
ಇದೊಂದು ಸಂಗತಿಯ ಬಗ್ಗೆ ಅದೆಷ್ಟು ಬಾರಿ ಬರೆದಿದ್ದೇನೋ. ಪ್ರತಿ ಬಾರಿಯೂ ಹೊಸ ಸಂಗತಿಯೊಂದಿಗೆ ಮತ್ತದೇ ವಿಷಯವನ್ನು ಪ್ರಸ್ತಾಪಿಸುತ್ತೇನೆ. ಬೇರೆನಲ್ಲ. ಸಾಮಾಜಿಕ ಜಾಲತಾಣಗಳ ಬಗ್ಗೆ, ಅದನ್ನು ನಾವು ಬಳಸುತ್ತಿರುವ ರೀತಿಯ ಕುರಿತಾಗಿ ನಾನೀಗ ಹೇಳ ಹೊರಟಿದ್ದೇನೆ. ಇತ್ತೀಚೆಗೆ ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿಕೊಳ್ಳುವ ಕ್ರೇಜ್ ಹೆಚ್ಚುತ್ತಿದೆ. ತಾವು ಸಂಭ್ರಮಿಸಿದ ಕ್ಷಣಗಳು, ಯಾರದೋ ಮದುವೆ, ಹುಟ್ಟುಹಬ್ಬ, ಸಿಕ್ಕ ಪ್ರಶಸ್ತಿ ಸನ್ಮಾನ, ಗಣ್ಯರೊಂದಿಗೆ ತೆಗೆಸಿಕೊಂಡ ಪೋಟೊಗಳು.. ಹೀಗೆ ಸ್ಟೇಟಸ್ನಲ್ಲಿ ಹತ್ತಾರು ರೀತಿಯ ಪೋಟೊಗಳನ್ನು ಹಾಕಿಕೊಳ್ಳುವುದನ್ನು ನಾವು ಗಮನಿಸುತ್ತೇವೆ. ಅಫ್ ಕೋರ್ಸ್ ನಾವು ಕೂಡ ಇಂತಹ ಪೋಟೊಗಳನ್ನು ಅಪ್ಲೋಡ್ ಮಾಡುತ್ತೇವೆ. ಇದು ನಮ್ಮ ಸಾಧನೆಯನ್ನ, ಇತರರ ಮೇಲಿನ ನಮ್ಮ ಅಭಿಮಾನವನ್ನ ತೋರಿಸಿಕೊಳ್ಳಲು ಇರುವ ಮಾರ್ಗ. ಇಷ್ಟೇ ಆಗಿದ್ದರೆ ಇದರಲ್ಲಿ ತಪ್ಪೇನೂ ಇಲ್ಲ. ಆದರೆ ಮಂಗನ ಕೈಗೆ ಸಿಕ್ಕ ಮಾಣಿಕ್ಯದಂತಾಗಿರುವ ಮೊಬೈಲ್ನ್ನು ನಾವು ಬೇಕಾಬಿಟ್ಟಿ ಬಳಸುತ್ತಿದ್ದೇವೆ ಎಂಬುದನ್ನು ಮರೆಯುತ್ತಿದ್ದೇವೆ. ನಾನು ತುಂಬಾ ಬಾರಿ ಹೇಳಿದ್ದೇನೆ. ನಾವು ಹಾಕುವ ಸ್ಟೇಟಸ್, ಸಂದೇಶಗಳು ನಮ್ಮ ಅಭಿರುಚಿ, ಜ್ಞಾನ, ಕೆಲವೊಮ್ಮೆ ನಮ್ಮ ವ್ಯಕ್ತಿತ್ವವನ್ನು ಅನಾವರಣ ಮಾಡಿಬಿಡುತ್ತದೆ. ಬಹುಶಃ ನೀವು ಗಮನಿಸಿರಬಹುದು ಇತ್ತೀಚಿನ ದಿನಗಳಲ್ಲಿ ಯಾವುದೇ ಘಟನೆಗಳಾದರೂ ಅವುಗಳ ವಿಡಿಯೋ ನಮ್ಮ ಮೊಬೈಲ್ಗಳಲ್ಲಿ ಹರಿದಾಡುತ್ತವೆ. ಸಿ.ಸಿ ಕ್ಯಾಮರಾದಲ್ಲಿ ಸೆರೆಯಾದ ಅಪಘಾತ ದೃಶ್ಯ, ನೆರೆಯ ತುಣುಕು, ಆತ್ಮಹತ್ಯೆಯ ಲೈವ್ ವಿಡಿಯೋಗಳು ಹರಿದಾಡುವುದನ್ನು ಗಮನಿಸಿದ್ದೇವೆ. ಮೊನ್ನೆ ಪರಿಚಿತರೊಬ್ಬರ ಸ್ಟೇಟಸ್ನಲ್ಲಿ ಹುಡುಗಿಯೊಬ್ಬಳು ತನ್ನ ವೇಲ್ನಿಂದ ಫ್ಯಾನಿಗೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ನೇತಾಡುತ್ತಿರುವ ವೀಡಿಯೋ ಹಾಕಿಕೊಂಡಿದ್ದರು. ನಾನು ಅವರ ಪರಿಚಿತರಿರಬಹುದೇನೋ ಎಂದುಕೊಂಡು ಯಾರಿದು? ಎಂದು ಕೇಳಿದೆ. ಗೊತ್ತಿಲ್ಲ ಯಾರೋ ಕಳುಹಿಸಿದ್ದು… ಎಂದರು. ಅರೇ ಇದೆಂತಹ ವಿಕೃತಿ. ಪ್ರಾಣ ಕಳೆದುಕೊಂಡ ಹುಡುಗಿಯೊಬ್ಬಳ ವೀಡಿಯೋವನ್ನ ಸ್ಟೇಟಸ್ಗೆ ಹಾಕುವ ಅಗತ್ಯವಾದರೂ ಏನಿರುತ್ತದೆ? ಒಬ್ಬರ ಸಾವಿಗೆ ಅದೂ ಅಸಹಜ ಸಾವಿಗೆ ಯಾವ ವೇದನೆ, ಸಂಕಟವು ಇಲ್ಲದೆ ಹಾಕಿಕೊಳ್ಳುವಷ್ಟು ಕಠೋರವಾಗಿದೆಯಾ ನಮ್ಮ ಮನಸ್ಸು? ಇದು ಮಾತ್ರವಲ್ಲ ನೀರಿನಲ್ಲಿ ಮುಳುಗುವ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುವಂತಹ ವೀಡಿಯೋಗಳು ಇಂದು ಸ್ಟೇಟಸ್ನಲ್ಲಿ ಕಾಣುತ್ತಿದ್ದೇವೆ. ಭಗವಂತ.. ನಮ್ಮ ಮನಸ್ಸು ಅಷ್ಟೇಕೆ ನಿರ್ದಯಿಯಾಗಿಬಿಟ್ಟಿದೆ? ಇವು ವೀಡಿಯೋಗಳ ಸಂಗತಿಯಾದರೆ ಭಾವನೆಗಳಿಗೆ ಸಂಬಂಧಿಸಿದ ತಿಕ್ಕಲುತನ ಹೇಗಿರುತ್ತದೆ ಎಂಬುದಕ್ಕೊಂದು ಉದಾಹರಣೆ ನೀಡುತ್ತೇನೆ ಕೇಳಿ. ನನ್ನ ಅಪರಿಚಿತ ಓದುಗ ಹುಡುಗಿಯೊಬ್ಬಳು ತನ್ನ ಸ್ಟೇಟಸ್ನಲ್ಲಿ ಈ ಜಗತ್ತಿನಲ್ಲಿ ನಿಜವಾದ ನಂಬಿಕಸ್ಥರು ಯಾರೂ ಇಲ್ಲ ಎಂಬುದಾಗಿ ಬರೆದುಕೊಂಡಿದ್ದಳು. ನಾನು ನಮ್ಮ ಆಫೀಸಿಗೆ ಬಾ ನಿಂಗೆ ನಂಬಿಕಸ್ಥರನ್ನು ತೋರಿಸುತ್ತೇನೆ ಅಂತ ಕಿಚಾಯಿಸಿದೆ. ಸರ್ ನಿಮ್ಮ ಆಫೀಸ್ ಎಲ್ಲಿದೆ ಅಂತ ಮರುಪ್ರಶ್ನೆ ಹಾಕಿದಳು. ಕರೆ ಮಾಡಿ ಯಾಕಮ್ಮ ಹಾಗೆ ಸ್ಟೇಟಸ್ ಹಾಕಿದೀಯಾ ಅಂತ ಕೇಳಿದೆ. ನನ್ನ ಫ್ರೆಂಡ್ಸ್ ನಂಗೆ ಮೋಸ ಮಾಡಿದ್ರು ಸರ್ ಅದಿಕ್ಕೆ ಅಂದಳು. ಯಾರೋ ಇಬ್ಬರು ಗೆಳತಿಯರು ಮೋಸ ಮಾಡಿದ್ದಕ್ಕೆ ಜಗತ್ತಿನ ನಂಬಿಕೆಯ ಅಸ್ತಿತ್ವ ಪ್ರಶ್ನೆ ಮಾಡಿದೀಯಲ್ಲ. ಅಸಲಿಗೆ ನಿಂಗೆ ನಮ್ಮ ಆಫೀಸ್ ಗೊತ್ತಿಲ್ಲ. ಅಂದ ಮೇಲೆ ನೀನು ಜಗತ್ತನ್ನು ಪೂರ್ತಿ ನೋಡಿಯೇ ಇಲ್ಲ. ಕಣ್ತೆರೆದು ನೋಡು ನಿನ್ನ ಪಕ್ಕದಲ್ಲಿ ನಂಬಿಕಸ್ಥ ಗೆಳತಿ ನಿಂತಿರುತ್ತಾಳೆ ಎಂದೆ. ತಕ್ಷಣ ಆ ಸ್ಟೇಟಸ್ ಡಿಲೀಟ್ ಮಾಡಿದಳು. ಇನ್ನು ಕೆಲವರದ್ದು ವಿಚಿತ್ರ ಚಾಲೆಂಜ್. ಈ ಸಂದೇಶ ಎಲ್ಲರಿಗೂ ಕಳುಹಿಸಿ ನಿಮ್ಮ ಚಂದದ್ದೊಂದು ಪೊಟೋ ಕಳುಹಿಸಲು ಹೇಳಿ ಮತ್ತು ನೀವದನ್ನು ಸ್ಟೇಟಸ್ಗೆ ಹಾಕಿಕೊಳ್ಳಿ… ನಾನ್ಸೆನ್ಸ್! ಇಂತಹ ಮೂರ್ಖ ಕೆಲಸ ಮಾಡುವವರು ಕೂಡ ಇದ್ದಾರೆ. ಇಲ್ಲಿ ಒಂದು ಸಂಗತಿ ಹೇಳಿಬಿಡುತ್ತೇನೆ. ಈ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ, ಆತ್ಮೀಯನಾಗುವ ವ್ಯಕ್ತಿಯ ಹಿನ್ನಲೆ ನಮಗೆ ಗೊತ್ತಿರುವುದಿಲ್ಲ. ಆತ ಕಳುಹಿಸುವ ಸಂದೇಶಗಳಿಂದಾಗಿ ಮಾತ್ರ ನಾವು ಅವನನ್ನು ಒಳ್ಳೆಯವ ಎಂದುಕೊಂಡಿರುತ್ತೇವೆ. ಹೊರಗೆ ನಾಲ್ಕು ಜನರ ಮದ್ಯೆ ಆತನ ಇಮೇಜು ಹೇಗಿದೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಅಂತಹವರ ಪೋಟೋ ನಮ್ಮ ಸ್ಟೇಟಸ್ನಲ್ಲಿ ಹಾಕಿಕೊಂಡಾಗ ಅದನ್ನು ನೋಡಿದ ಇತರರು ನಮ್ಮನ್ನು ಹೇಗೆ ನೋಡಿಯಾರು? ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮದೇ ಬಂಧು-ಬಳಗದಲ್ಲಿ ನಮ್ಮ ವರ್ಚಸ್ಸು ಹೇಗಾಗಬಹುದು? ಇದನ್ನೆಲ್ಲ ಅರಿಯುವ ವಿವೇಚನೆ ನಮಗೆ ಯಾಕಿರುವುದಿಲ್ಲ? ಇತ್ತೀಚೆಗೆ ಶಿಕ್ಷಕಿಯೊಬ್ಬರು ತನ್ನ ಮಗಳು ನನ್ನನ್ನು ತಿರಸ್ಕಾರದಿಂದ ನೋಡುತ್ತಿದ್ದಾಳೆ ಎಂದರು. ಪಿಯುಸಿ ಮಗಳನ್ನು ಕೂರಿಸಿ ಕೇಳಿದರೆ ಅಮ್ಮಾ ತುಂಬಾ ಪೋನಿನಲ್ಲಿ ಮಾತಾಡುತ್ತಿರುತ್ತಾರೆ. ಯಾಕೋ ನಂಗದು ಇಷ್ಟವಿಲ್ಲ ಎಂದಳು! ನಿಜ ಪೋನು, ಸ್ಟೇಟಸ್ಸು, ಮೆಸೇಜು ಇವು ನಿಮ್ಮ ಖಾಸಗಿ ಸಂಗತಿಗಳೇ.. ಆದರು ಇದು ನಿಮ್ಮ ವ್ಯಕ್ತಿತ್ವ, ಮತ್ತು ಸಂಬಂಧಕ್ಕೆ ಹಾನಿ ಮಾಡಬಾರದು. ಹಾಗೆಯೇ ಕೊನೆಯದಾಗಿ ಒಂದು ಮಾತು. ದುಃಖದ ಸಂದೇಶಕ್ಕಿಂತ ಬದುಕುವ ಛಲ ಹುಟ್ಟಿಸುವ, ನಮ್ಮಲ್ಲೊಂದು ಸ್ಫೂರ್ತಿ ತುಂಬುವ ಸಂದೇಶಗಳನ್ನು ಹರಿದಾಡಿಸಿ ಇದು ನಿಮ್ಮನ್ನ ಹಾಗೂ ನಿಮ್ಮ ಸ್ನೇಹಿತರನ್ನ ಖುಷಿಯಾಗಿರಿಸುತ್ತದೆ. ಎಲ್ಲದಕ್ಕಿಂತ ನಿಮ್ಮ ವ್ಯಕ್ತಿತ್ವಕ್ಕೊಂದು ತೂಕ ನೀಡುತ್ತದೆ ಹೌದಲ್ವಾ?







