ಬೆಂಗಳೂರು: ಹೊಸ ವರ್ಷದಿಂದ ರಾಜ್ಯದಲ್ಲಿ ವಾಹನ ಸವಾರರಿಗೆ ಮತ್ತಷ್ಟು ಕಠಿಣ ಸಂಚಾರ ನಿಯಮಗಳು ಜಾರಿಗೆ ಬರಲಿವೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ. ಓಲಾ, ಉಬರ್, ನಮ್ಮ ಯಾತ್ರಿ ಸೇರಿದಂತೆ ಎಲ್ಲಾ ಕ್ಯಾಬ್ಗಳು ಹಾಗೂ ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದ್ದು, ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚರಿಸುವ ಕ್ಯಾಬ್ಗಳಿಗೂ ಈ ನಿಯಮ ಅನ್ವಯವಾಗಲಿದೆ. ವಿಯೆಟ್ನಾಂ ಮೂಲದ ಗ್ರೀನ್ ಎಸ್ಎಂ ಎಲೆಕ್ಟ್ರಿಕ್ ಟ್ಯಾಕ್ಸಿಗಳಿಗೂ ಮೀಟರ್ ಕಡ್ಡಾಯವಾಗಿದ್ದು, ಮೀಟರ್ ಇಲ್ಲದೆ ವಾಹನ ಓಡಿಸಿದರೆ ದಂಡ ವಿಧಿಸಲಾಗುತ್ತದೆ. ಈ ಸಂಬಂಧ ಕರಡು ನಿಯಮ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವುದನ್ನು ತಡೆಯುವುದು ಈ ಕ್ರಮದ ಉದ್ದೇಶವಾಗಿದೆ. ಇನ್ನು ಫುಟ್ಪಾತ್ ಮೇಲೆ ಬೈಕ್ ಅಥವಾ ಇತರ ವಾಹನಗಳನ್ನು ಚಲಾಯಿಸುವವರಿಗೆ ವಿಧಿಸುವ ದಂಡವನ್ನು ಹೆಚ್ಚಿಸಲು ಸರ್ಕಾರ ಉದ್ದೇಶಿಸಿದ್ದು, ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ 5 ಸಾವಿರ ರೂಪಾಯಿ, ಎರಡನೇ ಬಾರಿ 10 ಸಾವಿರ ರೂಪಾಯಿ ದಂಡ ವಿಧಿಸುವ ಪ್ರಸ್ತಾವನೆ ಇದೆ. ಮೂರನೇ ಅಥವಾ ನಾಲ್ಕನೇ ಬಾರಿಯೂ ಇದೇ ತಪ್ಪು ಮಾಡಿದರೆ ವಾಹನವನ್ನು ಜಪ್ತಿ ಮಾಡಲು ನಿರ್ಧರಿಸಲಾಗಿದೆ. ಪ್ರಸ್ತುತ 1 ಸಾವಿರ ರೂಪಾಯಿ ಇರುವ ದಂಡವನ್ನು 5 ಸಾವಿರ ರೂಪಾಯಿಗೆ ಹೆಚ್ಚಿಸುವ ಚಿಂತನೆ ನಡೆದಿದೆ. ಇದರ ಜತೆಗೆ ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರ ಸಿದ್ಧತೆ ನಡೆಸಿದ್ದು, ಹಾಫ್ ಹೆಲ್ಮೆಟ್ಗಳ ತಯಾರಿಕಾ ಕೇಂದ್ರಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ಅಗತ್ಯ ಕಾನೂನು ಅಂಶಗಳ ಪರಿಶೀಲನೆ ಬಹುತೇಕ ಪೂರ್ಣಗೊಂಡಿದ್ದು, ಹೊಸ ವರ್ಷದಿಂದಲೇ ಹೊಸ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ.
