
ಕಳಸ: ಜಾನುವಾರು ಹತ್ಯೆ ಮಾಡಿ ಮಾಂಸವನ್ನು ಸಾಗಿಸಿರುವ ಆರೋಪದ ಹಿನ್ನೆಲೆಯಲ್ಲಿ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳಸ ತಾಲೂಕಿನ ಬಾಳೆಹೊಳೆ ಮೀನು ಮಾರುಕಟ್ಟೆ ಸಮೀಪದ ಸಿಂಧುವಳ್ಳಿ ಹಳ್ಳದಲ್ಲಿ ದನದ ಮಾಂಸ, ಕಾಲುಗಳು, ಕೊಂಬುಗಳು ಹಾಗೂ ದನದ ಚರ್ಮ ಚೀಲದಲ್ಲಿ ಪತ್ತೆಯಾಗಿರುವುದಾಗಿ ದೂರು ದಾಖಲಾಗಿದೆ. ಆಗಸ್ಟ್ 21ರಂದು ಬೆಳಗ್ಗೆ ಬಾಳೆಹೊಳೆ ಕಡೆಗೆ ತೆರಳಿದ್ದ ಕಳಕೋಡು ಗ್ರಾಮದ ಮಂಜುನಾಥ ಕೆ.ಜಿ. ಅವರು ಮೀನು ಮಾರುಕಟ್ಟೆ ಸಮೀಪ ಕೆಲವರು ಹಳ್ಳದ ಬಳಿ ಏನನ್ನೋ ಗಮನಿಸುತ್ತಿರುವುದನ್ನು ಕಂಡು ಅಲ್ಲಿಗೆ ತೆರಳಿದ್ದಾರೆ. ಈ ವೇಳೆ ಚೀಲವೊಂದರಲ್ಲಿ ದನದ ಮಾಂಸ ಸೇರಿದಂತೆ ಜಾನುವಾರುಗಳ ಅವಶೇಷಗಳು ಪತ್ತೆಯಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಕಳಸ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಿಚಾರಣೆ ವೇಳೆ, ಆಗಸ್ಟ್ 20ರಂದು ರಾತ್ರಿ ಸುಮಾರು 8 ಗಂಟೆ ವೇಳೆಗೆ ಬಾಳೆಹೊಳೆ ಸತೀಶ್ ಎಂಬುವವರು ಇದೇ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಚೀಲ ಹಿಡಿದುಕೊಂಡು ಓಡಾಡುತ್ತಿರುವುದನ್ನು ಗಮನಿಸಿದ್ದಾಗಿ ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ದೂರು ಸ್ವೀಕರಿಸಿರುವ ಕಳಸ ಪೊಲೀಸರು, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 4 ಹಾಗೂ 12(1)ರ ಅಡಿಯಲ್ಲಿ ಕಳಸ ಪೊಲೀಸ್ ಠಾಣೆಯಲ್ಲಿ ಮೊ.ನಂ. 32/2026ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




