
ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ವೇಳೆ ಬರೋಬ್ಬರಿ 1.08 ಕೋಟಿ ಮತದಾರರ ಹೆಸರುಗಳು ಕೈಬಿಟ್ಟುಹೋಗಿವೆ ಎಂಬ ಆರೋಪದ ಬೆನ್ನಲ್ಲೇ, ಭಾರತ ಚುನಾವಣಾ ಆಯೋಗ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಾರಾಂಶ ಪರಿಷ್ಕರಣೆಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. 2027ರ ಜನವರಿ 1 ಅನ್ನು ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಲಾಗಿದ್ದು, ಪಟ್ಟಿಯಿಂದ ಬಿಟ್ಟುಹೋದ ಅರ್ಹ ಮತದಾರರು, ಯುವ ಮತದಾರರು ಹಾಗೂ ಮೊದಲ ಬಾರಿಗೆ ಮತದಾನದ ಹಕ್ಕು ಪಡೆಯುವವರ ಹೆಸರುಗಳನ್ನು ಸೇರ್ಪಡೆಗೊಳಿಸುವುದು ಈ ಪರಿಷ್ಕರಣೆಯ ಪ್ರಮುಖ ಉದ್ದೇಶವಾಗಿದೆ. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಲು ಫಾರ್ಮ್ 6, ಹೆಸರು ತೆಗೆದುಹಾಕಲು ಅಥವಾ ಆಕ್ಷೇಪಣೆ ಸಲ್ಲಿಸಲು ಫಾರ್ಮ್ 7 ಹಾಗೂ ವಿಳಾಸ ಬದಲಾವಣೆ ಮತ್ತು ಇತರ ವಿವರಗಳ ತಿದ್ದುಪಡಿಗಾಗಿ ಫಾರ್ಮ್ 8 ಅನ್ನು ಬಳಸಬಹುದಾಗಿದೆ. ಈ ಅರ್ಜಿಗಳನ್ನು ಚುನಾವಣಾ ಆಯೋಗದ voters.eci.gov.in ವೆಬ್ಸೈಟ್ ಅಥವಾ ECINET ಮೊಬೈಲ್ ಆ್ಯಪ್ ಮೂಲಕ ಆನ್ಲೈನ್ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಬಿಟ್ಟುಹೋಗದಂತೆ ಹಾಗೂ ಅನರ್ಹ ವ್ಯಕ್ತಿಗಳ ಹೆಸರು ಸೇರ್ಪಡೆಯಾಗದಂತೆ ನೋಡಿಕೊಳ್ಳಲು ಚುನಾವಣಾ ನೋಂದಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತಪ್ಪಾಗಿ ಸಾಮೂಹಿಕವಾಗಿ ಹೆಸರುಗಳನ್ನು ತೆಗೆದುಹಾಕುವುದನ್ನು ತಡೆಯಲು ಫಾರ್ಮ್ 7 ಅರ್ಜಿಗಳ ಸಲ್ಲಿಕೆಗೆ ನಿಯಂತ್ರಣ ವಿಧಿಸಲಾಗಿದೆ. ಯಾವುದೇ ಮತಗಟ್ಟೆಯಲ್ಲಿ ಮತದಾರರ ಹೆಸರು ಕಡಿತದ ಪ್ರಮಾಣ ಶೇಕಡಾ 2ನ್ನು ಮೀರಿದರೆ ಅಥವಾ ಒಬ್ಬ ವ್ಯಕ್ತಿ ಐದಕ್ಕಿಂತ ಹೆಚ್ಚು ಹೆಸರುಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಿದರೆ ಅಂತಹ ಪ್ರಕರಣಗಳನ್ನು ಚುನಾವಣಾ ನೋಂದಣಾಧಿಕಾರಿಗಳು ಖುದ್ದು ಪರಿಶೀಲನೆ ನಡೆಸಲಿದ್ದಾರೆ. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರು ಬೂತ್ ಮಟ್ಟದ ಅಧಿಕಾರಿಗಳಿಗೆ ದಿನಕ್ಕೆ ಗರಿಷ್ಠ 10 ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದಾಗಿದೆ. ಸಂಪೂರ್ಣ ಪರಿಷ್ಕರಣಾ ಅವಧಿಯಲ್ಲಿ ಒಬ್ಬ ಬೂತ್ ಮಟ್ಟದ ಏಜೆಂಟ್ 30ಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ಚುನಾವಣಾ ನೋಂದಣಾಧಿಕಾರಿ ಅಥವಾ ಸಹಾಯಕ ಚುನಾವಣಾ ನೋಂದಣಾಧಿಕಾರಿಗಳು ಕಡ್ಡಾಯವಾಗಿ ಪರಿಶೀಲನೆ ನಡೆಸಲಿದ್ದಾರೆ. ಇದೇ ವೇಳೆ ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಹೊಸ ಗುಣಮಟ್ಟದ ಫೋಟೋಗಳನ್ನು ಸಂಗ್ರಹಿಸಲಿದ್ದು, ನಕಲಿ ಮತದಾರರ ಹೆಸರುಗಳು, ನಿಧನ ಹೊಂದಿದವರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ನಿಯಮಾನುಸಾರ ಫಾರ್ಮ್ 7 ಮೂಲಕ ತೆಗೆದುಹಾಕಲು ಕ್ರಮ ಕೈಗೊಳ್ಳಲಾಗುತ್ತದೆ. ನಗರ ಪ್ರದೇಶದ ಮತದಾರರ ಅನುಕೂಲಕ್ಕಾಗಿ ಅಪಾರ್ಟ್ಮೆಂಟ್ಗಳು, ಗೃಹ ನಿರ್ಮಾಣ ಸೊಸೈಟಿಗಳು, ವಸತಿ ಸಮುಚ್ಚಯಗಳು ಹಾಗೂ ಕೊಳೆಗೇರಿ ಪ್ರದೇಶಗಳ ನೆಲಮಹಡಿಗಳಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ವ್ಯಾಪಕ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ವಲಸೆ ಕಾರ್ಮಿಕರು, ರಾತ್ರಿ ಆಶ್ರಯ ತಾಣಗಳಲ್ಲಿರುವ ನಿರಾಶ್ರಿತರು, ಮಹಿಳೆಯರು, ತೃತೀಯಲಿಂಗಿಗಳು ಹಾಗೂ ಹಿರಿಯ ನಾಗರಿಕರಿಗಾಗಿ ವಿಶೇಷ ಸಹಾಯ ಕೇಂದ್ರಗಳು ಮತ್ತು ಶಿಬಿರಗಳನ್ನು ಆಯೋಜಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಸಂವಿಧಾನದ 324ನೇ ವಿಧಿಯನ್ವಯ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಜಿಲ್ಲಾ ಚುನಾವಣಾಧಿಕಾರಿಗಳು, ಚುನಾವಣಾ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ನೋಂದಣಾಧಿಕಾರಿಗಳ ಹುದ್ದೆಗಳು ಖಾಲಿಯಿರದಂತೆ ನೋಡಿಕೊಳ್ಳಬೇಕು ಮತ್ತು ಈ ಅಧಿಕಾರಿಗಳ ವರ್ಗಾವಣೆಯ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.






