
ಚಿಕ್ಕಮಗಳೂರು: ಕೃಷಿ ಜಮೀನಿನ ಸರ್ವೇ ನಡೆಸಿ ಸ್ಕೆಚ್ ತಯಾರಿಸಿಕೊಡಲು 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಚಿಕ್ಕಮಗಳೂರು ತಾಲೂಕಿನ ಇಬ್ಬರು ಸರ್ವೇಯರ್ಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸರ್ವೇಯರ್ಗಳಾದ ದೊರೆರಾಜ್ ಹಾಗೂ ರಂಗನಾಥ್ ಅವರು, ಚಿಕ್ಕಮಗಳೂರು ನಗರದ ಹೊರವಲಯದ ಇಂದಾವರ ಗ್ರಾಮದ ಧರಣೇಶ್ ಅವರ ಕೃಷಿ ಜಮೀನಿನ ಸರ್ವೇಗಾಗಿ 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಧರಣೇಶ್ ಅವರು ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಸರ್ವೇಯರ್ಗಳು ತಮ್ಮ ಖಾಸಗಿ ಕಚೇರಿಯಲ್ಲಿ ಮುಂಗಡವಾಗಿ ಎರಡು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್ಪಿ ಪಿ. ತಿರುಮಲೇಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
ವರದಿ: ಸಂತೋಷ್ ಅತ್ತಿಗೆರೆ




