
ಬೆಂಗಳೂರು : ರಾಜ್ಯದ ರೇಷನ್ ಕಾರ್ಡ್ದಾರರಿಗೆ ಆಹಾರ ಇಲಾಖೆ ಸಿಹಿ ಸುದ್ದಿ ನೀಡಿದೆ. ಪಡಿತರ ಚೀಟಿಯ ಇ-ಕೆವೈಸಿ ಮಾಡಿಸಲು ನೀಡಲಾಗಿದ್ದ ಗಡುವನ್ನು ಮತ್ತೆ ವಿಸ್ತರಿಸಲಾಗಿದ್ದು, ನವೆಂಬರ್ 30ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ನವೆಂಬರ್ 10 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು. ಇದೀಗ ಪಡಿತರ ಚೀಟಿದಾರರ ಅನುಕೂಲಕ್ಕಾಗಿ ಸರ್ಕಾರ ಗಡುವು ವಿಸ್ತರಿಸಿದೆ. ಇನ್ನು ಇ-ಕೆವೈಸಿ ಮಾಡಿಸಲು ಎರಡು ವಿಧಾನಗಳಲ್ಲಿ ಅವಕಾಶ ನೀಡಲಾಗಿದ್ದು, ಫಲಾನುಭವಿಗಳು ಮನೆಯಲ್ಲೇ ಕುಳಿತು ಅನ್ನಸೇವೆ ಮೊಬೈಲ್ ಆ್ಯಪ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು ಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪ್ರಕ್ರಿಯೆ ಮುಗಿಸಿಕೊಳ್ಳಬಹುದು.
- ಅನ್ನಸೇವೆ ಆ್ಯಪ್ನಲ್ಲಿ ಸ್ವಯಂ ಅಥವಾ ನಾಗರಿಕ ಆಯ್ಕೆಯನ್ನು ಮಾಡಿಕೊಂಡು, ಜಿಲ್ಲೆಯನ್ನು ಆಯ್ಕೆ ಮಾಡಿ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.
- ರೇಷನ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ, ಕುಟುಂಬದ ಸದಸ್ಯರ ವಿವರಗಳಲ್ಲಿ ಇ-ಕೆವೈಸಿ ಮಾಡಬೇಕಾದ ಸದಸ್ಯರನ್ನು ಆಯ್ಕೆ ಮಾಡಿ, ಆ್ಯಪ್ನ ಸೂಚನೆಯಂತೆ ಫೇಸ್ ರೆಕಗ್ನಿಷನ್ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಕೊನೆಯಲ್ಲಿ ಇ-ಕೆವೈಸಿ ಯಶಸ್ವಿ ಎಂಬ ಸಂದೇಶ ಬಂದರೆ ಪ್ರಕ್ರಿಯೆ ಪೂರ್ಣಗೊಂಡಂತೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ಅನ್ನಸೇವೆ ಆ್ಯಪ್ ಸೌಲಭ್ಯವನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಕೇಂದ್ರದ ನಿಯಮದ ಪ್ರಕಾರ ಐದು ವರ್ಷಕ್ಕೊಮ್ಮೆ ಇ-ಕೆವೈಸಿ ಕಡ್ಡಾಯವಾಗಿದ್ದು, ಹಿರಿಯ ನಾಗರಿಕರು ಹಾಗೂ ಮಕ್ಕಳ ಅನುಕೂಲಕ್ಕಾಗಿ ಮುಖ ಗುರುತಿಸುವಿಕೆ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋದವರು ಇ-ಕೆವೈಸಿಗಾಗಿ ತಮ್ಮ ಊರಿಗೆ ತೆರಳುವ ತೊಂದರೆಯನ್ನೂ ಈ ಆ್ಯಪ್ ತಪ್ಪಿಸಲಿದೆ. ಹೀಗಾಗಿ ಇನ್ನೂ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ನವೆಂಬರ್ 30ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವಂತೆ ಆಹಾರ ಇಲಾಖೆ ಮನವಿ ಮಾಡಿದೆ.





