
ಬೆಂಗಳೂರು : ಹಾಲಿನ ಮಾರಾಟ ದರ ಏರಿಕೆ ಮಾಡಿದರೂ ರಾಜ್ಯದ 28.84 ಲಕ್ಷ ಹೈನುಗಾರರಿಗೆ ಕಳೆದ ಆಗಸ್ಟ್ನಿಂದ ಪ್ರೋತ್ಸಾಹಧನ ಪಾವತಿಸದೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ರಾಜ್ಯದ ಹೈನುಗಾರರಿಗೆ ಬರೋಬ್ಬರಿ ₹486 ಕೋಟಿ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿರುವ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶು ಆಹಾರ, ಹಸಿರು ಮೇವು ಹಾಗೂ ಔಷಧಗಳ ಬೆಲೆ ಏರಿಕೆಯಿಂದ ಹೈನುಗಾರರು ಸಂಕಷ್ಟ ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಪ್ರೋತ್ಸಾಹಧನ ಬಿಡುಗಡೆ ಮಾಡದಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ₹56.1 ಕೋಟಿ, ಹಾಸನದಲ್ಲಿ ₹54.3 ಕೋಟಿ, ತುಮಕೂರಿನಲ್ಲಿ ₹53 ಕೋಟಿ, ಮೈಸೂರಿನಲ್ಲಿ ₹49.1 ಕೋಟಿ ಹಾಗೂ ರಾಮನಗರದಲ್ಲಿ ₹44 ಕೋಟಿ ಸೇರಿದಂತೆ ವಿವಿಧ ಜಿಲ್ಲೆಗಳ ಹೈನುಗಾರರಿಗೆ ಪ್ರೋತ್ಸಾಹಧನ ಬಾಕಿ ಉಳಿದಿದೆ ಎಂದು ತಿಳಿಸಿದ್ದಾರೆ. ಆಧಾರ್ ಜೋಡಣೆ ಮತ್ತು ಇ-ಕೆವೈಸಿ ನೆಪದಲ್ಲಿ ಹಣ ಪಾವತಿ ವಿಳಂಬ ಮಾಡಲಾಗುತ್ತಿದೆಯೇ ಅಥವಾ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯನ್ನು ಸರಿದೂಗಿಸಲು ರೈತರ ಪ್ರೋತ್ಸಾಹಧನ ತಡೆಹಿಡಿಯಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾಲಿನ ದರ ಏರಿಕೆಯ ಲೆಕ್ಕ ನೀಡುವುದರ ಜೊತೆಗೆ ಬಾಕಿ ಇರುವ ₹486 ಕೋಟಿ ಪ್ರೋತ್ಸಾಹಧನವನ್ನು ತಕ್ಷಣವೇ ಹೈನುಗಾರರ ಖಾತೆಗೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.




