
” ನೀವು ಗಂಡಸರಿಗೆ ಹೆಂಗಸರನ್ನ ಡಾಮಿನೇಟ್ ಮಾಡೋದ್ರಿಂದ ಏನು ಸಿಗುತ್ತೆ” ಇತ್ತೀಚೆಗೆ ಅಪರೂಪಕ್ಕೆ ಸಿಕ್ಕ ಗೆಳತಿ ಒಬ್ಬಳನ್ನು ಕೆಫೆಯಲ್ಲಿ ಭೇಟಿಯಾಗಿದ್ದೆ. ಆಕೆಯ ಜೊತೆ ಬಂದಿದ್ದ ಅವಳ ಗೆಳತಿ ನನ್ನ ಕೇಳಿದ ಪ್ರಶ್ನೆ ಅದು. ಅವಳೊಂದಿಗೆ ನನ್ನ ಮೊದಲ ಭೇಟಿ ಅದು. ಆಗಲೇ ಅವಳು ಇಂತಹ ಒಂದು ಆರೋಪ ಮಾಡುತ್ತಿದ್ದಾಳೆ ಎಂಬುದು ಆಕೆಗೆ ಪುರುಷರೊಂದಿಗೆ ಯಾವುದೋ ಅಸಮಾಧಾನವಿದೆ ಎಂದು ಅರ್ಥವಾಯಿತು. ನಂತರ ನನ್ನ ಗೆಳತಿಯಿಂದ ತಿಳಿದ ವಿಷಯ.. ಆಕೆಯದು ನಾಲ್ಕು ವರ್ಷದ ಪ್ರೇಮ, ಮದುವೆಯ ನಂತರ ಮುರಿದು ಬಿದ್ದಿದೆ! ಮದುವೆಗೂ ಮುನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹುಡುಗ, ಮದುವೆಯ ನಂತರ ಬದಲಾಗಿದ್ದ! ಇವಳು ಯಾರೊಂದಿಗೂ ಮಾತನಾಡುವಂತಿಲ್ಲ, ಪ್ರೀತಿ ಕಾಳಜಿ ಇರಬೇಕಾದ ಜಾಗದಲ್ಲಿ ಅಧಿಕಾರ ಚಲಾಯಿಸುವಿಕೆ, ಅನುಮಾನ ತುಂಬಿಕೊಂಡಿತ್ತು. ಎದೆಯ ಗೂಡಿನಲ್ಲಿ ಬಚ್ಚಿಟ್ಟು ಸಲಹುತ್ತಾನೆ ಎಂದುಕೊಂಡ ಹುಡುಗಿಗೆ ತನ್ನ ಹುಡುಗನ ಬದಲಾವಣೆ ಆಘಾತ ತಂದಿದೆ. ಇನ್ನೂ ನನ್ ಕೈಯಲ್ಲಿ ಆಗಲ್ಲ ಅಂತ ಲಗೇಜ್ ಸಮೇತ ವಾಪಸ್ಸು ಬಂದಿದ್ದಾಳೆ. ಇದರಲ್ಲಿ ಆಶ್ಚರ್ಯವೇನು ಇಲ್ಲ. ಇತ್ತೀಚಿನ ದಿನಗಳಲ್ಲಿ ಮದುವೆಗಳು ಮುರಿದು ಬೀಳುವುದು ಸಾಮಾನ್ಯ ಎನಿಸಿದೆ. ‘ಕುಟುಂಬ’ ವ್ಯಾಪ್ತಿಯಿಂದ ಹೊರಗುಳಿದ ಹುಡುಗ ಹುಡುಗಿಯರು ತಮ್ಮ ಮದುವೆಯನ್ನೂ ಸರ್ಟಿಫಿಕೇಟ್ ನಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿರುತ್ತಾರೆಯೇ ಹೊರತು ತನು-ಮನದಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿರುವುದಿಲ್ಲ. ಹಾಗಾಗಿ ಹುಡುಗನಿಗೆ ಹೋದರೆ ಹೋಗಲೀ ಅನ್ನೋ ಅಹಂ. ಹುಡುಗಿಗೆ ಡೋಂಟ್ ಕೇರ್ ಎಂಬ ಈಗೋ. ಹಾಗಾಗಿ ಪರಸ್ಪರ ದೂರವಾಗುವ ಕುರಿತು ಯಾವುದೇ ವಿಶೇಷತೆ ಇಲ್ಲ! ಅದಿರಲಿ… ಈ ಹುಡುಗಿ ಯಾಕೆ ಪುರುಷ ದ್ವೇಷಿಯಾಗಿದ್ದಾಳೆ ಎಂದುಕೊಂಡರೆ ಆ ಹುಡುಗ ಪ್ರೀತಿಸುವಾಗ ಯಾವುದೇ ಕಂಡೀಶನ್ ಇಲ್ಲದೆ ಒಪ್ಪಿಕೊಂಡಿದ್ದ. ಆದರೆ ಅಸಲಿ ಸಮಸ್ಯೆ ಶುರುವಾಗಿದ್ದು ಮದುವೆಯ ನಂತರ, ಯಾವ ಸ್ನೇಹಿತರೊಂದಿಗೆ ಮಾತಾಡುವಂತಿಲ್ಲ, ಆಗಾಗ ಫೋನ್ ಚೆಕ್ಕಿಂಗ್, ಎಲ್ಲಿಗಾದರೂ ಹೋದರೆ ವಿಡಿಯೋ ಕಾಲ್ ಮಾಡಿ ಜೊತೆಗೆ ಯಾರಿದ್ದಾರೆ ಅಂತ ಹಿಂಸೆ. ಇದು ಆಕೆಗೆ ಉಸಿರು ಕಟ್ಟಿಸಿದೆ. ನಿನ್ನ ಸಹವಾಸ ಸಾಕು ಅಂತ ಬಂದಿದ್ದಾಳೆ. ಅವನ ವರ್ತನೆ ಅವಳಲ್ಲೊಂದು ಪುರುಷ ತಿರಸ್ಕಾರವನ್ನು ಹುಟ್ಟು ಹಾಕಿದೆ. ಆದರೆ, ನಾಲ್ಕು ವರ್ಷದ ಪ್ರೀತಿ? ಪರಸ್ಪರ ಅರ್ಥ ಮಾಡಿಕೊಂಡಿಲ್ವಾ ಅನ್ನೋ ಪ್ರಶ್ನೆ ಮೂಡುವುದು ಸಹಜ ಅಥವಾ ಅವನು ಮದುವೆಯ ನಂತರವೇ ಹೀಗೆ ಬದಲಾಗಿದ್ದಾನಾ….. ಊಹುಂ. ಅವನು ಮೊದಲಿನಿಂದಲೂ ಹೀಗೆ ಇದ್ದ, ಈ ಹುಡುಗಿ ಅರಿತುಕೊಳ್ಳುವುದರಲ್ಲಿ ಎಡವಿದ್ದಾಳೆ! ನಮ್ಮಲ್ಲಿ ಕೆಲವರಿಗೆ ದಕ್ಕಿಸಿಕೊಂಡಿದ್ದನ್ನು ಉಳಿಸಿಕೊಳ್ಳಲು ಗೊತ್ತಿಲ್ಲ. ಆ ಹುಡುಗಿ ಬಿದ್ರೆ ಬೀಳಲಿ ಅಂತ ಒಂದು ಕಲ್ಲೆಸಿದಿದ್ದಾನೆ. ಈ ಹುಡುಗಿ ಒಪ್ಪಿಕೊಂಡಿದ್ದಾಳೆ. ಅನಿರೀಕ್ಷಿತವಾಗಿ ಒಲಿದ ಹುಡುಗಿಯನ್ನು ಉಳಿಸಿಕೊಳ್ಳುವ ಕಲೆ ಅವನಿಗೆ ಗೊತ್ತಿಲ್ಲ! ಒಲಿದ ತಕ್ಷಣವೇ ನೀನು ಹಾಗಿಲ್ಲ, ಹೀಗಿಲ್ಲ, ಆ ಡ್ರೆಸ್ ಯಾಕೆ ? ಅವನ ಜೊತೆ ಏನು ಮಾತು ಎನ್ನುವ ಆಕ್ಷೇಪಗಳು ಶುರುವಾಗಿರುತ್ತವೆ. ಈ ಮೂರ್ಖ ಹುಡುಗಿಯರು ಅದನ್ನ ಪೊಸ್ಸೆಸ್ಸಿವ್ ಅಂದುಕೊಂಡು ಖುಷಿಪಟ್ಟಿರುತ್ತಾರೆ. ಆಗಲೇ ಎಚ್ಚೆತ್ತುಕೊಂಡಿದ್ದರೆ ಮದುವೆ ತನಕ ಹೋಗುತ್ತಲೇ ಇರಲಿಲ್ಲ. ಹುಡುಗನಾದರೂ ಅಷ್ಟೇ… ಪ್ರೀತಿಸುವುದು ಅಂದ್ರೆ ಬಂಧಿಸುವುದು ಎಂಬಂತೆ ವರ್ತಿಸಬಾರದು. ಯಾರದೋ ಸ್ವಾತಂತ್ರ್ಯವನ್ನು ಇಟ್ಟುಕೊಳ್ಳುವುದಲ್ಲ. ಬದಲಾಗಿ ಪರಸ್ಪರ ಗೌರವಿಸುವುದು, ಏನಂತೀರಾ…..?







