
‘ಮನುಷ್ಯ ಎರಡು ಕಾಲಿನ ರಾಜಕೀಯ ಜಂತು’ ಎಂದು ಅರಿಸ್ಟಾಟಲ್ ಎಂದೋ ಉದ್ಗರಿಸಿದ್ದನು. ಒಬ್ಬನೇ ಇದ್ದಾಗ ಚಿಂತನೆ, ಇಬ್ಬರು ಇದ್ದಾಗ ವಾಗ್ವಾದ, ಮೂವರಿದ್ದಾಗ ರಾಜಕೀಯ ವ್ಯವಹಾರ ಕುದುರುವುದು ಸಹಜ ಎಂದಿದ್ದಾರೆ. ಪರಿಸರ ಸ್ವಚ್ಚತೆಯ ವಿಚಾರಕ್ಕೆ ಬಂದಾಗ ಈ ಯಾವ ಕೂಟಗಳು ಪ್ರಯೋಗಕ್ಕೆ ಬಂದಂತೆ ಭಾಸವಾಗುವುದಿಲ್ಲ. ಅದರಲ್ಲೂ ಕರ್ನಾಟಕದಲ್ಲಿ ಮಾನವ ಮಾತು ಕಲಿತಾಗಿನಿಂದ ಅಲ್ಲಲ್ಲಿಯ ಪರಿಸರ ಸಂಸ್ಕೃತಿ , ಶಿಕ್ಷಣಕ್ಕನುಗುಣವಾದ ಚಿಂತನೆಗಳನ್ನು ಬುದ್ಧಿವಂತನಾಗಿ ನಡೆದುಕೊಳ್ಳುತ್ತಿದ್ದರೂ, ಕಾಲಮಾನಕ್ಕನುಗುಣವಾಗಿ ಪ್ರಕೃತಿ, ಪರಿಸರದ ಕುರಿತು ಮಾಡಿಕೊಳ್ಳಬೇಕಾದ ಆತ್ಮಾವಲೋಕನದಲ್ಲಿ ಶತಮಾನಗಳಷ್ಟು ಹಿಂದೆ ಬಿದ್ದಿರುವುದು ಗಂಭೀರ ವಿಚಾರವಾಗಿದೆ.
ಭಾರತ ದೇಶ ಪರಕೀಯರ ವಶವಾದದ್ದಕ್ಕೆ ನಮ್ಮ ಯುದ್ಧ ಸಾಮರ್ಥ್ಯದ ಬಲಾಡ್ಯತೆಗಳಿಗಿಂತ ಭಾರತೀಯರ ಆಂತರಿಕ ದೌರ್ಬಲ್ಯಗಳೇ ಪ್ರಮುಖ ಕಾರಣವೆಂಬುದನ್ನು ಮರೆಯಬಾರದು. ವಿಚಾರ ದೃಷ್ಟಿಯಲ್ಲಿ ನಮ್ಮ ಪರಿಸರವನ್ನು ನಾವು ಸ್ವಚ್ಚತೆಯ ದೃಷ್ಟಿಯಿಂದಲೋ, ಸಂಸ್ಕೃತಿಯ ದೃಷ್ಟಿಯಿಂದಲೋ ಸೂಕ್ಮವಾಗಿ ಕಾಪಾಡಿಕೊಳ್ಳದಿರುವುದು ಕೂಡ ಮುಂದುವರಿದ ವಿಚಾರ ಧಾರೆಗಳಲ್ಲಿ ಅತ್ಯಂತ ಹಿನ್ನೆಡೆಯ ಅಂಶ ಎಂಬುದನ್ನು ಮನಗಾಣಬೇಕಾದ ತುರ್ತು ಸಂದರ್ಭ ಬಂದೊದಗಿದೆ.
ಬೆಂಗಳೂರು ನಗರವನ್ನು ಎಲ್ಲ ಕಲುಷಿತಗಳಿಂದ ಮುಕ್ತಗೊಳಿಸುವ ಸಂಕಲ್ಪವನ್ನು ಒಬ್ಬ ಸಚಿವರು ಕೈಗೊಂಡಿರುವುದಕ್ಕೆ ನಾಡು ಹೆಮ್ಮೆಪಡಬೇಕು. ನಾಡಿನ ಆಚೆಯಿಂದಲೂ ಧನಾತ್ಮಕ ಬೆಂಬಲ ದೊರೆತಿರುವುದು ಬಹು ಆಶಾದಾಯಕ ವಿಚಾರವಾಗಿದೆ. ಈ ಕಾರ್ಯದಿಂದ ಕರ್ನಾಟಕದ ಚೇತನ ಜಾಗೃತಗೊಂಡಿದೆ ಎಂದುಕೊಳ್ಳಬಹುದೇ..! ಈ ಮೂಲಕ ಒಂದು ವಿಶ್ವಪ್ರಜ್ಞೆಯ ವಿಸ್ತಾರವಾದಂತಾಯಿತೆ..?
ಪ್ರತಿಯೊಬ್ಬರೂ ಬಯಸುವುದು ಸ್ವಚ್ಚತೆಯನ್ನೇ ಆದರೆ ಸಾರ್ವಜನಿಕ ವಿಷಯಕ್ಕೆ ಬಂದಾಗ ಇದು ನನಗೆ ಸಂಬಂಧ ಇಲ್ಲ ಎಂದೇ ನಡೆದುಕೊಳ್ಳುತ್ತೇವೆ. ಇದರಿಂದಲೇ ನಗರ ಪ್ರದೇಶಗಳು ಕಸದ ಪರ್ವತದ ರಾಶಿಗಳಾಗಿ ಪರಿವರ್ತನೆಗೊಳ್ಳುತ್ತಿರುವುದು ಸಾಮಾನ್ಯ ಸಂಗತಿ ಎಂಬಂತೆ ನಡೆದು ಹೋಗಿದೆ. ಒಂದು ಸಾಮಾನ್ಯ ಅಂಕಿ-ಅಂಶದ ಪ್ರಕಾರ ಒಂದುದಿನಕ್ಕೆ 68 ಸಾವಿರ ಕುಡಿವ ನೀರಿನ ಪ್ಲಾಸ್ಟಿಕ್ ಬಾಟಲಿಗಳು ರಾಜಧಾನಿಯ ಒಡಲನ್ನು ಸೇರುತ್ತಿದೆ, ಇನ್ನು ರೈಲು,ವಿಮಾನ, ಖಾಸಗಿ ಕಾರು, ವಾಹನಗಳ ಲೆಕ್ಕವೇ ಬೇರೆ. ರಸ್ತೆಯಲ್ಲಿ ಬಿದ್ದ ಈ ತ್ಯಾಜ್ಯ ಸುಲಭವಾಗಿ ಕರಗಿ ಹೋಗುವ ವಸ್ತುವಾಗಿರದೇ ಹಲವಾರು ವರ್ಷಗಳಾದರೂ ನಿರ್ಮೂಲನೆ ಮಾಡಲು ಅಸಾಧ್ಯವಾದಂತಹವುಗಳೇ. ಇವುಗಳನ್ನು ಯಾರು ಸ್ವಚ್ಚಗೊಳಿಸಬೇಕು. ಈ ಬೃಹತ್ ಗಾತ್ರದ ಕಸದ ರಾಶಿಯನ್ನು ಎಲ್ಲಿಗೆ ಕೊಂಡೊಯ್ಯಬೇಕು?. ಇದೊಂದು ಸಾಮಾನ್ಯ ಸಮಸ್ಯೆಯೇ… ಅರಿಯಬೇಕಾದವರು ಯಾರು ?
ದಿಟ್ಟ ನಿಲುವಿನಿಂದ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಸಚಿವ ಕೃಷ್ಣಬೈರೇಗೌಡರು ಸಾಹಸಮಯ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದಾರೆ. ನಾಡಿಗರ ಮಾತ್ರವಲ್ಲ ಹೊರನಾಡಿನಿಂದಲೂ ಬೆಂಗಳೂರು ಸ್ವಚ್ಚಗೊಳಿಸುವ ಕಾರ್ಯಕ್ಕೆ ಜನರ ಬೆಂಬಲ ದೊರೆತಿದೆ. ಆಳುವವರ ಬೆಂಬಲವನ್ನು ಜನತೆ ತುದಿಗಾಲಲ್ಲಿ ನಿಂತು ನಿರೀಕ್ಷಿಸುತ್ತಿದ್ದಾರೆ. ಎರಡೇ ತಿಂಗಳಲ್ಲಿ ಅಭಿನಂದನೆಯ ಕಾರ್ಯ ಮಾಡಿದ್ದಾರೆ. ನೀವೇ ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಕೆಲವರು ಅನಗತ್ಯ ಹೇಳಿಕೆ ಕೊಡುವುದು ಇಂತಹ ಕಾರ್ಯಗಳಿಗೆ ಉತ್ತೇಜಕವಾಗಲಾರದು.
ಸಚಿವರ ಪ್ರಕಾರ ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ತಡೆ ಬೀಳಬೇಕು. ಸರ್ಕಾರಿ ಆದಾಯದ ನಿರೀಕ್ಷೆಗೂ ಇದು ಸಹಕಾರಿ. ಅನಾಥ ಗಾಡಿಗಳು, ಅನಾಮಧೇಯ ಕಾರು, ವಾಹನಗಳು, ಯಜಮಾನರಿಲ್ಲದೆ ಹಲವಾರು ವರ್ಷಗಳಿಂದ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡು, ಪಾದಚಾರಿಗಳು ರಸ್ತೆಯಲ್ಲೇ ಒಡಾಡುವುದರಿಂದ ಅಪಘಾತಗಳೂ, ವಾಹನ ಸಂಚಾರಕ್ಕೆ ತಡೆಯಾಗುತ್ತಿದೆ. ಸುಮಾರು ಐದು ಸಾವಿರ ಗಾಡಿಗಳು ಈ ರೀತಿಯಲ್ಲಿದ್ದು ಪ್ರಸ್ತುತ 401 ಅನಾಮಧೇಯ ಗಾಡಿಗಳನ್ನು ತೆರವುಗೊಳಿಸಲಾಗಿದೆ. 2 ಲಕ್ಷ ಟನ್ ನಷ್ಟು ಕಸ ವಿಲೇವಾರಿ ಮಾಡಲಾಗಿದೆ 1500 ಕಿ.ಮೀ. ಪಾದಚಾರಿ ಮಾರ್ಗ ನಮ್ಮ ಗುರಿಯಾಗಿದ್ದು 847 ಕಿ,ಮೀ ತೆರವು ಕಾರ್ಯ ಮುಗಿದಿದೆ ಎನ್ನುತ್ತಾರೆ ಸಚಿವರು.
ಇದೇ ಆಗಸ್ಟ್ ನಲ್ಲಿ ಕೇರಳದ ವಯನಾಡಿಗೆ ತೆರಳಿದ್ದೆ. ಅತೀ ಚಿಕ್ಕ ಗುಡ್ಡಗಾಡಿನ ಹಳ್ಳಿಗೂ ತಲುಪಿದ ಕಾಂಕ್ರಿಟ್ ರಸ್ತೆಗಳು, ಅಷ್ಟು ದೂರ ಕ್ರಮಿಸಿದರೂ ಸಿಗದ ಅನುಪಯುಕ್ತ ಬಾಟಲಿಗಳು , ಮದ್ಯದಂಗಡಿ ಮುಕ್ತ ನಗರಗಳನ್ನು ಕಂಡಾಗ ನಮ್ಮ ರಾಜ್ಯದ ದುಸ್ಥಿತಿಗಳನ್ನು ನೆನಪಿಸಿ ದುಃಖ ಪಡುವಂತಾಯ್ತು. ವಯನಾಡಿನಲ್ಲೆ ನೆಲೆಸಿರುವ ಸ್ನೇಹಿತ ವಿಜಯಕುಮಾರ್ ಅವರು ಅಲ್ಲಿನ ಸುಲ್ತಾನ್ ಭತೇರಿ ಎಂಬ ನಗರವನ್ನು ದಿನಕ್ಕೆ ಎರಡು ಬಾರಿ ನಿತ್ಯ ಕಸ ಗುಡಿಸಿ ಸ್ವಚ್ಚಗೊಳಿಸುತ್ತಾರೆ. ದೊಡ್ಡ ಸ್ವರದಲ್ಲಿ ಹಾರ್ನ್ಮಾಡುವುದಾಗಲಿ, ಅತಿರೇಕದ ಓವರ್ ಟೇಕ್ ಗಳ ಮಿತಿಗಳನ್ನು ತಿಳಿಸುವಾಗ ಕಿವಿ ನಿಮಿರಿ ಕೇಳಬೇಕೆನಿಸುತ್ತದೆ. ಕರ್ನಾಟಕದ ಬಹುತೇಕ ನಗರಗಳು ಮಾಲಿನ್ಯ ಭರಿತವಾಗಿವೆ. ಆ ಬಗ್ಗೆ ಅಂತಃಸಾಕ್ಷಿಯೂ ನಮಗಿಲ್ಲ. ಪಾಶ್ಚಿಮಾತ್ಯರು ಹಡಗು ಒಡೆಯುವ ಕಾರ್ಯದಿಂದ ಆ ರಾಷ್ಟ್ರಗಳು ಮಾಲಿನ್ಯಗೊಳ್ಳುತ್ತವೆ ಎಂದು ನಿಷೇಧಿಸಿದಾಗ ನಮ್ಮ ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳು ಹಡಗು ಒಡೆಯಲು ಸ್ಥಳ ನೀಡಿದ ಇತಿಹಾಸಗಳು ನಮ್ಮ ಮುಂದಿವೆ.
ರಾಜ್ಯದ ಜನತೆಗೆ ಬದ್ಧತೆ ಶೂನ್ಯವಾಗಿದೆ, ಸುಂದರ ಸಿಲಿಕಾನ್ ಸಿಟಿಯನ್ನು ಕಾಣುವ ನಮ್ಮ ಮನೋಭಾವನೆ ರಾಜ್ಯದ ಉದ್ದಗಲಕ್ಕೂ ಪಸರಿಸಬೇಕು. ಶೃಂಗೇರಿಯ ಗಾಂಧೀ ಮೈದಾನ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತುಂಬಿ ಉಸಿರುಗಟ್ಟಿಸುವ ಹಂತಕ್ಕೆ ತಲುಪಿದ್ದನ್ನು ಗಮನಿಸಿದ ಇಲ್ಲಿನ ತಹಶಿಲ್ದಾರ್ ಅನುಪ್ ಸಂಜೋಗ್ ಸ್ಥಳೀಯ ಸಂಘ ಸಂಸ್ಥೆಗಳನ್ನು ಕೂಡಿಸಿಕೊಂಡು ಸ್ವಚತೆಗೊಳಿಸಿದ್ದರೂ ಪುನಃ ತುಂಬಿ ಹೋಗುವ ದೃಶ್ಯ ಎದುರಾಗುತ್ತಿದೆ. ಇತ್ತೀಚೆಗೆ ಶೃಂಗೇರಿಯಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ ಬವ್ವರ್ ಸಿಂಗ್ ಮೀನಾ ಪಟ್ಟಣ ಪಂಚಾಯಿಗೆ ಶೃಂಗೇರಿ ಪ್ರವಾಸಿ ಕ್ಷೇತ್ರವಾದ್ದರಿಂದ ಸ್ವಚ್ಚತೆಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ವಿಶೇಷ ತಾಕೀತು ಮಾಡಿದ್ದಾರೆ.
ಈ ಆಂದೋಲನ ರಾಜ್ಯವ್ಯಾಪಿ ಆರಂಭಗೊಳ್ಳಬೇಕು. ಕಾನೂನಿನಲ್ಲಿ ಬಿಗು ತರಬೇಕು. ಶಾಸಕಾಂಗ, ಮತ್ತು ಕಾರ್ಯಾಂಗ ಸಮತೋಲನದಿಂದ ಕ್ರಮವರಿತು ಕಾರ್ಯದಲ್ಲಿ ತೊಡಗಬೇಕು. ಪ್ರತಿ ಮನೆಯಲ್ಲೂ ತ್ಯಾಜ್ಯದ ಬಗ್ಗೆ ಆತ್ಮ ಶೋಧನೆಯಾದಾಗ ಮಾತ್ರ ಬೆಲೆ ಬಂದೀತು.




