ಶೃಂಗೇರಿ ಕ್ಷೇತ್ರದ ಸುದ್ದಿ ಮನೆಯಲ್ಲಿ ಕುಳಿತವರಿಗೆ ರಸಗವಳವೇ ಸಿಗುತ್ತಿದೆ. ಕಸ್ತೂರಿರಂಗನ್ ವರದಿಯ ವಿಚಾರವಾಗಿ ಮಾನ್ಯ ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಭೇಟಿ ನೀಡಿದ್ದೂ ಆಯಿತು. ನಂತರ ರೈತರು ವಿವಿಧ ಸಂಘಟನೆಗಳು ಪ್ರತಿಭಟನೆ, ಬಂದ್ ಮಾಡಿ ಸರ್ಕಾರದ ಗಮನ ಸೆಳೆದಿರುವುದು, ಗುಂಡಿ ಬಿದ್ದ ರಸ್ತೆಗಳು, ಕಾಡಾನೆ ಹಾವಳಿಗಳು ಹೀಗೆ ಸುದ್ದಿಗೆ ಬರವಿಲ್ಲ. ಈ ನಡುವೆ ಮಾಜಿ ಸಚಿವ, ಶಾಸಕ ಜೀವರಾಜ್ ರನ್ನೂ ಮುಖ್ಯಮಂತ್ರಿಗಳ ಸಭೆಗೆ ಅವಕಾಶ ಕಲ್ಪಿಸಿಲ್ಲ ಎಂಬ ಆರೋಪ ಬಿಜೆಪಿಗರಿಂದ ಕೇಳಿ ಬರುತ್ತಿದೆ. ಅದೆಲ್ಲದಕ್ಕಿಂತ ಇಂಟ್ರೆಸ್ಟಿಂಗ್ ವಿಚಾರ ಅಂದರೆ ಅಧಿಕಾರಿಗಳು ಮತ್ತು ಆಡಳಿತ ಪಕ್ಷದ ನಾಯಕರ ನಡುವಿನ ಕಿತ್ತಾಟ ತಾರಕ್ಕೇರಿದೆ! ಇತ್ತೀಚೆಗೆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಆರ್ ಐ ನೇಸರ ಅವರಿಗೆ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮೂರೊಳ್ಳಿ ‘ಕ್ಲಾಸ್’ ತೆಗೆದುಕೊಂಡಿದ್ದು ವೈರಲ್ ಆಗಿತ್ತು. ಆ ಪ್ರಕರಣದಲ್ಲಿ ಪಲಾನುಭವಿಗೆ ಬೇಕಾಗಿದ್ದು ಒಂದು ಜಾತಿ ಪ್ರಮಾಣ ಪತ್ರ! ಅದನ್ನು ಆರ್ ಐ ನೀಡುತ್ತಿಲ್ಲ ಎಂಬ ಕಾರಣಕ್ಕೆ ಆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ತರಾಟೆಗೆ ತೆಗೆದುಕೊಂಡಿದ್ದು! ಅಧಿಕಾರಿಯದ್ದು ಇದೆಂತಹ ಉದ್ದಟತನ ಅಂತ ನೋಡಿದರೆ ಕೇಳುತ್ತಿರುವ ಜಾತಿ ಪ್ರಮಾಣ ಪತ್ರ ಹಿಂದೂವಿನಿಂದ ಕ್ರಿಶ್ಚಿಯನ್ ಎಂದು ನಮೂದಿಸಿ ಕೊಡಬೇಕು ಎಂಬ ಬೇಡಿಕೆ! ಅದಕ್ಕೆ ಅವಕಾಶ ಇಲ್ಲ ಎಂದು ನೇಸರ ಹೇಳುವ ಪ್ರಯತ್ನ ಮಾಡಿದ್ದರಂತೆ. ಊಹುಂ ಅಲ್ಲಿ ಅದಕ್ಕೆ ಅವಕಾಶ ಸಿಗಲಿಲ್ಲ! ಇನ್ನು ಕೊಪ್ಪದ ಶಿಕ್ಷಕಿಯರೊಬ್ಬರು ರಕ್ಷಾ ಬಂಧನ ಆಚರಿಸಿದ್ದನ್ನ ವಿರೋಧಿಸಿದ ಸುದ್ದಿಯೊಂದು ಕೇಳಿಬಂದಿದೆ. ಶಿಕ್ಷಕರು ಶಾಲೆಯಲ್ಲಿ ಆಚರಿಸಿದ್ದಾಗ ಬಹುಶಃ ಆ ವಿರೋಧಕ್ಕೆ ಮಹತ್ವ ಪಡೆದುಕೊಳ್ಳುತ್ತಿತ್ತೋ ಏನೋ ಆದರೆ ಆ ಶಿಕ್ಷಕರು ಮನೆಯಲ್ಲಿ ಆಚರಿಸಿದ್ದು ತಪ್ಪು ಎಂಬುದು ಕೆಲವರ ಆರೋಪ. ಅರೆ! ಶಿಕ್ಷಕರಿಗೆ ಅಷ್ಟು ಮಾತ್ರದ ಸ್ವಾತಂತ್ರ್ಯ ಇಲ್ಲವೇ ? ಅವರ ಮನೆ ಖಾಸಗಿ ಬದುಕಿನ ಚೌಕಟ್ಟು ಅಲ್ಲಿ ಪ್ರಶ್ನೆ ಮಾಡುವುದು ಸರಿಯೇ ? ಆ ಶಿಕ್ಷಕರು ಈ ಆರೋಪಕ್ಕೆ ಸೊಪ್ಪು ಹಾಕಿಲ್ಲ. ಇಲ್ಲಿ ಇನ್ನೊಂದು ಸಂಗತಿ ಹೇಳಬೇಕು. ಕಳೆದ ಬಾರಿ ಉತ್ತಮ ಶಿಕ್ಷಕ ಪ್ರಶಸ್ತಿ, ಪಾಠವೇ ಮಾಡದ ಬೀದಿಯಲ್ಲಿ ಹೆಂಡತಿಯ ಕೈಯಲ್ಲಿ ಗುಮ್ಮಿಸಿಕೊಂಡು, ರಾಜಕೀಯ ಮಾಡಿಕೊಂಡಿದ್ದ ಮೇಷ್ಟ್ರಿಗೆ ಕೊಡಲಾಗಿತ್ತು! ಅದು ಕೆಲ ನಾಯಕರು ಶಿಫಾರಸ್ಸಿನ ಮೇರೆಗೆ ! ಅಂತಹ ಪಲಾನುಭವಿ ಶಿಕ್ಷಕರಾಗಿದ್ದರೆ ಇದನ್ನೆಲ್ಲ ಸಹಿಸಿಯಾರು. ಆದರೆ ಈ ಶಿಕ್ಷಕಿ ನಿಷ್ಠೆ, ಪ್ರಾಮಾಣಿಕವಾಗಿದ್ದವರು. ಅದಕ್ಕೆಲ್ಲ ಸೊಪ್ಪು ಹಾಕಿಲ್ಲ. ಈ ನಡುವೆ ಮುಖ್ಯಮಂತ್ರಿ ಕಾರ್ಯಕ್ರಮದ ದಿನ ಶೃಂಗೇರಿ ಇ. ಓ ಸುದೀಪ್ ಮೇಲೆ ಹಲ್ಲೆಯಾಗಿದೆ. ಈ ಆರೋಪವನ್ನು ಹೊತ್ತವರು ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಕ್ಕುಡಿಗೆ ರವಿ! ಅದೂ ರಾತ್ರಿ ರಾದ್ದಾಂತ. ಅಧಿಕಾರಿ ಆ ಹೊತ್ತಿಗೆ ಅಧಿಕಾರಿಯಾಗಿರದೆ ಅಮಲಿನಲ್ಲಿದ್ದರು! ಇದಕ್ಕೆ ಸಾಕ್ಷಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ 10 ಸಾವಿರದ ಬಿಲ್ಲಿನಲ್ಲಿದೆ! ಗಲಾಟೆ ನಡೆದ ಸ್ಥಳ ಕೂಡ ಕಿಕ್ ಏರಿಯಾವೇ ಹೌದು. ಹಾಗಿದ್ದಾಗ ಕಿರಿಕ್ ಸಹಜವೇ ಈ ಬೀದಿ ರಂಪಾಟದ ಹಿಂದೆ ಹಳೆ 8 ಲಕ್ಷದ ಸೆಟಲ್ಮೆಂಟ್ ಹಾಗೂ ವೈಯಕ್ತಿಕ ವಿಚಾರದ ಹಿನ್ನೆಲೆ ಎಂಬುದು ಅಲ್ಲಲ್ಲಿ ಕೇಳಿ ಬರುತ್ತಿರುವ ಗುಸು-ಗುಸು ಪಿಸು ಪಿಸು! ಪ್ರಕರಣ ಈಗಾಗಲೇ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಿಚಾರ ಅದಲ್ಲ, ಒಬ್ಬ ಅಧಿಕಾರಿಯನ್ನು ಹೀಗೆ ರಸ್ತೆಯಲ್ಲಿ ಹಿಡಿದು ಬಡಿಯಬೇಕಿತ್ತಾ…? ಅದೂ ಕ್ಷೇತ್ರದಲ್ಲಿ ತಮ್ಮದೇ ಶಾಸಕರು, ತಮ್ಮದೇ ಸರ್ಕಾರ ಇದ್ದಾಗ! ಇದರಿಂದ ಜನತೆಗೆ ಯಾವ ಸಂದೇಶ ಹೋಗುತ್ತದೆ ಎಂಬ ವಿವೇಚನೆ ಅಧ್ಯಕ್ಷರಿಗೆ ಇಲ್ಲದೆ ಹೋಯಿತೇ? ಕೊನೆಗೆ ಪಕ್ಷದ ಶಾಸಕರೂ ಕೂಡ ಈ ಕುರಿತು ಯೋಚಿಸಲಿಲ್ಲವೇ? ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಳ್ಳಲು ಶಾಸಕರಿಗೆ ಅಥವಾ ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲವೇ? ಸಾರ್ವಜನಿಕವಾಗಿ ಅಧಿಕಾರಿಗಳ ಮೇಲೆ ಹರಿಹಾಯ್ದು, ಹೀಗೆ ಹೊಡೆದು ಬಡಿದು ಮಾಡಬೇಕಿತ್ತೇ? ಅದರ ಬದಲು ಶಾಸಕರು ಮನಸ್ಸು ಮಾಡಿದ್ದರೆ ಶೃಂಗೇರಿ ಇ ಓ ರವರನ್ನು ವರ್ಗಾಯಿಸಬಹುದಿತ್ತು, ಅಧಿಕಾರ ಮೊಟಕುಗೊಳಿಸಬಹುದಿತ್ತು, ಹೀಗೆ ಸಾಕಷ್ಟು ಅವಕಾಶಗಳಿತ್ತು. ಆದರೂ ಹೀಗೆ ಬೀದಿ ರಂಪಾಟ ಮಾಡಿಕೊಳ್ಳುವುದು, ವೈಟ್ ಕಾಲರ್ ಗೆ ಕೆಸರು ಮೆತ್ತಿಸಿಕೊಳ್ಳುವುದು,ಬೇಕಿತ್ತಾ..? ಇದನ್ನೆಲ್ಲ ಕಂಡ ಕೆಲ ಕಾಂಗ್ರೆಸ್ ನಾಯಕರಿಗೆ,ಕಾರ್ಯಕರ್ತರಿಗೆ ನಾವು ಬಿಜೆಪಿಯ ಭದ್ರಕೋಟೆಯನ್ನು ಛಿದ್ರ ಮಾಡಿ ಅಧಿಕಾರ ತಂದು ಕೊಟ್ಟರೆ ಹೀಗೆ ಪಕ್ಷದ ಮರ್ಯಾದೆ ಬೀದಿ ಪಾಲಾಗುತ್ತಿದೆಯಲ್ಲ ಎಂದು ಸಂಕಟ ಪಡುತ್ತಿದ್ದಾರೆ. ನಮಗೆ ಸಹವಾಸ ಬೇಡ ಎಂದು ಸೈಡ್ ಲೈನ್ ಗೆ ಹೋದ ಕಾಂಗ್ರೆಸ್ ನ ನಿಷ್ಠಾವಂತ ಕೆಲ ಹಿರಿತಲೆಗಳು ಮುಂದೆ ಬಾರದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಮುಳ್ಳಾಗಬಹುದು ಎಂಬುದು ಕಾರ್ಯಕರ್ತರ ಆತಂಕವಷ್ಷೇ.
