
ಬೆಂಗಳೂರು: ಬಗರ್ ಹುಕುಂ ಸಾಗುವಳಿದಾರರಿಗೆ ರಾಜ್ಯ ಸರ್ಕಾರ ಮಹತ್ವದ ಸೂಚನೆ ನೀಡಿದೆ. ನಮೂನೆ 50 ಮತ್ತು 53ರ ಅಡಿಯಲ್ಲಿ ಸಲ್ಲಿಕೆಯಾಗಿರುವ ಬಾಕಿ ಅರ್ಜಿಗಳ ವಿಲೇವಾರಿ ಹಾಗೂ ಭೌತಿಕ ಅರ್ಜಿಗಳ ಪರಿಶೀಲನೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದೆ. 2026ರ ನವೆಂಬರ್ 4ರಂದು ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮಹಾಂತಯ್ಯ ಎಸ್. ಹೊಸಮಠ ಅವರು ಈ ಕುರಿತು ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲಾ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರ್ಕಾರಿ ಆದೇಶದ ಪ್ರಕಾರ, ನಮೂನೆ 50 ಮತ್ತು 53ರ ಅಡಿಯಲ್ಲಿ ಸಲ್ಲಿಕೆಯಾಗಿರುವ 578 ಭೌತಿಕ ಅರ್ಜಿಗಳನ್ನು ಗಣಕೀಕರಣಗೊಳಿಸುವುದು ಸೇರಿದಂತೆ ಬಾಕಿ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕಿದೆ. ಈ ಅರ್ಜಿಗಳ ವಿಲೇವಾರಿಗಾಗಿ ಪ್ರಾದೇಶಿಕ ಆಯುಕ್ತರು ಪ್ರತಿ ತಿಂಗಳು ಕಂದಾಯ ವಿಭಾಗದ ಮಟ್ಟದಲ್ಲಿ ವಿಶೇಷ ಪರಿಶೀಲನಾ ಸಭೆ ಹಾಗೂ ಕ್ಯಾಂಪ್ಗಳನ್ನು ನಡೆಸಬೇಕು. ನಮೂನೆ 50 ಮತ್ತು 53ರ ಅರ್ಜಿಗಳ ಜೊತೆಗೆ ನಮೂನೆ 57ರ ಅರ್ಜಿಗಳನ್ನೂ ಪರಿಶೀಲನೆಗೆ ಒಳಪಡಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ, ಅರ್ಜಿಗಳ ಸ್ವೀಕೃತಿ ನೋಂದಣಿ ಪುಸ್ತಕಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ನೋಂದಣಿ ಪುಸ್ತಕದಲ್ಲಿ ತಿದ್ದುಪಡಿ, ಮೇಲ್ಬರಹ ಅಥವಾ ಅಕ್ರಮ ಸೇರ್ಪಡೆಗಳಿಗೆ ಅವಕಾಶ ನೀಡಬಾರದು. ಅರ್ಜಿಗಳ ಭೌತಿಕ ದಾಖಲೆಗಳು, ಅರ್ಜಿದಾರರ ಸಹಿ ಹಾಗೂ ಲಗತ್ತಿಸಿರುವ ದಾಖಲೆಗಳನ್ನು ಕಂದಾಯ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ. ಅನುಮಾನಾಸ್ಪದ ಅರ್ಜಿಗಳಲ್ಲಿ ಸಹಿ, ಕೈಬರಹ ಅಥವಾ ನೋಂದಣಿ ದಾಖಲೆಗಳ ಬಗ್ಗೆ ಸಂಶಯವಿದ್ದಲ್ಲಿ, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ ಅಂದರೆ ಎಫ್ಎಸ್ಎಲ್ಗೆ ಕಳುಹಿಸಿ ಪರಿಶೀಲನೆ ನಡೆಸಬೇಕು. ಅಲ್ಲದೆ, ಬಾಕಿ ಇರುವ ಪ್ರಕರಣಗಳ ಪೈಕಿ ಸ್ಪಷ್ಟವಾಗಿ ಪರಿಶೀಲನೆಗೆ ಅರ್ಹವಾಗಿರುವ ಪ್ರಕರಣಗಳನ್ನು ಮಾತ್ರ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. ಮುಖ್ಯವಾಗಿ, ಎಲ್ಲಾ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಈ ಪ್ರಕ್ರಿಯೆಯನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ, ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಬೇಕು. ಈ ಸಂಪೂರ್ಣ ಪ್ರಕ್ರಿಯೆಯನ್ನು 2026ರ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸುವಂತೆ ಸರ್ಕಾರ ಗಡುವು ವಿಧಿಸಿದೆ. ಒಟ್ಟಿನಲ್ಲಿ, ಬಗರ್ ಹುಕುಂ ಅಡಿಯಲ್ಲಿ ಭೂಮಿ ಮಂಜೂರಾತಿಗಾಗಿ ಹಲವು ವರ್ಷಗಳಿಂದ ಕಾಯುತ್ತಿರುವ ರೈತರಿಗೆ ಈ ಆದೇಶ ಮಹತ್ವದ್ದಾಗಿದ್ದು, ಬಾಕಿ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಯಾವ ರೀತಿಯಲ್ಲಿ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.




