
ಉಡುಪಿ: ಪೆರ್ಡೂರಿನಲ್ಲಿ ಇತ್ತೀಚೆಗೆ ನಡೆದ ಪ್ರೇಮ ಪ್ರಕರಣ ಸಾವಿನಲ್ಲಿ ಅಂತ್ಯಗೊಂಡಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಯುವಕ-ಯುವತಿಯ ನಡುವಿನ ಪ್ರೀತಿ ದ್ವೇಷಕ್ಕೆ ತಿರುಗಿ ದುರಂತ ಅಂತ್ಯ ಕಂಡಿರುವ ಪ್ರಕರಣದಲ್ಲಿ ಎರಡೂ ಕಡೆಯ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಆಗ್ರಹಿಸಿದ್ದಾರೆ. ಕಾರ್ಕಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಮೊದಲ ಸಂತ್ರಸ್ತ ಯುವತಿಗೆ ಹಾಗೂ ಮೃತಪಟ್ಟ ಪ್ರದೀಪ್ ಪೂಜಾರಿಗೂ ನ್ಯಾಯ ದೊರೆಯಬೇಕು. ಪ್ರಕರಣದ ಹಿಂದಿರುವ ನೈಜ ಕಾರಣಗಳನ್ನು ಪೊಲೀಸ್ ಇಲಾಖೆ ಸಮಗ್ರವಾಗಿ ತನಿಖೆ ನಡೆಸಿ ಜನರ ಮುಂದೆ ತರಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಪ್ರಕರಣವನ್ನು ಮುಂದಿಟ್ಟುಕೊಂಡು ಎರಡು ಸಮಾಜಗಳ ನಡುವೆ ಸಂಘರ್ಷ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ ಅವರು, ಪ್ರದೀಪ್ ಪೂಜಾರಿಯ ಮೃತದೇಹ ಸಾಗಿಸುತ್ತಿದ್ದ ವಾಹನದಲ್ಲಿದ್ದ ವ್ಯಕ್ತಿಯೊಬ್ಬರು ಆತ್ರಾಡಿಯಲ್ಲಿ ಸೊರಕೆಯವರ ಭಾಷಣ ನಡೆಯುತ್ತಿದೆ, ದಿಕ್ಕಾರ ಕೂಗೋಣ ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವುದು ಆತಂಕಕಾರಿ ಸಂಗತಿ ಎಂದರು. ಪ್ರದೀಪ್ ಪೂಜಾರಿ ಬದುಕಿದ್ದಾಗ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಿದ್ದವರು, ಇದೀಗ ಅವರ ಸಾವಿನ ನಂತರ ಹಿಂದೂ ಕಾರ್ಯಕರ್ತ ಎಂದು ಬಿಂಬಿಸುತ್ತಿದ್ದಾರೆ. ಅಲ್ಲದೆ, ಪ್ರದೀಪ್ ಸಾವಿನ ಹಿಂದೆ ಕಾಂಗ್ರೆಸ್ ನಾಯಕರಿದ್ದಾರೆ ಎಂದು ಆರೋಪಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಶುಭದರಾವ್ ಆರೋಪಿಸಿದರು. ಈ ವಿಚಾರದಲ್ಲಿ ಶಾಸಕ ಸುನೀಲ್ ಕುಮಾರ್ ಅವರ ರಾಜಕೀಯ ನಿಲುವಿನ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದರು. ಇನ್ನು ಕಾರ್ಕಳದ ತೆಳ್ಳಾರಿನ ದಿನೇಶ್ ಪೂಜಾರಿ ಅವರ ಸಾವಿನ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು. ಸಾವಿಗೂ ಮುನ್ನ ದಿನೇಶ್ ಪೂಜಾರಿ ಶಾಸಕರ ವಿರುದ್ಧ ಗಂಭೀರ ಆರೋಪಗಳನ್ನು ಒಳಗೊಂಡ ಆಡಿಯೋ ಬಿಡುಗಡೆ ಮಾಡಿದ್ದರು. ಆಡಿಯೋ ವೈರಲ್ ಆದ ದಿನವೇ ಅವರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದರು. ದಿನೇಶ್ ಪೂಜಾರಿ ಅವರ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡವರಿಗೆ ಪೊಲೀಸರು ಕರೆ ಮಾಡಿ ಅದನ್ನು ಅಳಿಸುವಂತೆ ಸೂಚಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಆಡಿಯೋದಲ್ಲಿ ಅಂಥದ್ದೇನು ವಿಚಾರವಿದೆ ಎಂಬುದನ್ನು ತನಿಖೆ ಮೂಲಕ ಬಹಿರಂಗಪಡಿಸಬೇಕು. ಪ್ರದೀಪ್ ಪೂಜಾರಿ ಸಾವಿನ ಬಗ್ಗೆ ಮಾತನಾಡುವವರು ದಿನೇಶ್ ಪೂಜಾರಿ ಸಾವಿನ ವಿಚಾರದಲ್ಲಿ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ ಅವರು, ದಿನೇಶ್ ಪೂಜಾರಿ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಕಳ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಂದ್ರ ದೇವಾಡಿಗ ಹಾಗೂ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುದರ್ಶನ್ ಬಂಗೇರ ಉಪಸ್ಥಿತರಿದ್ದರು.





