
ಕಡೂರು: ಉಳಿತಾಯದ ಹಣಕ್ಕೆ ಶೇ.7ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ಹಣ ಪಡೆದು, ವಾಪಸ್ ನೀಡದೆ ಫೈನಾನ್ಸ್ ಕಚೇರಿಗೆ ಬೀಗ ಹಾಕಿ ಮಾಲೀಕರು ನಾಪತ್ತೆಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಡೂರು ತಾಲೂಕಿನ ಸೀಗೆಹಡ್ಲು ಗ್ರಾಮದ ನೇತ್ರ ಎಂಬುವವರು ಈ ಕುರಿತು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ ಚಂದನ್ ನಾಯ್ಕ ಎಂಬವರು ಕಡೂರಿನ ಸುಭಾಷ್ ನಗರದಲ್ಲಿ ಕನಸು ಫೈನಾನ್ಸ್ ಲಿಮಿಟೆಡ್ ಆರಂಭಿಸಿರುವುದಾಗಿ ತಿಳಿಸಿ, ಪ್ರತಿದಿನ ಉಳಿತಾಯ ಮಾಡುವ ಹಣಕ್ಕೆ ಶೇ.7ರಷ್ಟು ಬಡ್ಡಿ ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಇದನ್ನು ನಂಬಿದ ನೇತ್ರ ಅವರು 2025ರ ಜೂನ್ 11ರಿಂದ 2026ರ ಜುಲೈ 17ರವರೆಗೆ ಪ್ರತಿದಿನ ₹300ರಿಂದ ₹700ರ ವರೆಗೆ ಹಣವನ್ನು ಪೈನಾನ್ಸ್ಗೆ ಪಾವತಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಫೈನಾನ್ಸ್ ಸಿಬ್ಬಂದಿ ಅಂಗಡಿಗೆ ಬಂದು ಹಣ ಪಡೆದು, ಪಾಸ್ಬುಕ್ನಲ್ಲಿ ಸಹಿ ಮಾಡುತ್ತಿದ್ದರು ಎನ್ನಲಾಗಿದೆ. ಹೀಗೆ ಒಟ್ಟು ₹1,60,900 ಹಣವನ್ನು ಪಾವತಿಸಿರುವುದಾಗಿ ನೇತ್ರ ತಿಳಿಸಿದ್ದಾರೆ. ಹಣ ಹಿಂಪಡೆಯಲು ಜುಲೈ 13ರಂದು ಫೈನಾನ್ಸ್ ಕಚೇರಿಗೆ ತೆರಳಿದಾಗ, 2–3 ದಿನಗಳಲ್ಲಿ ಹಣ ನೀಡುವುದಾಗಿ ತಿಳಿಸಲಾಗಿತ್ತು. ಆದರೆ ನಂತರ ಫೈನಾನ್ಸ್ ಕಚೇರಿಗೆ ಬೀಗ ಹಾಕಿ, ಮಾಲೀಕರು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತಮ್ಮಂತೆಯೇ ಕಡೂರು ಸುತ್ತಮುತ್ತಲಿನ ಹಲವು ಮಂದಿ ಫೈನಾನ್ಸ್ಗೆ ಹಣ ಕಟ್ಟಿದ್ದು, ಅವರೂ ಹಣ ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ ಎಂದು ದೂರುದಾರರು ತಿಳಿಸಿದ್ದಾರೆ. ಪ್ರಶಾಂತ್, ಚಂದನ್ ನಾಯ್ಕ ಹಾಗೂ ಶಾಶಂಕ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ನೇತ್ರ ಅವರು ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಕಡೂರು ಪೊಲೀಸರು ಪ್ರಥಮ ವರ್ತಮಾನ ವರದಿ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




