ಉಡುಪಿ: ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಮಠ ಇದೀಗ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಬ್ರಾಹ್ಮಣ ಸಮುದಾಯದ ಗುರುಪೀಠವೆಂದೇ ಗುರುತಿಸಿಕೊಂಡಿರುವ, ಶ್ರೀ ಲಕ್ಷ್ಮೀ ನರಸಿಂಹ ದೇವರ ಆರಾಧನಾ ಕ್ಷೇತ್ರವಾಗಿರುವ ಈ ಪುರಾತನ ಮಠದಲ್ಲಿ ಇದೀಗ ಪ್ರಾಚೀನ ವಿಗ್ರಹಗಳ ಕಳವು ಹಾಗೂ ಅಕ್ರಮ ಮಾರಾಟದ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಒಂದು ಕಾಲದಲ್ಲಿ ಧಾರ್ಮಿಕ ಶ್ರದ್ಧೆ ಮತ್ತು ಸಂಪ್ರದಾಯಕ್ಕೆ ಹೆಸರಾಗಿದ್ದ ಬಾಳೆಕುದ್ರು ಮಠ, ಇತ್ತೀಚಿನ ವರ್ಷಗಳಲ್ಲಿ ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಾಗುತ್ತಲೇ ಬಂದಿದೆ. ಈ ಹಿಂದೆ ಮಠದ ಪೀಠಾಧಿಪತಿಯಾಗಿದ್ದ ನೃಸಿಂಹಾಶ್ರಮ ಸ್ವಾಮೀಜಿಯವರು ಆರೋಗ್ಯ ಸಮಸ್ಯೆಯಿಂದಾಗಿ ಸನ್ಯಾಸ ಧರ್ಮದ ಆಚರಣೆಯನ್ನು ಮುಂದುವರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಮಧುಸೂದನ್ ಭಟ್ ಅವರನ್ನು ಹರಿಹರಪುರ ಹಾಗೂ ಕೈಲಾಸ ಆಶ್ರಮದ ಸ್ವಾಮೀಜಿಗಳ ನೇತೃತ್ವದಲ್ಲಿ ಪೀಠಾಧಿಪತಿಯನ್ನಾಗಿ ನೇಮಿಸಿ, ವಾಸುದೇವ ಸದಾಶಿವಾಶ್ರಮ ಎಂಬ ಬಿರುದು ನೀಡಲಾಗಿತ್ತು. ಆದರೆ ಈ ನೇಮಕಾತಿ ಆರಂಭದಿಂದಲೇ ಭಕ್ತರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಸನ್ಯಾಸತ್ವಕ್ಕೆ ಅಗತ್ಯವಾದ ಅರ್ಹತೆಗಳಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಶೃಂಗೇರಿ ಜಗದ್ಗುರುಗಳ ಕುರಿತು ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ತೀವ್ರ ವಿರೋಧ ವ್ಯಕ್ತವಾದ ಬಳಿಕ ಸ್ವಾಮೀಜಿಯವರು ಸಾರ್ವಜನಿಕವಾಗಿ ಶೃಂಗೇರಿ ಶ್ರೀಗಳ ಕ್ಷಮೆಯಾಚಿಸಿದ್ದರು. ಇದೀಗ ಮತ್ತೆ ಪ್ರಾಚೀನ ವಿಗ್ರಹಗಳ ಮಾರಾಟ ಆರೋಪದ ಮೂಲಕ ಬಾಳೆಕುದ್ರು ಮಠ ಸುದ್ದಿಯಾಗಿದೆ. ಮಠಕ್ಕೆ ಸೇರಿದ ಐತಿಹಾಸಿಕ ಮಹತ್ವವುಳ್ಳ ಪ್ರಾಚೀನ ವಿಗ್ರಹಗಳನ್ನು ಕಳವು ಮಾಡಿ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೀಠಾಧಿಪತಿ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ, ಮಠದ ಆಡಳಿತಾಧಿಕಾರಿ ಅನಿಲ್ ಕುಮಾರ್, ಸಿಬ್ಬಂದಿಗಳಾದ ಜಯಲಕ್ಷ್ಮೀ, ಶ್ರೇಯಸ್ ಹಾಗೂ ವಿಗ್ರಹ ವ್ಯಾಪಾರಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಸ್ವಾಮೀಜಿಯವರು ರಾತ್ರೋರಾತ್ರಿ ಮಠದಿಂದ ತೆರಳಿದ್ದಾರೆ ಎನ್ನಲಾಗಿದ್ದು, ಮಠಕ್ಕೂ ಬೀಗ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಮಠದಲ್ಲಿ ನಡೆಯಬೇಕಾದ ನಿತ್ಯದ ಪೂಜಾ ಕೈಂಕರ್ಯಗಳು ಹಾಗೂ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗಿರುವುದು ಭಕ್ತರಲ್ಲಿ ತೀವ್ರ ಬೇಸರ ಮೂಡಿಸಿದೆ. ತಲತಲಾಂತರಗಳಿಂದ ಭಕ್ತರು ಅತ್ಯಂತ ಶ್ರದ್ಧಾಭಕ್ತಿಯಿಂದ ಆರಾಧಿಸಿಕೊಂಡು ಬಂದಿರುವ ಶ್ರೀ ನರಸಿಂಹ ದೇವರ ಮೂಲ ವಿಗ್ರಹವೇ ಮಾರಾಟವಾಗಿದೆ ಎಂಬ ಆರೋಪ ಇದೀಗ ಭಕ್ತ ಸಮುದಾಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.




