
ಚಾಮರಾಜನಗರ: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ವಿಶಾಲವಾದ ಶ್ರೇಷ್ಠ ಹೆಸರನ್ನು ಇಡುವ ಮೂಲಕ ಕನ್ನಡಿಗರಿಗೆ ಹೃದಯ ಶ್ರೀಮಂತಿಕೆಯ ಕರ್ನಾಟಕವೆಂದು ನಾಮಕರಣ ಮಾಡಿದ ಮುಖ್ಯಮಂತ್ರಿಗಳಾದ ಡಿ ದೇವರಾಜ ಅರಸ್ ರವರು ಕಾರ್ಯ ಮರೆಯಲಾಗದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರು, ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಡಿ ದೇವರಾಜ ಅರಸ್ ರವರ 111ನೇ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಡಿ ದೇವರಾಜ ಅರಸ್ ರವರು 1973 ನವಂಬರ್ ಒಂದರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡುವ ಮೂಲಕ ಕನ್ನಡಿಗರಲ್ಲಿ ನವೊಲ್ಲಾಸವನ್ನು ಉಂಟು ಮಾಡಿದರು. ಅಂದು ಹೆಸರಿಡುವ ಸಂದರ್ಭದಲ್ಲಿ ಶಾಸನಸಭೆಯಲ್ಲಿದ್ದ ಹೆಚ್ ಡಿ ದೇವೇಗೌಡರು ಹಾಗೂ ವಾಟಾಳ್ ನಾಗರಾಜ್ ರವರು ಇಂದಿಗೂ ಸಾಕ್ಷಿಯಾಗಿದ್ದಾರೆ. ಅಂದಿನ ಎಲ್ಲಾ ಶಾಸಕರು ಹಾಗೂ ಮಂತ್ರಿಗಳಿಗೆ ವಾಟಾಳ್ ಪುಷ್ಪ ಅರ್ಪಿಸುವ ಮೂಲಕ ಗೌರವಿಸಿದ್ದು ಇತಿಹಾಸ. ಡಿ ದೇವರಾಜ ಅರಸ್ ರ ವರನ್ನು ಶಾಸನ ಸಭೆಯ ಸದಸ್ಯರು ಕರ್ನಾಟಕದ ಅಭಿಮನ್ಯು ಎಂದು ಕರೆದದ್ದು ಇತಿಹಾಸ. ಕರ್ನಾಟಕ ಏಕೀಕರಣದ ಹೋರಾಟಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹರಿದು ಹಂಚಿಹೋಗಿದ್ದ ಕನ್ನಡದ ನೆಲ,ಜಲ,ಗಡಿಯನ್ನು ಒಂದುಗೂಡಿಸಿದ ಆಲೂರು ವೆಂಕಟರಾಯರ ಹೋರಾಟದ ಪ್ರತಿಫಲವಾಗಿ ಇಂದು ಕನ್ನಡಿಗರು ಶ್ರೇಷ್ಠ ಕರ್ನಾಟಕದ ಹೆಸರಿನಿಂದ ಲೋಕ ಪ್ರಸಿದ್ಧರಾಗಿದ್ದೇವೆ. ಕನ್ನಡ ಭಾಷೆ ಸುಂದರವಾದ ಭಾಷೆ.ಕನ್ನಡವನ್ನು ಪ್ರೀತಿಸೋಣ. ಕನ್ನಡ ರಾಜ್ಯ ಸುಂದರವಾಗಿ ನಿರ್ಮಿಸುವ ಜೊತೆಗೆ ಭಾಷೆಯನ್ನು ಕಟ್ಟುವ ಕಾರ್ಯವನ್ನು ನಾವೆಲ್ಲರೂ ಮಾಡೋಣ. ಕರ್ನಾಟಕ ಎಂಬ ಹೆಸರೇ ರೋಮಾಂಚನ. ಕರ್ನಾಟಕವೆಂಬುದು ಹೃದಯ ಶ್ರೀಮಂತಿಕೆಯ ನಾಡಾಗಿದೆ ಎಂದರು. ಉದ್ಘಾಟನೆ ನೆರವೇರಿಸಿದ ಪ್ರಸಿದ್ಧ ಕ್ರೀಡಾಪಟು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಶ್ರೀ ವಿ ಶ್ರೀನಿವಾಸ್ ಪ್ರಸಾದ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದೇವರಾಜ ಅರಸ್ ರವರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲು ಬಹಳ ಸಂತೋಷವಾಗುತ್ತಿದೆ. ಹಿಂದುಳಿದ ವರ್ಗಗಳ ನಾಯಕರಾಗಿದ್ದ ಡಿ ದೇವರಾಜ ಅರಸ್ ಹೆಸರು ಸದಾಕಾಲ ಕನ್ನಡಿಗರ ಮನಸ್ಸಿನಲ್ಲಿ ಉಳಿಯುತ್ತದೆ.ಸಾಮಾಜಿಕ ನ್ಯಾಯ,ಸಮಾನತೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಅರಸ್ ರವರ ಯೋಚನೆ ಮತ್ತು ಕ್ರಮಗಳಿಂದ ಇಂದು ಹಿಂದುಳಿದ ವರ್ಗಗಳು ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಯನ್ನು ಕಾಣುತ್ತಿವೆ ಎಂದರು. ಪ್ರಾಚಾರ್ಯರಾದ ಕಾಗಲವಾಡಿ ರಂಗಸ್ವಾಮಿ ಮಾತನಾಡಿ ಡಿ ದೇವರಾಜ ಅರಸ್ ರವರು ಭೂ ಸುಧಾರಣಾ ಕಾಯಿದೆ ಹಾಗೂ ಮಲ ಹೊರುವ ಪದ್ಧತಿಯನ್ನು ನಿಷೇಧಿಸುವ ಮೂಲಕ ಬಹುದೊಡ್ಡ ಕ್ರಾಂತಿಯನ್ನು ಮಾಡಿದವರು ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ರವಿಚಂದ್ರ ಪ್ರಸಾದ್, ಸರಸ್ವತಿ, ಗೀತಾ, ವೀರಶೆಟ್ಟಿ, ಯಡಿಯೂರು ನಾಗರಾಜು,ಇದ್ದರು.




