ಚಿಕ್ಕಮಗಳೂರು: ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 527 ವೀರ ಯೋಧರ ಸ್ಮರಣಾರ್ಥ ವಿಶೇಷ ಪಾದಯಾತ್ರೆಯೊಂದು ಗಮನ ಸೆಳೆದಿದೆ. ಚಿಕ್ಕಮಗಳೂರು ಮತ್ತು ಮಂಗಳೂರು ಜಿಲ್ಲೆಯ ಗಡಿ ಗ್ರಾಮವಾದ ಕೊಟ್ಟಿಗೆಹಾರದಿಂದ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದವರೆಗೆ ಸುರೇಶ್ ಕುಮಾರ್ ಅವರು ಪಾದಯಾತ್ರೆ ಕೈಗೊಂಡಿದ್ದಾರೆ. ಚಾರ್ಮಾಡಿ ಘಾಟ್ ಮೂಲಕ ಸುಮಾರು 30 ಕಿಲೋಮೀಟರ್ ದೂರ ಪಾದಯಾತ್ರೆ ನಡೆಸಿ ಮುಂಡಾಜೆ ಗ್ರಾಮ ತಲುಪಲಿರುವ ಅವರು, ಅಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 527 ಯೋಧರ ಸ್ಮರಣಾರ್ಥ 527 ವಿವಿಧ ಜಾತಿಯ ಮರಗಳನ್ನು ಬೆಳೆಸಿ ನಿರ್ಮಿಸಿರುವ ‘ಕಾರ್ಗಿಲ್ ಸ್ಮಾರಕ ವನ’ಕ್ಕೆ ಗೌರವ ನಮನ ಸಲ್ಲಿಸಲಿದ್ದಾರೆ. ಬೆಳ್ತಂಗಡಿ ತಾಲೂಕಿನ ಸಚಿನ್ ಎಂಬ ಪರಿಸರ ಪ್ರೇಮಿಯೊಬ್ಬರು ಈ ವಿಶಿಷ್ಟ ಸ್ಮಾರಕ ವನವನ್ನು ನಿರ್ಮಿಸಿದ್ದು, ಪರಿಸರ ಸಂರಕ್ಷಣೆಯ ಜೊತೆಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸುವ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸೈಕ್ಲಿಂಗ್ ಮೂಲಕ ಬಂದಿದ್ದ ಸಂದರ್ಭದಲ್ಲಿ ಸುರೇಶ್ ಕುಮಾರ್ ಅವರಿಗೆ ಈ ಸ್ಮಾರಕ ವನದ ಪರಿಚಯವಾಗಿತ್ತು. 527 ಹುತಾತ್ಮ ಯೋಧರ ನೆನಪಿಗಾಗಿ 527 ಮರಗಳನ್ನು ಬೆಳೆಸಿರುವ ಸಚಿನ್ ಅವರ ಅಪರೂಪದ ಕಾರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಅವರನ್ನು ಅಭಿನಂದಿಸುವ ಉದ್ದೇಶದಿಂದ ಸುರೇಶ್ ಕುಮಾರ್ ಈ ಪಾದಯಾತ್ರೆ ಕೈಗೊಂಡಿದ್ದಾರೆ. ದೇಶಭಕ್ತಿಯ ಭಾವನೆಯೊಂದಿಗೆ ಪರಿಸರ ಸಂರಕ್ಷಣೆಯ ಸಂದೇಶ ಸಾರುತ್ತಿರುವ ಈ ಪಾದಯಾತ್ರೆ ವಿಶೇಷ ಗಮನ ಸೆಳೆದಿದೆ.
