
ಮಲೆನಾಡಿನ ಹೃದಯ ಭಾಗದಲ್ಲಿರುವ ಹೊರನಾಡಿನ ಶ್ರೀಮಾತಾ ಅನ್ನಪೂರ್ಣೇಶ್ವರಿ ಶ್ರೀ ಕ್ಷೇತ್ರದಲ್ಲಿ ಅಕ್ಟೋಬರ್ 11ರಿಂದ 24ರವರೆಗೆ ಶರನ್ನವರಾತ್ರಿ ಮಹೋತ್ಸವ, ಶ್ರೀಮನ್ ಮಹಾ ಚಂಡಿಕಾ ಹೋಮ, ಧರ್ಮಕರ್ತರ ಪಟ್ಟಾಭಿಷೇಕೋತ್ಸವ ಹಾಗೂ ಜೀವ-ಭಾವ ಕಾರ್ಯಕ್ರಮದ ಅಂಗವಾಗಿ ಶ್ರೀಮಾತಾ ಪ್ರಶಸ್ತಿ ಪ್ರಧಾನ ಸಮಾರಂಭ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ. ಮಹೋತ್ಸವದ ಅಂಗವಾಗಿ ಪ್ರತಿನಿತ್ಯ ಸಪ್ತಶತಿ, ನಾಲ್ಕು ವೇದಗಳು, ಸುಂದರಕಾಂಡ ಹಾಗೂ ದೇವಿ ಭಾಗವತ ಪಾರಾಯಣ, ಕುಂಕುಮಾರ್ಚನೆ, ವಾದ್ಯಸಂಗೀತ, ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ, ಶ್ರೀಮಾತೆಗೆ ರಥೋತ್ಸವ ಸೇವೆ ಹಾಗೂ ರಾತ್ರಿ ಮಹಾಮಂಗಳಾರತಿ ನಂತರ ಅಷ್ಟಾವಧಾನ ಸೇವೆ ನಡೆಯಲಿದೆ. ಅಕ್ಟೋಬರ್ 11ರಿಂದ 21ರವರೆಗೆ ಪ್ರತಿದಿನ ಸಂಜೆ ಮಹಾಭಾರತ ಕಾವ್ಯವಾಚನ, ನಾದಸ್ವರ ವಾದನ ಹಾಗೂ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ನಡೆಯಲಿದೆ.
ಅಕ್ಟೋಬರ್ 11ರಂದು ಹಂಸಾರೂಢ ಸರಸ್ವತಿ ಅಲಂಕಾರ, ಪಂಚದುರ್ಗ ಹೋಮದ ಪೂರ್ಣಾಹುತಿ ಹಾಗೂ ಮಹಿಷಾಸುರ ಮರ್ದಿನಿ ಹರಿಕಥೆ ನಡೆಯಲಿದ್ದು, ಸಂಜೆ ನೃತ್ಯ ಕಾರ್ಯಕ್ರಮವೂ ಜರುಗಲಿದೆ. ಅಕ್ಟೋಬರ್ 12ರಂದು ಗಜಾರೂಢ ಬ್ರಹ್ಮಚಾರಿಣಿ ಅಲಂಕಾರ, ಮಹಾಲಕ್ಷ್ಮಿ ಮೂಲಮಂತ್ರ ಹೋಮದ ಪೂರ್ಣಾಹುತಿ, ಭಕ್ತಿಗೀತೆ ಹಾಗೂ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 13ರಂದು ಸಿಂಹಾರೂಢ ಚಂದ್ರಘಂಟಾ ಅಲಂಕಾರ ಹಾಗೂ ಪುರುಷಸೂಕ್ತ ಹೋಮದ ಪೂರ್ಣಾಹುತಿ ನೆರವೇರಲಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಅಕ್ಟೋಬರ್ 14ರಂದು ಕೂಷ್ಮಾಂಡ ಅಲಂಕಾರ, ಶ್ರೀಸೂಕ್ತ ಹೋಮದ ಪೂರ್ಣಾಹುತಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಸನಾತನಿ ನೃತ್ಯ ರೂಪಕ ನಡೆಯಲಿದೆ. ಅಕ್ಟೋಬರ್ 15ರಂದು ಸ್ಕಂದಮಾತೆ ಅಲಂಕಾರ, ಶ್ರೀಲಲಿತ ಮೂಲಮಂತ್ರ ಹೋಮ ಹಾಗೂ ಭಕ್ತಿಸಂಗೀತ ಮತ್ತು ಭರತನಾಟ್ಯ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 16ರಂದು ಕಾತ್ಯಾಯನಿ ಅಲಂಕಾರ, ಸರಸ್ವತಿ ಮೂಲಮಂತ್ರ ಹೋಮ ಹಾಗೂ ಶ್ರೀಶಾರದಾ ಪೂಜೆ ನೆರವೇರಲಿದ್ದು, ಭಕ್ತಿಸಂಗೀತ ಮತ್ತು ಯಕ್ಷಗಾನದಲ್ಲಿ ‘ಶ್ರೀಕೃಷ್ಣಾರ್ಜುನ ಕಾಳಗ’ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಅಕ್ಟೋಬರ್ 17ರಂದು ಗೌರಿ ಅಲಂಕಾರ, ವಾಗೀಶ್ವರಿ ಮೂಲಮಂತ್ರ ಹೋಮ, ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಸಂಗಮ ನಡೆಯಲಿದೆ. ಅಕ್ಟೋಬರ್ 18ರಂದು ತ್ರಿಮೂರ್ತಿ ಅಲಂಕಾರ, ದುರ್ಗಾ ಮೂಲಮಂತ್ರ ಹೋಮದ ಪೂರ್ಣಾಹುತಿ, ಭಕ್ತಿಸಂಗೀತ ಹಾಗೂ ಗಿಟಾರ್ ಮತ್ತು ವಯಲಿನ್ ವೈವಿಧ್ಯಮಯ ಸಂಗೀತ ಕಾರ್ಯಕ್ರಮ ಜರುಗಲಿದೆ. ಅಕ್ಟೋಬರ್ 19ರಂದು ತ್ರಿಮೂರ್ತಿ ಅಲಂಕಾರ, ಬಾಲ ತ್ರಿಪುರಸುಂದರಿ ಹೋಮದ ಪೂರ್ಣಾಹುತಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯ ನಡೆಯಲಿದೆ. ಅಕ್ಟೋಬರ್ 20ರಂದು ಸಿದ್ಧಿದಾತ್ರಿ ಅಲಂಕಾರ, ಚಂಡಿಕಾ ಮೂಲಮಂತ್ರ ಹೋಮ ಹಾಗೂ ಆಯುಧ ಪೂಜೆ ನಡೆಯಲಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಕಾರ್ಯಕ್ರಮಗಳು ಜರುಗಲಿವೆ. ಅಕ್ಟೋಬರ್ 21ರಂದು ವಿಜಯದಶಮಿ ವಿಜಯೋತ್ಸವದ ಅಂಗವಾಗಿ ಸಂಜೆ ಪೌಜಿನ ಮೆರವಣಿಗೆ ನಡೆಯಲಿದ್ದು, ದಿನವಿಡೀ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಅಕ್ಟೋಬರ್ 22ರಂದು ಶ್ರೀ ಉದ್ಭವ ಗಣಪತಿ ಹಾಗೂ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ, ಅಥರ್ವಶೀರ್ಷ ಹೋಮ, ಪವಮಾನ ಅಭಿಷೇಕ ಮತ್ತು ಶ್ರೀರುದ್ರ ಹೋಮದ ಪೂರ್ಣಾಹುತಿ ನೆರವೇರಲಿದ್ದು, ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 23ರಂದು ಶರನ್ನವರಾತ್ರಿ ಮಹೋತ್ಸವದ ಸಮಾರೋಪದ ಅಂಗವಾಗಿ ಶ್ರೀಮನ್ ಮಹಾ ಚಂಡಿಕಾ ಹೋಮ ನಡೆಯಲಿದೆ. ಅಕ್ಟೋಬರ್ 24ರಂದು ಧರ್ಮಕರ್ತರ ಪಟ್ಟಾಭಿಷೇಕೋತ್ಸವದ ಅಂಗವಾಗಿ ಜೀವ-ಭಾವ ಕಾರ್ಯಕ್ರಮ ಹಾಗೂ ಶ್ರೀಮಾತಾ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ಈ ಮೂಲಕ ಹೊರನಾಡು ಶ್ರೀ ಕ್ಷೇತ್ರದ ಶರನ್ನವರಾತ್ರಿ ಮಹೋತ್ಸವಕ್ಕೆ ವೈಭವದ ತೆರೆ ಬೀಳಲಿದೆ.





