
ನಮ್ಮ ರಾಷ್ಟ್ರೀಯ ಹಬ್ಬವಾದ ಆಗಸ್ಟ್ 15 ರ ಸ್ವಾತಂತ್ರ್ಯದಿನೋತ್ಸವ ಆಚರಣೆಗೆ ದೇಶ ಸಿದ್ದವಾಗಿ ನಿಂತಿದೆ. ಏಳು ದಶಕಗಳು ಕಳೆದು ’80’ ನೇ ವರ್ಷದ ಆಚರಣೆಯ ಸಂದರ್ಭದಲ್ಲೂ ಆಚರಣೆಗಳು ಮಾತ್ರ ಸಂಭ್ರಮವಾಗಿದೇ ಹೊರತು- ದೇಶದ ಆತ್ಮಶೋಧನೆಯಾಗಲೇ ಇಲ್ಲ. ದೇಶಕ್ಕೆ ಸ್ವತಂತ್ರ್ಯ ತಂದುಕೊಟ್ಟ ಹೋರಾಟಗಾರರ ಮಾತುಗಳನ್ನೇ ಮೆಲುಕು ಹಾಕುತ್ತಿದ್ದೇವೆಯೇ ಹೊರತು ಅವರ ಆಶಯಗಳ ಈಡೇರಿಕೆಯ ಹಿಂದೆ ದೇಶೋದ್ದಾರದ ಆದರ್ಶವೊಂದಿರುವುದು ನಮಗೆ ಅರ್ಥವಾಗಲೇ ಇಲ್ಲ. ಚಿಂತಿಸಿ ಪರಿಹರಿಸಬೇಕಾದ ಹಲವಾರು ಸಮಸ್ಯೆಗಳು ಇಂದಿಗೂ ಸಮಸ್ಯೆಗಳನ್ನಾಗಿಯೇ ಉಳಿಸಿಕೊಂಡಿರುವುದು ನಮ್ಮ ರಾಜಕಾರಣದ ಮಹತ್ವವೇ ಹೌದು ಅದು ವಿಷಾದವೇ ಆಗಿದೆ. ಕರ್ನಾಟಕ ರಾಜ್ಯಕ್ಕೆ ಬಂದಾಗ, ಕಾವೇರಿ ನದಿ ನೀರಿನ ಸಂಕಷ್ಟ- ಕಗ್ಗಂಟಾಗಿ ಮುಂದುವರಿದಿದ್ದು, ತಮಿಳುನಾಡಿಗೆ ನಿತ್ಯ 16 TMC ನೀರನ್ನು ಬಿಡಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸ್ಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೈಗೆತ್ತಿಕೊಂಡು ಜೋಡಿಯಾಗಿ ಆದೇಶ ಹೊರಡಿಸಿದೆ. ಈ ಜೋಡಿ ಆದೇಶಗಳು ಕರ್ನಾಟಕ ಸರ್ಕಾರವನ್ನು ಸ್ಪಷ್ಟವಾಗಿ ಇಕ್ಕಟ್ಟಿಗೆ ಸಿಲುಕಿಸಿದ್ದು, ತಮಿಳುನಾಡು ಸರ್ಕಾರ ಈಗ ಸುಪ್ರೀಂ ನ ಮೆಟ್ಟಿಲೇರಿದ್ದು, ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಒಟ್ಟಾರೆ 77 ಟಿಎಂಸಿ ಅಡಿಗಳಷ್ಟು ನೀರಿನ ಸಂಗ್ರಹವಿದ್ದು, ಅದರಲ್ಲಿ ತಮಿಳುನಾಡಿನ ಪರವಾದ 26 ಟಿ ಎಂ ಸಿ ಅಡಿಗಳಷ್ಟು ನೀರನ್ನು ತಕ್ಷಣ ಬಿಡಬೇಕೆಂದು ಕರ್ನಾಟಕಕ್ಕೆ ನಿರ್ದೇಶನ ಮಾಡಬೇಕೆಂದು ಸುಪ್ರೀಂ ಗೆ ಮನವಿ ಮಾಡಿಕೊಂಡಿದೆ.
ರಾಜ್ಯದ ಹಿತ ಕಾಯುವ ವಿಷಯದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ರವರು ಕರೆದ ಸರ್ವ ಪಕ್ಷ ಸಭೆಯಲ್ಲಿ ಎಲ್ಲರೂ ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸಿರುವುದು ಮತ್ತು ಜಲಾನಯನ ಪ್ರದೇಶದಲ್ಲಿ ಮಳೆಯಾಗದಿರುವ, ನೀರಿನ ಕೊರತೆಯ ಬಗ್ಗೆ ಸಾಕ್ಷ್ಯ ಚಿತ್ರದೊಂದಿಗೆ ಸುಪ್ರೀಂ ಗೆ ಮನವರಿಕೆ ಮಾಡುವ ಸರ್ವ ಪಕ್ಷಗಳ ಅಭಿಪ್ರಾಯ ನ್ಯಾಯೋಚಿತವೇ ಆಗಿದೆ. ಹೆಚ್ ಡಿ ಕುಮಾರಸ್ವಾಮಿ – ಬಿ ಎಸ್ ಯಡಿಯೂರಪ್ಪ ಮುಂತಾದವರು ಕುಳಿತು ಚರ್ಚೆ ನಡೆಸಿ ಸೌಹಾರ್ದಯುತವಾಗಿ ಸಂಕಷ್ಟ ಪರಿಹಾರ ಸೂತ್ರ ಕಂಡುಕೊಳ್ಳಲು ಚಿಂತಿಸಿದ್ದು ಗಮನರ್ಹ ಅಂಶವಾಗಿದೆ. ಇದೀಗ ಪ್ರಾಧಿಕಾರವು ನಿತ್ಯ ಹನ್ನೆರಡು ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಬೇಕೆಂದು ಮಾಡಿರುವ ಆದೇಶ ಮಂಡ್ಯ -ಮೈಸೂರು ಮುಂತಾದೆಡೆಗಳಲ್ಲಿ ಮತ್ತೆ ಬೆಂಕಿಯ ಜ್ವಾಲೆಯನ್ನೇ ಎಬ್ಬಿಸುತ್ತಲಿದ್ದು, ರಾಜ್ಯದಿಂದ ಪ್ರತಿನಿಧಿಸಿ ಭಾಗಿಯಾದ ಕರ್ನಾಟಕದ ಅಧಿಕಾರಿಗಳು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಳೆ ಕೊರತೆಯ ಕಾರಣ ನೀಡಿ ನೀರು ಬಿಡಲು ಸಾಧ್ಯವಾಗದಿರುವುದನ್ನು ಮನದಟ್ಟು ಮಾಡಿ ಸಮಿತಿ ಮಾಡಿರುವ ಶಿಫಾರಸ್ಸನ್ನು ಆದೇಶಕ್ಕೆ ಪರಿಗಣಿಸದೆ ಹಿಂತಿರುಗಿಸಬೇಕೆಂದು ಮನವಿ ಮಾಡಿದೆ. ಮನವಿಗೂ ಮೀರಿ ಮಾಡಿದ ಆದೇಶದ ಕುರಿತು ಸುಪ್ರೀಂ ಕೋರ್ಟಿಗೆ ಮೊರೆ ಹೋಗಲು ಕರ್ನಾಟಕ ಸರ್ಕಾರ ನಿರ್ಧರಿಸಿರುವುದು ಗಮನಾರ್ಹವೇ ಆಗಿದ್ದು, ’ಸಿಡಬ್ಲ್ಯೂಆರ್ಸಿ’ ಆದೇಶದ ವಿರುದ್ಧ ಸಿಡಿದೆದ್ದ ಮಂಡ್ಯ ಜಿಲ್ಲೆ ರೈತರು ಬುಧವಾರದಿಂದ ಅನಿರ್ದಿಷ್ಟ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ಸೂಚಿಸಲು ನಿರ್ಧಾರವೂ ಆಗಿತ್ತು. ರಾಜ್ಯದಲ್ಲಿ ನಡೆಸುವ ಯಾವುದೇ ಬಂದ್ ಹೋರಾಟಗಳು ರಾಜ್ಯದ ಹಿತಾಸಕ್ತಿಗಳನ್ನ ಕಾಪಾಡುತ್ತವಾದರೂ, ವಿದ್ಯಾ ಕ್ಷೇತ್ರ, ಉದ್ಯಮ, ಸಾರಿಗೆ, ಜನಜೀವನ ಹೀಗೆ ಹಲವಾರು ಅಂಶಗಳಲ್ಲಿ ಉಂಟು ಮಾಡುವ ನಷ್ಟ ಅಪರಿಮಿತವಾದದ್ದು, ಇದು ನಿನ್ನಯದ್ದಲ್ಲ ಸ್ವತಂತ್ರ ಪೂರ್ವದಿಂದಲೂ ಕಳಂಕದಂತೆ ಅಂಟಿಕೊಂಡೇ ಬಂದಿದೆ. ಕಾವೇರಿ ವಿವಾದ ನಮ್ಮ ರಾಜ್ಯಕ್ಕೆ ಎಲ್ಲಾ ರೀತಿಯಲ್ಲೂ ಉಂಟು ಮಾಡಿದ- ಮಾಡುತ್ತಿರುವ ನಷ್ಟವು ಲೆಕ್ಕಕ್ಕೆ ಮೀರಿದಾಗಿದ್ದು, ಮತ್ತೆ ಸಿಎಂ ಸಭೆ ಕರೆಯಲು ಹೇಳಿಕೆ ನೀಡಿದ್ದಾರೆ. ಒಂದೊಂದು ಆದೇಶಗಳಾದಾಗಲೂ ಸಭೆ ಕರೆಯುವುದು – ಚರ್ಚಿಸುವುದು ಪ್ರತೀತಿಯಾಗಿ ಹೋಗಿದ್ದು, ಸಮಸ್ಯೆಗಳು ಮಾತ್ರ ಹಾಗೆ ಉಳಿದಿವೆ . ಮುಖ್ಯಮಂತ್ರಿ ಮತ್ತು ಇಲಾಖೆಗಳ ಸಚಿವರು ಅಧಿಕಾರಿಗಳು ನಡೆಸುವ ಸಭೆಗಳು ಕಾಟಾಚಾರಕ್ಕೆ ಸೀಮಿತವಾಗದೆ, ಸಮಯ ವ್ಯರ್ಥಗೊಳಿಸದೆ ಭದ್ರತೆಯನ್ನ ಇಟ್ಟುಕೊಂಡು ವಾಸ್ತವದಲ್ಲಿ ಅದರ ಪರಿಣಾಮಗಳು ಜನರ ಮನಸ್ಸಿಗೆ ನಾಟುವಂತಿರಬೇಕು. ಕಾವೇರಿ ರಾಜ್ಯದ ಬಂಧು-ಭಾಂದವರ ಸಮಸ್ಯೆ ಎಂದುಕೊಳ್ಳದೆ ಇಡೀ ರಾಜ್ಯದ ಜನರ ಆಸ್ಮಿತೆಯಾಗಿ ಪ್ರದರ್ಶನಗೊಳ್ಳಬೇಕು. ಆಗ ಮಾತ್ರ ಇಂತಹ ಜೋಡಿ ಆದೇಶಗಳು ಹೊರಬೀಳುವ ಮುನ್ನ ಅಧ್ಯಯನ – ಒತ್ತಾಯ – ಸಮೀಕ್ಷೆ- ವರದಿಗಳಿಗೆ ಬೆಲೆ ಬಂದಾವು.




