
ಚಿಕ್ಕಮಗಳೂರು: ರಸ್ತೆಯಲ್ಲಿನ ಗುಂಡಿಗಳಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ರಸ್ತೆಯ ಗುಂಡಿಗೆ ಬಾಳೆಗಿಡ ನೆಟ್ಟು, ಆಲ್ದೂರಿನಿಂದ ಚಿಕ್ಕಮಗಳೂರುವರೆಗೆ 18 ಕಿಲೋಮೀಟರ್ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಚಿಕ್ಕಮಗಳೂರು–ಆಲ್ದೂರು–ಬಾಳೆಹೊನ್ನೂರು–ಶೃಂಗೇರಿ ಮಾರ್ಗದಲ್ಲಿ ಭಾರಿ ಪ್ರಮಾಣದಲ್ಲಿ ಗುಂಡಿಗಳು ಬಿದ್ದಿದ್ದು, ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಇದೇ ವೇಳೆ ಶೃಂಗೇರಿ ಶಾಸಕ ರಾಜೇಗೌಡ ಹಾಗೂ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು, ಇಬ್ಬರನ್ನು ವ್ಯಂಗ್ಯವಾಗಿ ‘ಗುಂಡಿಗಳ ಸರದಾರರು’ ಎಂದು ಟೀಕಿಸಿದರು. ಮಳೆಗಾಲದಲ್ಲಿ ಬೇಸಿಗೆ ಬರಲಿ ಎಂದು ಹೇಳುತ್ತಾರೆ, ಆದರೆ ಬೇಸಿಗೆ ಬಂದಾಗ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವುದಿಲ್ಲ ಎಂದು ಆರೋಪಿಸಿದರು. ಆಲ್ದೂರಿನಿಂದ ಆರಂಭವಾದ 18 ಕಿಲೋಮೀಟರ್ ಪಾದಯಾತ್ರೆ ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ನಲ್ಲಿ ಅಂತ್ಯಗೊಳ್ಳಲಿದೆ.
ವರದಿ: ಸಂತೋಷ್ ಅತ್ತಿಗೆರೆ





