
ದೇಶ ವಿದೇಶಗಳಲ್ಲಿ ಪ್ರಖ್ಯಾತವಾದ ಮೈಸೂರು ದಸರಾ ಮಹೋತ್ಸವದಷ್ಟೇ ಅದ್ದೂರಿಯಾಗಿ ನಡೆಯುವುದು ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ನಡೆಯುವ ನವರಾತ್ರಿ ಮಹೋತ್ಸವ. ಪ್ರಕೃತ ಪರಾಭನಾಮ ಸಂವತ್ಸರದ ಶರನ್ನವರಾತ್ರಿ ಮಹೋತ್ಸವವನ್ನು ಭಾದ್ರಪದ ಕೃಷ್ಣ ಅಮಾವಾಸ್ಯೆಯಿಂದ ಏಕಾದಶಿಯವರೆಗೆ ( ದಿನಾಂಕ 10:10:2026 ರಿಂದ 22:10:2026 ರವರೆಗೆ ) ಶೃಂಗೇರಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಸಲು ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಸಂಕಲ್ಪಿಸುತ್ತಾರೆ.
ಅದರಂತೆಯೇ ಅಕ್ಟೋಬರ್ 10, ಶನಿವಾರದಂದು ಭಾದ್ರಪದ ಕೃಷ್ಣ ಅಮವಾಸ್ಯೆ ಪ್ರಯುಕ್ತ ಶ್ರೀ ಶಾರದಾಂಬ ಮಹಾಭಿಷೇಕ ಮತ್ತು ಜಗತ್ಪ್ರಸೂತಿಕಾಲಂಕಾರ ನಡೆಯಲಿದೆ. 11, ಭಾನುವಾರದಂದು ಆಶ್ವಯುಜ ಶುಕ್ಲ ಪ್ರತಿಪತ್ ಪ್ರಯುಕ್ತ ಶ್ರೀ ಶಾರದಾಪ್ರತಿಷ್ಠೆ ಮತ್ತು ಹಂಸವಾಹನಾಲಂಕಾರ. 12, ಸೋಮವಾರದಂದು ಆಶ್ವಯುಜ ಶುಕ್ಲ ದ್ವಿತೀಯಾ ಪ್ರಯುಕ್ತ ಹಂಸವಾಹನ ಅಲಂಕಾರ ನಡೆಯಲಿದೆ. 13, ಮಂಗಳವಾರದಂದು ಆಶ್ವಯುಜ ಶುಕ್ಲ ತೃತೀಯಾ ಪ್ರಯುಕ್ತ ವೃಷಭವಾಹನಾಲಂಕಾರ. 14, ಬುಧವಾರದಂದು ಆಶ್ವಯುಜ ಶುಕ್ಲ ಚತುರ್ಥಿ ಪ್ರಯುಕ್ತ ಮಯೂರವಾಹನಾಲಂಕಾರ. 15, ಗುರುವಾರ ಆಶ್ವಯುಜ ಶುಕ್ಲ ಪಂಚಮಿ ಪ್ರಯುಕ್ತ ಗರುಡವಾಹನಾಲಂಕಾರ. 16, ಶುಕ್ರವಾರ ಆಶ್ವಯುಜ ಶುಕ್ಲ ಷಷ್ಠಿ ಪ್ರಯುಕ್ತ ಮೂಲ ನಕ್ಷತ್ರ ಸರಸ್ವತ್ಯಾವಾಹನೆ, ವೀಣಾಶಾರದಾಲಂಕಾರ, ಶತಚಂಡೀಯಾಗದ ಪ್ರಯುಕ್ತ ಶಾಲಾಪ್ರವೇಶ ಮತ್ತು ಪುರಶ್ಚರಣಾರಂಭ. 17, ಶನಿವಾರದಂದು ಆಶ್ವಯುಜ ಶುಕ್ಲ ಸಪ್ತಮಿ ಪ್ರಯುಕ್ತ ಇಂದ್ರಾಣೀ ಅಲಂಕಾರ. 18, ಭಾನುವಾರದಂದು ಆಶ್ವಯುಜ ಶುಕ್ಲ ಅಷ್ಟಮಿ ಪ್ರಯುಕ್ತ ಮೋಹಿನೀ ಅಲಂಕಾರ. 19, ಸೋಮವಾರ ಆಶ್ವಯುಜ ಶುಕ್ಲ ಅಷ್ಟಮಿ ರಾಜರಾಜೇಶ್ವರೀ ಅಲಂಕಾರ. 20, ಮಂಗಳವಾರ ಆಶ್ವಯುಜ ಶುಕ್ಲ ನವಮಿ ಪ್ರಯುಕ್ತ ಮಹಾನವಮಿ, ಸಿಂಹವಾಹನಾ ಲಂಕಾರ, ಶತಚಂಡೀಯಾಗದ ಪೂರ್ಣಾಹುತಿ, ಗಜಾಶ್ವಪೂಜೆ ಮತ್ತು ಸಂಜೆ ವಿಜಯೋತ್ಸವ, ಶಮೀಪೂಜೆ. 21, ಬುಧವಾರ ಆಶ್ವಯುಜ ಶುಕ್ಲ ದಶಮಿ ಪ್ರಯುಕ್ತ ವಿಜಯದಶಮಿ, ಗಜಲಕ್ಷ್ಮೀ ಅಲಂಕಾರ, ಬೆಳಗ್ಗೆ – ಲಕ್ಷ್ಮೀನಾರಾಯಣಹೃದಯ ಹೋಮ ಮತ್ತು ರಾಮಪಟ್ಟಾಭಿಷೇಕ ಸರ್ಗ ಪಾರಾಯಣೆ. 22, ಗುರುವಾರ ಅಶ್ವಯುಜ ಶುಕ್ಲ ಏಕಾದಶಿ ಪ್ರಯುಕ್ತ ಗಜಲಕ್ಷ್ಮೀ ಅಲಂಕಾರ, ಶ್ರೀ ಶಾರದಾಂಬಾ ಮಹಾರಥೋತ್ಸವ ಮತ್ತು ಶ್ರೀಜಗದ್ಗುರು ಮಹಾಸ್ವಾಮಿಗಳವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.
ಪ್ರತಿಪತ್ತಿನಿಂದ ನವಮಿಯವರೆಗೂ ಪ್ರತಿನಿತ್ಯ ವೇದ – ಪುರಾಣ – ಇತಿಹಾಸ ಪ್ರಸ್ಥಾನತ್ರಯಭಾಷ್ಯ – ಪಾರಾಯಣೆಗಳು, ಉಭಯ ಶ್ರೀಗಳವರಿಂದ ಶ್ರೀ ಶಾರದಾ ಅಮ್ಮನವರಿಗೆ ವಿಶೇಷ ಪೂಜೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀಶಾರದಾ ಅಮ್ಮನವರಿಗೆ ಡೋಲೋತ್ಸವ (ಉಯ್ಯಾಲೆ ಸೇವೆ), ಅಮ್ಮನವರ ಬೀದಿ ಉತ್ಸವ, ರಾತ್ರಿ ಶ್ರೀಶಾರದಾ ಅಮ್ಮನವರಿಗೆ ಬಂಗಾರದ ದಿಂಡೀ ಉತ್ಸವ, ಜಗದ್ಗುರು ಶ್ರೀ ಸನ್ನಿಧಾನಂಗಳವರಿಂದ ದರ್ಬಾರು, ಮಹಾ ಮಂಗಳಾರತಿ, ಅಷ್ಟಾವಧಾನಸೇವೆ ನಡೆಯುತ್ತವೆ.





