
ನಿಮಗೆ ಯಾವಾತ್ತಾದರು ಇಂತಹ ಅನುಭವವಾಗಿದೆಯಾ? ತುಂಬಾ ನಿರೀಕ್ಷೆ ಇಟ್ಟುಕೊಂಡು ಮಾಡಿದ ಪ್ರಯತ್ನದಲ್ಲಿ ಸೋತು ಬಿಟ್ಟಿರುತ್ತೇವೆ. ಸೋಲು ಕಣ್ಣ ಮುಂದೆಯೇ ಇರುತ್ತದೆ. ನಿಮಗೆ ಸ್ಪಷ್ಟವಾಗಿ ಗೊತ್ತಿರುತ್ತದೆ, ಇವತ್ತಿನ ಈ ಪರಿಸ್ಥಿತಿಗೆ ಕೇವಲ ನೀವೇ ಕಾರಣ ಎಂಬುದಾಗಿ. ಹೆಚ್ಚಿನ ಸಲ ನಾವು ಮಾಡಿಕೊಂಡ ಪ್ರಯತ್ನವೇ ಸಾಕಾಗಿರುವುದಿಲ್ಲ, ಕೆಲವು ಸಲ ಎದುರಾಳಿಯ ಸಾಮರ್ಥ್ಯದ ಬಗ್ಗೆ ನಾವು ಅಂಡರ್ ಎಸ್ಟೀಮೇಟ್ ಮಾಡಿಕೊಂಡಿರುತ್ತೇವೆ. ಇನ್ನು ಕೆಲವೊಮ್ಮೆ ಯಾರದೋ ಮೇಲೆ ನಂಬಿಕೆ ಇಟ್ಟುಕೊಂಡು ನಾವು ಮೈಮರೆತ ಕಾರಣದಿಂದಾಗಿ ಸೋತು ಬಿಡುತ್ತೇವೆ. ಒಬ್ಬರೇ ಕುಳಿತು ಆಲೋಚಿಸಿ ನೋಡಿ ಮೇಲಿನ ಯಾವುದೇ ಕಾರಣಕ್ಕು ನಾವೇ ಹೊಣೆಗಾರರಾಗಿರುತ್ತೇವೆ. ಇದನ್ನ ನಮ್ಮ ಅಂತರಾತ್ಮ ಡಿಕ್ಲೇರ್ ಮಾಡಿಬಿಟ್ಟಿರುತ್ತದೆ. ಆದರೆ ನಾವು ಅದನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ. ನಾವು ಸೋಲಿಗೆ ಬೇರೊಬ್ಬ ಹೊಣೆಗಾರನನ್ನು ಹುಡುಕಲು ಮುಂದಾಗುತ್ತೇವೆ. ಕೆಲವು ಸಲ ನಮ್ಮೊಂದಿಗೆ ಕೈ ಜೋಡಿಸಿ ನಮಗೆ ಸಹಾಯ ಮಾಡಲು ಬಂದವರನ್ನೆ ಆರೋಪಿಗಳನ್ನಾಗಿಸಲು ಸಹ ನಾವು ಹಿಂಜರಿಯುವುದಿಲ್ಲ! ಆದರೆ ಅಪಾಯಕಾರಿ ಸಂಗತಿ ಇದಲ್ಲ. ಸೋಲು ಸ್ಪಷ್ಟವಾಗಿರುತ್ತದೆ. ನಾವು ಹಾಕಿದ ಎಫರ್ಟ್ ನೀರಿನಲ್ಲಿ ಮಾಡಿದ ಹೋಮವಾಗಿಬಿಟ್ಟಿದೆ, ಪಟ್ಟ ಪ್ರಯತ್ನ ವಿಫಲವಾಗಿದೆ. ಆ ಕಾರಣಕ್ಕಾಗಿಯೇ ಗೆಲುವು ದಕ್ಕಲಿಲ್ಲ. ಆದರೆ ನಾವು ಅದನ್ನು ಒಪ್ಪಿಕೊಳ್ಳುತ್ತಿಲ್ಲ. ನಮಗೆ ನಾವೇ ಸಮಜಾಯಿಸಿ ಕೊಟ್ಟುಕೊಳ್ಳುತ್ತೇವೆ. ಸಿಕ್ಕ ಸಿಕ್ಕವರ ಬಳಿ ತಾನು ಸೋತೆ ಇಲ್ಲ ಎನ್ನುವಂತೆ ಪೋಸುಕೊಡಲು ಆರಂಭಿಸುತ್ತೇವೆ. ಇದನ್ನೆ ನಾನು ಅಪಾಯಕಾರಿ ಎಂದಿದ್ದು. ಇದರಿಂದ ಎರಡು ರೀತಿಯ ನಷ್ಟಗಳಾಗುತ್ತವೆ. ಒಂದು ನಿಮ್ಮ ಸುತ್ತಲಿನ ಜನ ನಿಮ್ಮೆದಿರು ನೀವು ಹೇಳುವುದನ್ನು ಕೇಳಿ ನಿಮಗೆ ತಕ್ಕಂತೆ ವರ್ತಿಸಿದರೂ ನಿಮ್ಮ ಹಿಂದೆ ಆಡಿಕೊಳ್ಳುತ್ತಾರೆ. ಮತ್ತೊಂದು ರೀತಿಯ ಪರಿಣಾಮ ಏನೆಂದರೆ ನೀವು ಯಶಸ್ಸಿನತ್ತ ಹೆಜ್ಜೆ ಹಾಕುವುದನ್ನು ನಿಲ್ಲಿಸಿಬಿಡುತ್ತೀರಿ. ಮತ್ತೆ ಗೆಲುವು ಹೊಂದುವ ಛಲವನ್ನು ನೀವು ಮೈಗೂಡಿಸಿಕೊಳ್ಳಲು ನೀವು ತಯಾರಾಗುವುದಿಲ್ಲ. ಒಂದು ಉದಾಹರಣೆ ಹೇಳುತ್ತೇನೆ. ಹೊಸದಾಗಿ ಅಡುಗೆ ಮಾಡಿದ ಹುಡುಗಿಯೊಬ್ಬಳು ಸಾರಿಗೆ ಉಪ್ಪು ಜಾಸ್ತಿ ಹಾಕಿರುತ್ತಾಳೆ. ಹಾಕುವಾಗಲೇ ಜಾಸ್ತಿಯಾಯಿತಾ ಅನ್ನೋ ಅನುಮಾನ ಬಂದಿರುತ್ತದೆ. ಅಲ್ಲಿಗೆ ತನ್ನಿಂದ ತಪ್ಪಾಗಿದೆ ಅನ್ನೋ ಸೂಕ್ಷ್ಮ ಸುಳಿವು ಸಿಕ್ಕಾಗಿರುತ್ತದೆ. ಆದರೂ ಊಟ ಮಾಡುವಾಗ ನಾನು ಸರಿಯಾಗಿಯೇ ಹಾಕಿದ್ದೆ, ಉಪ್ಪಿನ ಬ್ರಾಂಡ್ ಬದಲಾಗಿತ್ತು, ನೀರಿನಲ್ಲಿಯೇ ಉಪ್ಪಿತ್ತು! ಅನ್ನೋ ವಾದಗಳಿವೆಯಲ್ಲ ಅದು ನಮ್ಮನ್ನು ಆ ಕ್ಷಣದ ಸೋಲಿನ ಅವಮಾನದಿಂದ ಬಚಾವಾಗಿಸಬಹುದು. ಆದರೆ ತಪ್ಪು ನಮ್ಮಿಂದಲೇ ಆಗಿದೆ ಅನ್ನೋ ಸತ್ಯ ಇದೆಯಲ್ಲ ಅದು ಬದಲಾಗಲು ಸಾಧ್ಯವಿಲ್ಲ. ನಾವು ಕೊಡುವ ಸಮಜಾಯಿಸಿಯನ್ನು ನಮ್ಮ ಮುಂದೆ ಕೆಲವರು ನಮಗೆ ನೋವಾಗದಿರಲಿ ಎಂಬ ಕಾರಣಕ್ಕೆ ಒಪ್ಪಿಕೊಂಡಿದ್ದರೂ, ಅವರು ಮೂರ್ಖರಲ್ಲ. ಸ್ನೇಹಿತರೇ ನಾನು ಅದಿಕ್ಕೆ ಕೇಳಿದ್ದು ನಿಮಗೆ ಇಂತಹ ಅನುಭವ ಆಗಿದೆಯಾ ಅಂತ. ನಿಮ್ಮ ವರ್ತನೆ ಹೀಗಿದ್ದರೆ, ನೀವು ನಿಮ್ಮ ತಪ್ಪಿಗೆ ಸಮಜಾಯಿಸಿ ಕೊಟ್ಟುಕೊಳ್ಳುತ್ತೀರಿ ಅಂತಾದರೆ ನಿಮ್ಮ ವ್ಯಕ್ತಿತ್ವದ ಬೆಳವಣಿಗೆ ಕುಂಠಿತಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ನೀವು ನಿಮ್ಮೊಳಗಿನ ಆತ್ಮಕ್ಕೆ ಅಗೌರವ ತೋರಿದಂತಾಗುತ್ತದೆ. ಒಂದು ಸೋಲಿನ ನಂತರ ಏಕಾಂತ ಸೃಷ್ಠಿಸಿಕೊಳ್ಳಿ. ನಿಮ್ಮೊಂದಿಗೆ ನೀವು ಮಾತಾಡಿಕೊಳ್ಳಿ. ಮತ್ತೆ ಯುದ್ದಕ್ಕೆ ಅಣಿಯಾಗಿ ಗೆಲ್ಲದಿದ್ದರೆ ನಂಗೆ ಹೇಳಿ…







