
ಚಿಕ್ಕಮಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂದು ಯೂನಿಫಾರಂ ಧರಿಸಿರುವ ಫೋಟೋ ತೋರಿಸಿ ನಂಬಿಸಿ ಚಿನ್ನ, ಹಣ ಹಾಗೂ ಕಾರು ಪಡೆದು ವಂಚನೆ ಮಾಡಿರುವ ಆರೋಪ ಚಿಕ್ಕಮಗಳೂರಿನಲ್ಲಿ ಕೇಳಿಬಂದಿದೆ. ವಿಜಯಪುರ ಮೂಲದ ಅಮ್ಮುಗೌಡ ಅಲಿಯಾಸ್ ನಿವೇದಿತ ಎಂಬ ಮಹಿಳೆ ತಾನು ಬೆಂಗಳೂರಿನಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡು, ದೂರುದಾರರ ಕುಟುಂಬದ ವಿಶ್ವಾಸ ಗಳಿಸಿದ್ದಾಳೆ ಎನ್ನಲಾಗಿದೆ. ಬಳಿಕ ಚಿನ್ನ ಮೆಚ್ಯೂರ್ ಆಗಿದ್ದು ಜಿಎಸ್ಟಿ ಕಟ್ಟಬೇಕೆಂದು ಹೇಳಿ ದೂರುದಾರರಿಂದ 8 ಗ್ರಾಂ ಚಿನ್ನದ ಸರ, ಅವರ ಅಕ್ಕನಿಂದ 11.5 ಗ್ರಾಂ ಚಿನ್ನದ ಸರ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ದೂರುದಾರರ ತಂಗಿಯಿಂದ 2 ಲಕ್ಷ ರೂಪಾಯಿ ಹಣ ಪಡೆದಿದ್ದು, 1.5 ಲಕ್ಷ ರೂಪಾಯಿ ಬ್ಯಾಂಕ್ ಮೂಲಕ ಹಾಗೂ 50 ಸಾವಿರ ರೂಪಾಯಿ ನಗದಾಗಿ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೆ, ದೂರುದಾರರ ಹೆಸರಿನಲ್ಲಿ ಸುಮಾರು 78 ಸಾವಿರ ರೂಪಾಯಿ ಮೌಲ್ಯದ ಐಫೋನ್ ಅನ್ನು ಸಾಲದ ಮೂಲಕ ಖರೀದಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂದು ನಂಬಿಸಿ ದೂರುದಾರರ ಭಾವನ ಅಲ್ಟೋ ಕಾರನ್ನೂ ಪಡೆದು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಸೆಪ್ಟೆಂಬರ್ 29ರಂದು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿತ ಮಹಿಳೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.





