೆ. ಅವರನ್ನು ನೀವು ಉಳಿಸಿಕೊಳ್ಳಿ ಅಷ್ಟೇ…







