
ಮೊನ್ನೆ ಯಾರೋ ಮಾತಾಡುವಾಗ ಹೇಳ್ತಾ ಇದ್ರು ಈ ಮೊಬೈಲ್ ಟವರ್ ನಿರ್ಮಾಣ ಆದ ನಂತರ ಗುಬ್ಬಿಗಳು ಕಣ್ಮರೆಯಾಗಿವೆ ಅಂತ. ಅದು ನಿಜವು ಹೌದು. ನಮ್ಮ ಶೃಂಗೇರಿಯ ಕಟ್ಟೆಬಾಗಿಲು ಬಸ್ ನಿಲ್ದಾಣದಲ್ಲಿ ಈ ಶಾರದಾ ಗಾರ್ಮೆಂಟ್ಸ್ ಇರುವಲ್ಲೊಂದು ಅಕ್ಕಿ ಅಂಗಡಿ ಇತ್ತು. ನಾವು ಶಾಲೆಗೆ ಹೋಗುವಾಗೆಲ್ಲ ಅಲ್ಲೊಬ್ಬರು ಬಿಳಿ ಶರ್ಟ್ ಹಾಕಿಕೊಂಡ ತಾತ ಒಬ್ಬರು ಕುಳಿತಿರುತ್ತಿದ್ದರು. ಅವರ ಅಂಗಡಿಯ ಗಿರಾಕಿಗಳು ಅಂದರೆ ಗುಬ್ಬಿಗಳೇ! ಒಂದು ಕೋಲಿನಿಂದ ಅವುಗಳನ್ನು ಹೆದರಿಸುತ್ತಿದ್ದರು. ಆದರೆ ಅವುಗಳಿಗೆ ತೀರಾ ಭಯವಿದ್ದಂತೆ ಕಾಣಿಸುತ್ತಿರಲಿಲ್ಲ. ಅಲ್ಲೇ ಮಾಡಿನಲ್ಲಿರೋ ಗೂಡಿನೊಳಕ್ಕೆ ಹೋಗಿ ಬರುತ್ತಿದ್ದವು. ಆದರೆ ಈಗ ಅಲ್ಲಿ ಹಂಚಿನ ಮಹಡಿಯೂ ಇಲ್ಲ, ಗುಬ್ಬಿಚ್ಚಿಯೂ ಇಲ್ಲ. ಈಗ ಪಟ್ಟಣದ ಬಹುತೇಕ ಕಟ್ಟಡಗಳು ಕಾಂಕ್ರೀಟಿಕರಣಗೊಂಡಿವೆ. ಬಹುಶಃ ಗುಬ್ಬಿಗಳ ಕಣ್ಮರೆಗೆ ಇದೂ ಒಂದು ಕಾರಣವಿರಬಹುದು. ಆದರೆ ನಾನು ಹೇಳಹೊರಟಿರುವುದು ಗುಬ್ಬಿ ಕತೆಯಲ್ಲ. ಆಧುನಿಕತೆಯಲ್ಲಿ ಕೊಚ್ಚಿ ಹೋಗುತ್ತಿರುವ ಭಾವನಾತ್ಮಕ ಸಂಬಂಧಗಳ ಕುರಿತು. ತುಂಬಾ ಹಳೆಯ ಮಾತೇನಲ್ಲ.. ಈ ಬಗ್ಗೆ ಒಂದು ಹತ್ತು ವರ್ಷದ ಹಿಂದೆ ಆದ ಮದುವೆಗಳು ನಿಮಗೆ ನೆನಪಿದೆಯಾ? ಮದುವೆಯ ದಿನಕ್ಕೆ ವಾರಕ್ಕೂ ಮೊದಲು ಇಡೀ ಊರಿನಲ್ಲೊಂದು ಸಂಭ್ರಮವಿರುತ್ತಿತ್ತು. ಮನೆ ತುಂಬಾ ಬಂಧು ಬಳಗ, ಶಾಸ್ತ್ರ ಸಂಪ್ರದಾಯಗಳು. ಅಲ್ಲಿ ಹಾಸ್ಯ, ಲೇವಡಿ ಅಬ್ಬಾ ಅದೆಂಥಹ ಸಂಭ್ರಮ. ಮದುವೆಯ ದಿನ ಸೋದರ ಮಾವ ತನ್ನ ಸೊಸೆಯ ಕೈ ಹಿಡಿದು ಕನ್ಯಾದಾನ ಮಾಡುವ ಸನ್ನಿವೇಶಕ್ಕೆ ಹೆಣ್ಣಿನ ತವರೂರ ಕಡೆಯವರ ಕಣ್ಣು ತುಂಬಿ ಬಂದಿರುತ್ತಿತ್ತು, ಹೆತ್ತವರ ಹೃದಯ ಭಾರ ಭಾರ… ಇನ್ನು ಶಾಸ್ತ್ರ ಮುಗಿದು ಹೊರಟು ನಿಂತ ಹುಡುಗಿಯ ಕಣ್ಣಲ್ಲಿ ಜಲಧಾರೆ! ಮನೆಯಲ್ಲಿ ಸದಾ ಅಕ್ಕನೊಂದಿಗೆ ಕಿತ್ತಾಡುತ್ತಿದ್ದ ತಮ್ಮ ಛತ್ರದ ಗೋಡೆಗೆ ಮುಖವಿಟ್ಟು ಬಿಕ್ಕುತ್ತಿದ್ದನು. ಒಂದು ಜವಾಬ್ದಾರಿ ಮುಗಿಸಿದ ತಂದೆಯ ಗಂಟಲು ಉಬ್ಬಿ ಬಂದಿರುತ್ತಿತ್ತು… ಆದರೆ ಕಾಲ ಬದಲಾಯಿತು. ಗಂಡನೊಂದಿಗೆ ನಗುತ್ತಾ ಕೈಬೀಸಿ ಹುಡುಗಿ ಹೊರಟು ಬಿಡುತ್ತಾಳೆ. ಅದಿಕ್ಕು ಮುಂಚೆಯೇ ಬಂಧುಗಳು ಊಟ ಮುಗಿಸಿ ಮನೆ ದಾರಿ ಹಿಡಿದಿರುತ್ತಾರೆ. ಮದುವೆ ಎನ್ನುವುದು ಒಂದು ಕಾರ್ಯಕ್ರಮದಂತೆ ಮುಗಿದು ಹೋಗುತ್ತದೆ. ಊರಿಗೆ ಸಂಭ್ರಮವಿರುವ ಮಾತು ಹಾಗಿರಲಿ ಹೆಚ್ಚಿನ ಸಲ ಮನೆಯಲ್ಲಿಯೇ ಮದುವೆಯ ಕಳೆ ಇರುವುದಿಲ್ಲ. ಇದನ್ನು ನೀವು ಕಾಲದ ಮಹಿಮೆ ಎನ್ನುತ್ತಿರೋ, ಮುಂದುವರೆದಿದೆ ಅನ್ನುತ್ತಿರೋ ಆದರೆ ನಾನು ಮಾತ್ರ ನಮ್ಮೊಳಗಿನ ಭಾವನಾತ್ಮಕ ಸಂವೇದನೆ ಸತ್ತು ಹೋಗುತ್ತಿದೆ ಅಂತಲೇ ಹೇಳುತ್ತೇನೆ. ಇವತ್ತು ನಾವು ಯಾಂತ್ರಿಕ ಬದುಕಿನೊಳಕ್ಕೆ ಸಿಲುಕಿದ್ದೇವೆ, ತೀರಾ ಯಾವ ಮಟ್ಟಿಗೆ ಎಂದರೆ ನಮ್ಮ ನೆರೆಮನೆಯವರೂ ಕೂಡ ನಮಗೆ ಅಪರಿಚಿತರೇ. ಹಿಂದಿನ ಕಾಲದಲ್ಲಿ ಊರಿನ ಮನೆಯ ಜಗುಲಿಯ ಮೇಲೆ ಕಂಬಳ ಹಾಸಿ ಪಗಡೆ, ಚನ್ನೆಯಾಟ ಆಡುತ್ತಾ ಊರಿನ ಮಂದಿ ಹರಟೆ ಹೊಡೆಯುತ್ತಾ ಕುಳಿತಿರುವ ಚಿತ್ರಣ ಈಗ ಕಣ್ಮರೆಯಾಗಿವೆ. ಅಷ್ಟೇಕೆ ಮನೆಯ ಮುಂದಿನ ಹಜಾರವೇ ಕಣ್ಮರೆಯಾಗಿದೆ. ನಿಜ, ಬದಲಾವಣೆ ಅನಿವಾರ್ಯ ಮತ್ತು ಅಗತ್ಯ. ಆಧುನಿಕತೆ ಬೆಳೆದು ಬಿಟ್ಟಿದೆ. ನಾನು ಕೂಡ ಅದರಿಂದ ಹೊರತಾಗಿಲ್ಲ. ಆದರೆ ನಮ್ಮೊಳಗಿನ ಮನಸ್ಸು ಹೀಗೇಕಾಗಿದೆ? ಭಾವನೆಗಳಿಗೇಕೆ ತುಕ್ಕು ಹಿಡಿಯುತ್ತಿದೆ? ಊರಿನ ಬಗ್ಗೆ, ಆಚರಣೆಗಳ ಬಗ್ಗೆ, ನೆರಮನೆಯ ಬಗ್ಗೆ, ನಮ್ಮದೇ ಬಂಧುಗಳ ಬಗ್ಗೆ, ಉತ್ಸವಗಳ ಬಗ್ಗೆ, ಹಬ್ಬಗಳ ಬಗ್ಗೆ ನಮಗಾವ ಸೆಂಟಿಮೆಂಟುಗಳು ಇಲ್ಲ, ಆಟಾಚ್ಮೆಂಟುಗಳೂ ಇಲ್ಲ. ನಮ್ಮ ಮನಸ್ಥಿತಿ ಹೀಗೇಕೆ ಬದಲಾಗುತ್ತಿದೆ? ಇದರಿಂದ ನಾವು ಕಳೆದುಕೊಳ್ಳುತ್ತಿರುವ ಬಾಂಧವ್ಯದ ಬಗ್ಗೆ, ಅಕ್ಕರೆಯ ಬಗ್ಗೆ ಆತ್ಮ ಸಂತೋಷದ ಬಗ್ಗೆ ನಾವೇಕೆ ಯೋಚಿಸುತ್ತಿಲ್ಲ. ನಮ್ಮ ಬದುಕಿನುದ್ದಕ್ಕೂ ಅಚ್ಚಳಿಯದೇ ನೆನಪಿನಲ್ಲಿ ಉಳಿಯಬಹುದಾದ ಕೆಲವು ಸಣ್ಣ ಪುಟ್ಟ ಸಂಗತಿಗಳನ್ನು ನಾವು ಕಡೆಗಣಿಸುತ್ತಿದ್ದೆವಲ್ಲ… ಖಂಡಿತವಾಗಿಯೂ ಇದರ ಪರಿಣಾಮವನ್ನು ನಾವು ಮುಂದೆ ಎದುರಿಸಬೇಕಿದೆ. ಅಯ್ಯೋ ಬಿಡಿ ಸಾರ್ ಎಲ್ಲವು ಬದಲಾಗಿದೆ ಅಂತ ರಾಗ ಎಳೆಯಬೇಡಿ. ಒಬ್ಬ ಹುಡುಗಿ ಒಂದಿಬ್ಬರು ಹುಡುಗರನ್ನು ತನ್ನ ಮನೆಗೆ ಕರೆದುಕೊಂಡು ಹೋಗಲಿ. ಆ ಊರಿನ ಹೆಂಗಸರ ಬಾಯಲ್ಲಿ ಗುಸುಗುಸು ಪಿಸುಪಿಸು ಶುರುವಾಗಿರುತ್ತದೆ. ಇದು ಆಗಲೂ ಇತ್ತು ಈಗಲೂ ಇದೆ ಮುಂದೆಯೂ ಇರುತ್ತದೆ… ಈಗ ನೀವೇ ನಿರ್ಧರಿಸಿ, ಯಾವುದು ಬದಲಾಗಿದೆ? ನಾವೋ.. ಕಾಲವೋ.. ಮನಸ್ಥಿತಿಯೋ.. ವರ್ತನೆಯೋ..?







