
ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಪ್ರಾಯೋಜಕತ್ವದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾರ್ಕಳ, ಕಾಬೆಟ್ಟುವಿನ 2026-27ನೇ ಸಾಲಿನ ರೋಟರಾಕ್ಟ್ ಕ್ಲಬ್ನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಗಸ್ಟ್ 13ರಂದು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ್ದ ರೊ. ಡಾ. ಭರತೇಶ್ ಆದಿರಾಜ ಅವರು ನೂತನ ಅಧ್ಯಕ್ಷರಾದ ಕು. ಸುಜನ್ ಅವರಿಗೆ ಕೊರಳ ಲಾಂಛನವನ್ನು ಹಸ್ತಾಂತರಿಸುವ ಮೂಲಕ ಅಧಿಕಾರ ವಹಿಸಿಕೊಟ್ಟರು. ನಿಕಟಪೂರ್ವ ಅಧ್ಯಕ್ಷರಾದ ಕು. ಮಹೇಶ್ ನಾಯ್ಕ ಅವರಿಂದ ನೂತನ ಅಧ್ಯಕ್ಷರಾದ ಕು. ಸುಜನ್ ಅವರು ಪ್ರಭಾರ ಸ್ವೀಕರಿಸಿದರು.ಅದೇ ರೀತಿ ನೂತನ ಕಾರ್ಯದರ್ಶಿ ಕು. ಕೌಶಿಕ್ ಅವರು ನಿಕಟಪೂರ್ವ ಕಾರ್ಯದರ್ಶಿ ಕು. ಅಶ್ವತ್ಥ್ ಅವರಿಂದ ಪ್ರಭಾರ ವಹಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಅಧ್ಯಕ್ಷರಾದ ರೊ. ಮಂಜುನಾಥ ಹೆಗ್ಡೆ ವಹಿಸಿದ್ದರು. ಸರ್ವರನ್ನು ಸ್ವಾಗತಿಸಿ ಮಾತನಾಡಿದ ಅವರು, ರೋಟರಾಕ್ಟ್ ಕ್ಲಬ್ನ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿಯ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಸಹನಾ ಅವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿವಿಲ್ ವಿಭಾಗದ ವಿಭಾಗಾಧಿಕಾರಿ ಹಾಗೂ ರೋಟರಾಕ್ಟ್ ಕ್ಲಬ್ ಸಂಚಾಲಕರಾದ ಶ್ರೀ ಚಿತ್ರಕುಮಾರ್ ಕೆ.ವಿ., ಕಂಪ್ಯೂಟರ್ ಸೈನ್ಸ್ ವಿಭಾಗದ ವಿಭಾಗಾಧಿಕಾರಿ ಶ್ರೀ ಕುಮಾರ ಕೆ.ಎಂ., ಬೋಧಕರಾದ ಶ್ರೀ ಬಾಲಚಂದ್ರ ಹೆಬ್ಬಾರ್ ಹಾಗೂ ಕಚೇರಿ ಮುಖ್ಯಸ್ಥರಾದ ಶ್ರೀ ಗುಣಪಾಲ ಜೈನ್ ಉಪಸ್ಥಿತರಿದ್ದರು. ಇನ್ನು ಸಂಸ್ಥೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ರೋಟರಿ ಕ್ಲಬ್ನ ಪೂರ್ವ ಅಧ್ಯಕ್ಷರಾದ ರೊ. ಉಪೇಂದ್ರ ವಾಗ್ಲೆ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ವರದಿ: ಅರುಣ್ ಭಟ್ ಕಾರ್ಕಳ




