
ಲಿಂಗದಹಳ್ಳಿ: ಆನ್ಲೈನ್ ಟ್ರೇಡಿಂಗ್ನಲ್ಲಿ ಹೂಡಿಕೆ ಮಾಡಿದ ಹಣವನ್ನು ಕೆಲವೇ ದಿನಗಳಲ್ಲಿ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ₹35 ಲಕ್ಷ ಹೂಡಿಕೆ ಮಾಡಿಸಿಕೊಂಡು, ಹಣ ವಾಪಸ್ ನೀಡದೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸುಣ್ಣದಹಳ್ಳಿ ಗ್ರಾಮದ 65 ವರ್ಷದ ಸಿದ್ದಪ್ಪ ಎಂಬವರು ನೀಡಿದ ದೂರಿನ ಪ್ರಕಾರ, ಅವರ ಪುತ್ರ ಕಾಂತರಾಜ್ ಅವರು 2024ರಲ್ಲಿ ಮನೆ ಮೇಲೆ ₹18 ಲಕ್ಷ ಹಾಗೂ ಊರಿನಲ್ಲಿ ₹15 ಲಕ್ಷ ಕೈಸಾಲ ಮಾಡಿಕೊಂಡಿದ್ದರು. ಈ ಕುರಿತು ವಿಚಾರಿಸಿದಾಗ, ವೆಂಕಟೇಶ್ ಬಿ ಎಂಬವರು ನಡೆಸುತ್ತಿದ್ದ ಶಾಲೋಮ್ ಟ್ರೇಡಿಂಗ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಕೆಲವೇ ದಿನಗಳಲ್ಲಿ ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ಭರವಸೆ ನೀಡಿದ್ದರು ಎಂದು ಪುತ್ರ ತಿಳಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಂತರ ಕಾಂತರಾಜ್ ಅವರು 18 ಜುಲೈ 2025ರಂದು ಚಿಕ್ಕಮಗಳೂರಿನಲ್ಲಿ ಮೃತಪಟ್ಟಿದ್ದು, 27 ಜುಲೈ 2025ರಂದು ಶಾಲೋಮ್ ಟ್ರೇಡಿಂಗ್ ಕಂಪನಿ ಮಾಲೀಕ ವೆಂಕಟೇಶ್ ಬಿ ಅವರು ಸಿದ್ದಪ್ಪ ಅವರ ಮನೆಗೆ ಬಂದು, ಕಾಂತರಾಜ್ ಹಾಗೂ ಇತರ ಸಂಬಂಧಿಕರು ಕಂಪನಿಯಲ್ಲಿ ಒಟ್ಟು ₹35 ಲಕ್ಷ ಹೂಡಿಕೆ ಮಾಡಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಕಾಂತರಾಜ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಎರಡು ತಿಂಗಳೊಳಗೆ ಹಂತ ಹಂತವಾಗಿ ಹಣವನ್ನು ವಾಪಸ್ ನೀಡುವುದಾಗಿ ವೆಂಕಟೇಶ್ ಅವರು ಛಾಪಾ ಕಾಗದದಲ್ಲಿ ಬರೆದುಕೊಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ 4 ಸೆಪ್ಟೆಂಬರ್ 2025ರಂದು ₹2 ಲಕ್ಷವನ್ನು ಸಿದ್ದಪ್ಪ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು. ಆದರೆ ಉಳಿದ ಹಣವನ್ನು ನೀಡದೆ ವಿಳಂಬ ಮಾಡಲಾಗಿದ್ದು, ವೆಂಕಟೇಶ್ ಅವರ ಪರವಾಗಿ ಹನುಮಂತಪ್ಪ ಮತ್ತು ದೇವರಾಜ್ ಅವರು ಬಂದು ಹಣ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಇದೀಗ ಹಣವೂ ವಾಪಸ್ ನೀಡದೆ, ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಸಿದ್ದಪ್ಪ ಆರೋಪಿಸಿದ್ದಾರೆ. ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿರುವ ಆರೋಪದ ಮೇರೆಗೆ ವೆಂಕಟೇಶ್ ಬಿ, ಹನುಮಂತಪ್ಪ ಹಾಗೂ ದೇವರಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಿದ್ದಪ್ಪ ಅವರು ಲಿಂಗದಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





