
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಒಂಟಿ ಸಲಗ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಚುರುಕುಗೊಂಡಿದ್ದು, ಚಿಕ್ಕಮಗಳೂರು ತಾಲೂಕಿನ ದಂಬದಹಳ್ಳಿ ಕೋರೆ ಬಳಿ ಕಾರ್ಯಾಚರಣೆ ಮುಂದುವರಿದಿದೆ. ಸುಮಾರು 20 ವರ್ಷದ ಒಂಟಿ ಸಲಗದ ಚಲನವಲನವನ್ನು ಡ್ರೋನ್ ಕ್ಯಾಮರಾದ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆಹಚ್ಚಿದ್ದು, ಕಾಡಿನ ಪೊದೆಯೊಳಗೆ ಸೇರಿಕೊಂಡಿರುವ ಆನೆ ಹೊರಬರುವುದನ್ನೇ ಸಿಬ್ಬಂದಿ ಕಾಯುತ್ತಿದ್ದಾರೆ. ಮತ್ತಾವರ, ದಂಬದಹಳ್ಳಿ ಹಾಗೂ ನಲ್ಲೂರು ಸುತ್ತಮುತ್ತಲಿನ ಜನರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದ್ದು, ತೋಟಗಳಿಗೆ ಕೆಲಸಕ್ಕೆ ತೆರಳದಂತೆ ಮೈಕ್ ಮೂಲಕ ಅನೌನ್ಸ್ ಮಾಡಲಾಗಿದೆ. ಅರವಳಿಕೆ ತಜ್ಞರಾದ ರಮೇಶ್, ವಾಸೀಮ್, ಆದರ್ಶ್ ಹಾಗೂ ವಿನಾಯಕ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಒಂದೆಡೆ ನಿಲ್ಲದೆ ಕಾಡಿನಲ್ಲೇ ಅಲೆದಾಡುತ್ತಿರುವ ಪುಂಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದ್ದು, ಆನೆ ಪೊದೆಯಿಂದ ಹೊರಬರುತ್ತಿದ್ದಂತೆ ಅರವಳಿಕೆ ತಜ್ಞರು ಡಾಟ್ ಮಾಡುವ ಮೂಲಕ ಸೆರೆಹಿಡಿಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಾಫಿನಾಡಿನಲ್ಲಿ ಒಂಟಿ ಸಲಗದ ಕಾರ್ಯಾಚರಣೆ ತೀವ್ರಗೊಂಡಿದೆ.




