
ಈ ಪ್ರಶ್ನೆಗಳ ಧಾಳಿಗೆ ಸಿಲುಕುವುದಕ್ಕೆ ಇಂತಹದೇ ವ್ಯಕ್ತಿಗಳಾಗಬೇಕೆಂಬ ನಿಯಮವಿಲ್ಲ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಜನರ ಗುರುತೇ ಸಿಗದ, ಕಣ್ಣು ಕಾಣಿಸದ ಮುದುಕರ ತನಕ ಎಲ್ಲರೂ ಉತ್ತರಿಸುವ ಅನಿವಾರ್ಯತೆಗೆ ಸಿಲುಕಿರುತ್ತಾರೆ. ಇಲ್ಲಿ ಪ್ರಶ್ನೆ ಕೇಳುವವರು ಬುದ್ದಿವಂತರಲ್ಲ, ತಮಾಷೆಯ ಸಂಗತಿ ಎಂದರೆ ನಾವು ಉತ್ತರಿಸಬೇಕಾದ ಅಗತ್ಯವೂ ಇರುವುದಿಲ್ಲ. ಆದರೂ ಆ ಪ್ರಶ್ನೆಗಳು ನಮ್ಮನ್ನು ಕಂಗಾಲಾಗಿಸುತ್ತವೆ! ಬಾಲ್ಯದಲ್ಲಿದ್ದಾಗ ಮನೆಯವರಿಗೆಲ್ಲ ಏನೋ ಒಂದು ನೆಪ ಒಡ್ಡಿ ಶಾಲೆಗೆ ಚಕ್ಕರ್ ಹಾಕಿರುತ್ತೇವೆ. ಪಕ್ಕದ ಮನೆಯವರು ಬಂದು ಏನು ಇವತ್ತು ನಿಮ್ಮ ಮಗ ಶಾಲೆಗೆ ಹೋಗಿಲ್ವಾ? ಅಂತ ಪ್ರಶ್ನೆ ಹಾಕುತ್ತಾರಲ್ಲ ಇದು ಆ ಹುಡುಗನನ್ನು ಬೆಚ್ಚಿ ಬೀಳಿಸುವ ಪ್ರಶ್ನೆ. ವಯಸ್ಸಿಗೆ ಬಂದ ಮಗಳು ಮನೆಯಲ್ಲಿದ್ದಾಳೆ. ಮನೆಯವರಿಗೆ ಅವಳ ಮದುವೆ ಮಾಡಿಬಿಡಬೇಕೆಂಬ ಧಾವಂತ. ನಂಗೆ ಈಗ ಮದುವೆ ಬೇಡ ಅಂತ ಹೇಗೋ ಆಕೆ ಮನೆಯವರನ್ನೆಲ್ಲ ಕನ್ವಿನ್ಸ್ ಮಾಡಿರುತ್ತಾಳೆ. ಆದರೆ ಯಾವುದೋ ಕೆಲಸಕ್ಕೆ ಬಂದ ಬಂಧುವೊಬ್ಬ ಊಟ ಮುಗಿಸಿ ಕುಳಿತು ಏನು ಮಗಳಿಗೆ ಮದುವೆ ಮಾಡಲ್ವಾ? ಒಳ್ಳೆ ಸಂಬಂಧ ನೋಡಿ ಮಾಡಿ ಬಿಡಿ, ಜವಾಬ್ದಾರಿ ಕಳೆದುಕೊಂಡು ಬಿಡೋದು ಒಳ್ಳೆಯದು ಏನಂತೀರಾ? ಅಂತ ಒಂದು ಪ್ರಶ್ನೆ ಹಾಕಿ ಬಿಡುತ್ತಾನೆ. ಅವನ ಪ್ರಶ್ನೆ ಆ ಮನೆಯ ಹುಡುಗಿಯ ನೆಮ್ಮದಿಯನ್ನು ಕಿತ್ತುಕೊಂಡು ಬಿಡುತ್ತದೆ. ಇದು ಅಲ್ಲಿಗೆ ಮುಗಿದು ಹೋಗುವುದಿಲ್ಲ. ಒಂದು ಸಂಬಂಧ ಬಂದು ಹೋದರೆ ಏನಾಯ್ತು? ಒಪ್ಪಿದ್ರಾ..? ಏನಂತೆ..? ಹೀಗೆ ತಲೆಗೊಂದು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈ ಪ್ರಶ್ನೆಗಳ ಪ್ರಹಾರ ಯಾವ ಮಟ್ಟಗಿನವು ಎಂದರೆ ಹುಡುಗಿ, ಮತ್ತವರ ಮನೆಯವರಿಗೆ ಹೇಗಾದರು ಸರಿ, ಯಾವನಿಗಾದರು ಸರಿ ಮದುವೆ ಮಾಡಿ ಮುಗಿಸಬೇಕೆಂಬ ತೀರ್ಮಾನಕ್ಕೆ ಬರುವಂತಾಗುತ್ತದೆ. ಪಿಯುಸಿ ಮುಗಿಸಿದ ಮಕ್ಕಳನ್ನು ಕಾಡುವ ಪ್ರಶ್ನೆ, ನೀನು ಯಾವ ಕೋರ್ಸ್ಗೆ ಸೇರ್ತಿಯಾ? ಥತ್! ಎಲ್ಲಾದ್ರು ಒಂದು ಕಡೆ ಸೇರಿಕೊಂಡ್ರೆ ಸಾಕಪ್ಪ ಅನಿಸಿ ಬಿಡುತ್ತದೆ. ಇನ್ನು ಆಗಷ್ಟೇ ಡಿಗ್ರಿ ಮುಗಿಸಿ ಭವಿಷ್ಯದ ಕನಸು ಕಾಣುವ ಹುಡುಗರ ಯಾತನೆ ದೇವರಿಗೇ ಪ್ರೀತಿ. ಎಜುಕೇಷನ್ ಮುಂದುವರಿಸಬೇಕಾ? ಕೆಲಸ ಹುಡುಕಬೇಕಾ ಅನ್ನೋ ಗೊಂದಲದಲ್ಲಿದ್ದಾಗಲೇ ಶುರು. ಏನ್ ಮಾಡ್ತೀಯಾ ಮುಂದೆ? ಹಾಳಾಗಿ ಹೋಗ್ಲಿ ಅಂತ ನೀವೇನಾದ್ರು ಕೆಲ್ಸಕ್ಕೆ ಟ್ರೈ ಮಾಡ್ತಿದ್ದೀನಿ ಅಂದ್ರೋ… ನಾಳೆಯಿಂದ ಹೊಸ ಪ್ರಶ್ನೆ ಎಲ್ಲೂ ಸಿಕ್ಕಿಲ್ವಾ? ನಂಗೆ ಆಶ್ಚರ್ಯ ಆಗೋದು ಅಂದ್ರೆ ರ್ಯಾಂಕ್ ಗಳಿಸಿಕೊಂಡಿರೋ ಹುಡುಗರಿಗೂ ಕೂಡ ಎದುರು ಮನೆಯ ಹೆಂಗಸಿನ ಪ್ರಶ್ನೆಗೆ ಉತ್ತರಿಸಲು ಆಗುವುದಿಲ್ಲ. ತುಂಬಾ ಓದಿಕೊಂಡು, ಕಾಲೇಜಿಗೆ ಫಸ್ಟ್ ಬಂದಿರೋ ಹುಡುಗರು ಯಾರೋ ಕೆಲಸಕ್ಕೆ ಬಾರದ ಪ್ರಶ್ನೆ ಕೇಳಿದ್ದಕ್ಕೆ ತತ್ತರಿಸುತ್ತಾರೆ. ಖಿನ್ನರಾಗುತ್ತಾರೆ. ದುರಂತ ಅಂದ್ರೆ ಏನು ಗೊತ್ತಾ..? ತಮ್ಮ ಮಗ/ಮಗಳು ಬುದ್ದಿವಂತರು ಅಂತ ಗೊತ್ತಿರೋ ತಂದೆ ತಾಯಿಗಳು ಕೂಡ ಮಕ್ಕಳಿಗೆ ಆತ್ಮ ಸ್ಥೈರ್ಯ ತುಂಬೋ ಬದಲು ಅಕ್ಕಪಕ್ಕದವರ ಪ್ರಶ್ನೆಗೆ ಬೇಸತ್ತು. ಏನಾದ್ರು ಒಂದು ಮಾಡಿ ಬಿಡು ಅಂತ ಒತ್ತಡ ಹಾಕಲು ಶುರು ಮಾಡುತ್ತಾರೆ! ಡಿಯರ್ ಫ್ರೆಂಡ್ಸ್ ಬೀ ಕೂಲ್. ಯಾರೋ ಪ್ರಶ್ನೆ ಕೇಳ್ತಾರೆ ಅಂತ ನೀವು ತಲೆ ಕೆಡಿಸ್ಕೋಬೇಡಿ. ಪ್ರಶ್ನೆ ಕೇಳಿದವರಿಗೆ ನಿಮ್ಮ ಬಗ್ಗೆ ಕಾಳಜಿ ಇರುವುದಿಲ್ಲ. ಕೆಲವು ಸಲ ಕುತೂಹಲವೂ ಇರುವುದಿಲ್ಲ. ಅದು ಲೋಕಾಭಿರಾಮ ಮಾತು ಅಷ್ಟೆ. ಊಟದ ಟೈಂಗೆ ಊಟ ಆಯ್ತಾ, ಕಛೇರಿಗೆ ಹೊರಟವರನ್ನ ಆಫೀಸಿಗೆ ಹೊರಟಿದ್ದಾ… ಭಾನುವಾರ ಮನೇಲಿದ್ದಾಗ ಬಂದಾ.. ಇವತ್ತು ರಜೇನಾ ಅಂತ ಮಾತಾಡ್ತರಲ್ಲ ಇದು ಕೂಡ ಹಾಗೆಯೇ.. ಒಂದು ಉದಾಹರಣೆ ಕೊಡ್ತೀನಿ ನೋಡಿ. ನೀವು ಆಸ್ಪತ್ರೆಯಲ್ಲಿದ್ದಾಗ ಏನು ಹುಶಾರಿಲ್ಲ,, ಓಹ್ ಹೌದಾ… ಛೇ.. ರೆಸ್ಟ್ ಮಾಡಿ… ಅಂತ ಪ್ರಶ್ನೆ ಕೇಳಿ ಸಲಹೆ ಕೊಟ್ಟು ಹೋಗಿರೋ ವ್ಯಕ್ತಿಗೆ ಮರುದಿನ ನೀವು ಚಪ್ಪಲಿ ಅಂಗಡೀಲಿ ಸಿಕ್ಕರೆ ಆತ ನಿಮ್ಮ ಆರೋಗ್ಯ ವಿಚಾರಿಸುವ ಬದಲು ಏನು ಹೊಸ ಚಪ್ಪಲಿ ತಗೋಳ್ಳೋಕೆ ಬಂದ್ರಾ.. ಅಂತ ಹೊಸ ಪ್ರಶ್ನೆ ಎಸೆದು ಬಿಡುತ್ತಾನೆ. ಬಹುಶಃ ಈಗ ನಿಮಗೆ ಅರ್ಥವಾಗಿರಬೇಕಲ್ಲ. ಪ್ರಶ್ನೆ ಕೇಳುವವರ ಮನಸ್ಥಿತಿ. ಅದಿಕ್ಕೆ ಹೇಳ್ತಾ ಇದೀನಿ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಕೈಗೊಂದು ಉದ್ಯೋಗ ಕೊಡುವವನು ನಿಮ್ಮನ್ನು ಕೇಳುವ ಪ್ರಶ್ನೆಗೆ ಉತ್ತರಿಸಲು ಸಿದ್ಧರಾಗಿ ಗೆದ್ದು ಬನ್ನಿ. ನಿಮ್ಮ ಬಗ್ಗೆ ಮತ್ತೊಂದು ಪ್ರಶ್ನೆ ಹುಟ್ಟಿಕೊಂಡಿರುತ್ತದೆ. ಇದೆಲ್ಲಾ ಹೇಗಾಯ್ತು? ಗೆದ್ದು ಬಂದ ನಿಮಗೆ ನಾನು ಕಾಫಿ ಕೊಟ್ಟು ಚಿಯರ್ಸ್ ಹೇಳುತ್ತೇನೆ.. ಸಿದ್ದರಾಗಿ ಗೆದ್ದು ಬನ್ನಿ ಆಗ ಮತ್ತೊಂದು ಪ್ರಶ್ನೆ ನಿಮಗಾಗಿ ಕಾಯುತ್ತಾ ಇರುತ್ತದೆ! ಇದೆಲ್ಲಾ ಹೇಗಾಯಿತು??? ನಕ್ಕು ಮುಂದಕ್ಕೆ ಸಾಗುತ್ತಿರಬೇಕು. ಅಷ್ಟೇ! ಉತ್ತರಿಸುವ ಅನಿವಾರ್ಯತೆಗೆ ಸಿಲುಕಿರುತ್ತಾರೆ.






