
ರಾಜ್ಯ ಸರ್ಕಾರ ತಾನೇ ತೋಡಿಕೊಂಡ ಹಳ್ಳಕ್ಕೆ ತಾನೇ ಬೀಳುತ್ತಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಅನುರಣಿಸುತ್ತಿದೆ. ಇದೀಗ ತಾನೇ ಹಾಲಿನ ದರ ಏರಿಸಿ, ಮಧ್ಯಮ ಹಾಗೂ ಬಡ ವರ್ಗದ ಜನರ ಜೀವನಕ್ಕೆ ತಡೆದುಕೊಳ್ಳಲಾಗದಂತಹ ಪೆಟ್ಟು ಕೊಟ್ಟಿದೆ. ಹಾಲು ಉತ್ಪಾದಕ ರೈತರನ್ನು ಸಂಬಾಳಿಸುವುದಕ್ಕೋಸ್ಕರ ಸಾಮಾನ್ಯ ಗ್ರಾಹಕರ ಮೇಲೆ ಹೊರೆ ಹೊರಿಸಿದೆ. ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ದರ ಪರಿಷ್ಕರಿಸಿರುವ ಸರ್ಕಾರ ಅಲ್ಪಾವಧಿಯಲ್ಲಿಯೇ ಪುನಃ ಬೆಲೆ ಹೆಚ್ಚಿಸಿರುವುದು ನ್ಯಾಯವಲ್ಲ. ವರ್ಷ ಒಂದರಲ್ಲೇ ಎರಡು ಮೂರು ಬಾರಿ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಳ ಮಾಡಿದರೆ ಸಾಮಾನ್ಯ ಕುಟುಂಬಗಳ ಗತಿ ಏನಾಗಬೇಕು. ಪ್ರತಿನಿತ್ಯ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆಯಾದರೆ ಅದರಲ್ಲಿ ನಿತ್ಯ 60 ರಿಂದ 65 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಹಸಿರು ಮತ್ತು ನೇರಳೆ ಬಣ್ಣದ ಪ್ಯಾಕೆಟ್ಗಳ ಬೆಲೆಯನ್ನು 12 ರೂ. ಹೆಚ್ಚಿಸಿರುವುದು ಸರ್ಕಾರದ ಮಾತಿನಲ್ಲಿ ಹೇಳುವುದಾದರೆ ಏಳು ರೂ. ಉತ್ಪಾದಕ ರೈತನಿಗೆ, ಒಂದು ರೂ. ನಿರ್ವಹಣೆಗಾದರೆ ಉಳಿದ ನಾಲ್ಕು ರೂ.ಗಳ ಲೆಕ್ಕಾಚಾರ ಮಾಡಿದರೆ ದಿನ ಒಂದಕ್ಕೆ ಒಂದು ಕೋಟಿ ಇಪ್ಪತ್ತೊಂದು ಲಕ್ಷ ರೂ. ಉಳಿತಾಯ, ಮಾಸಿಕ 38 ಕೋಟಿ, ವಾರ್ಷಿಕ 461 ಕೋಟಿ ರೂ. ಗಳಿಕೆ ಎಲ್ಲಿಗೆ ಹೋಗುತ್ತದೆ?
ಗ್ರಾಹಕ ಊಹೆ ಮಾಡಿದಂತೆ ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಸಾರಿಗೆ ದರ ಏರಿಸಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಗ್ರಾಹಕನ ಮೇಲೆ ನಿರೀಕ್ಷೆಗಿಂತಲೂ ಅಧಿಕ ಹೊರೆ ಬಿದ್ದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳ ದರವನ್ನು ಶೇಕಡ 23 ರಿಂದ 35ರವರೆಗೆ ಏರಿಸಿ ಸರಿಯಾದ ಬರೆ ಎಳೆದಿರುತ್ತಾರೆ. ಬುಧವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ. ಸಾಮಾನ್ಯ ಸಾರಿಗೆಯಲ್ಲಿ ಗರಿಷ್ಠ 9 ರೂ. ಆದರೆ ಮೊದಲ ಸ್ಟೇಜಿಗೆ 12 ರೂ. ಇದ್ದದ್ದು ಈಗ 15 ರೂ.ಗೆ ಏರಿಕೆಯಾಗಿದೆ. ಹಲವು ವರ್ಷಗಳಿಂದ ಸಾರಿಗೆ ನಿಗಮಗಳು ನಷ್ಟದಲ್ಲಿ ಇವೆ. ಡೀಸೆಲ್ ದರ ಏರಿಕೆಯಾಗಿದೆ, ನೌಕರರ ವೇತನ ಹೆಚ್ಚಳ, ನಿರ್ವಹಣಾ ವೆಚ್ಚಗಳ ಹೊರೆಗಳಿಂದ ಪರಿಷ್ಕೃತ ದರ ನಿಗದಿ ಅನಿವಾರ್ಯ ಎಂದಿದೆ ಸರ್ಕಾರ. ಒಂದು ಸಮೀಕ್ಷೆಯ ಪ್ರಕಾರ ಪಕ್ಕದ ರಾಜ್ಯ ಕೇರಳ, ಗೋವಾ, ತಮಿಳುನಾಡುಗಳಿಗಿಂತ ಕರ್ನಾಟಕದಲ್ಲಿ ಸಾರಿಗೆ ದರ ಕಳೆದ ಎರಡು ಮೂರು ದಶಕಗಳಿಂದಲೂ ಅಧಿಕವಾಗಿಯೇ ಇದೆ. ಅಂತರರಾಜ್ಯ ಪ್ರವಾಸಿ ಪರವಾನಿಗೆ ಪಡೆಯಲು ನಮ್ಮ ರಾಜ್ಯದಲ್ಲೇ ಅಧಿಕ ಶುಲ್ಕವಿದೆ. ಆದ್ದರಿಂದಲೋ ಏನು ಬೇರೆಲ್ಲ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಪ್ರವಾಸಿ ಸಂಚಾರ ಕಡಿಮೆಯಿದೆ. ರಸ್ತೆ ಸುರಕ್ಷತೆ ಸುಧಾರಣೆ ಮತ್ತು ಸ್ವಚ್ಛತೆಯ ವಿಚಾರದಲ್ಲಿ ರಾಜ್ಯಕ್ಕೆ ಕೆಟ್ಟ ಹೆಸರು ಇದೆ.
ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಸೋರಿಕೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಹಾಲು ಉತ್ಪಾದಕ ರೈತರಿಗೆ ಹೊರೆಯಾಗದಂತೆ ನೇರ ಸಬ್ಸಿಡಿ ಪ್ರೋತ್ಸಾಹ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆರ್ಥಿಕ ಶಿಸ್ತನ್ನು ಹಾಳುಗೆಡವುವ ಅವೈಜ್ಞಾನಿಕ ಉಚಿತ ಯೋಜನೆಗಳ ಮರುಪರಿಶೀಲನೆ ಇಂದಿನ ಅಗತ್ಯ. ಒಂದು ಕೈಯಲ್ಲಿ ಬಿಟ್ಟಿ ಭಿಕ್ಷೆ ನೀಡಿ ಇನ್ನೊಂದು ಕೈಗೆ ತುಟ್ಟಿ ಭಾಗ್ಯ ಕರುಣಿಸಿದರೆ ಏನು ಲಾಭ? ಜನರ ಸಹನೆ ಪರೀಕ್ಷಿಸದೆ ಆರ್ಥಿಕ ಹೊಣೆಗಾರಿಕೆಯಿಂದ ಸರ್ಕಾರ ಕಾರ್ಯನಿರ್ವಹಿಸುವುದು ಇಂದಿನ ತುರ್ತಾಗಿದೆ.




