
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕನ್ನಡದ ಬಳಕೆ, ಸ್ಥಾನಮಾನ ಹಾಗೂ ಕನ್ನಡದ ಸಂಸ್ಕೃತಿ, ಪರಂಪರೆ, ಜನಪದ ಮತ್ತು ಸಾಹಿತ್ಯ ಉನ್ನತ ಸ್ಥಾನದಲ್ಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್. ಋಗ್ವೇದಿ ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಧ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ಚಾಮರಾಜನಗರ ಜಿಲ್ಲೆ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಪ್ರದೇಶದಲ್ಲಿದ್ದರೂ, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳ ವೈವಿಧ್ಯಮಯ ಸಮ್ಮಿಲನದ ನಡುವೆ ಕನ್ನಡ ಭಾಷೆ ಅತ್ಯುತ್ತಮ ಸ್ಥಾನದಲ್ಲಿ ಬಳಕೆಯಾಗುತ್ತಿದೆ ಎಂದರು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಚ್ಚ ಕನ್ನಡ ಭಾಷೆಯ ಬಳಕೆ ಹೆಚ್ಚಾಗಿದ್ದು, ಅಪ್ಪಟ ಕನ್ನಡಿಗರ ಪ್ರದೇಶವಾಗಿ ಕನ್ನಡದ ಸಂಘಟನೆಗಳು ಜಾಗೃತಿ ಮೂಡಿಸುವ ಜೊತೆಗೆ ಕನ್ನಡದ ಸಂಸ್ಕೃತಿ, ಪರಂಪರೆ, ನಾಡು-ನುಡಿ, ಜಲ, ಜನಪದ, ನೃತ್ಯ ಹಾಗೂ ಗಮಕ ಕ್ಷೇತ್ರಗಳ ಬೆಳವಣಿಗೆಗೆ ಶ್ರಮಿಸುತ್ತಿವೆ ಎಂದು ತಿಳಿಸಿದರು. ಭಾಷಾಭಿಮಾನ, ರಾಷ್ಟ್ರಾಭಿಮಾನ, ಆತ್ಮಾಭಿಮಾನ ಹಾಗೂ ಕಲಾಭಿಮಾನವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವ ಮೂಲಕ ಕನ್ನಡ ಭಾಷೆಯನ್ನು ಮತ್ತಷ್ಟು ಮುನ್ನಡೆಸಬೇಕು ಎಂದು ಕರೆ ನೀಡಿದರು. ಹಿರಿಯ ಕನ್ನಡ ಚಳುವಳಿಗಾರ ಶಾ ಮುರಳಿ ಮಾತನಾಡಿ, ಕನ್ನಡ ಉಳಿವಿಗಾಗಿ ಕನ್ನಡ ಚಳುವಳಿಗಾರರ ಕೊಡುಗೆ ಅಪಾರವಾಗಿದೆ. ಕನ್ನಡದ ಕವಿಗಳು, ಸಾಹಿತಿಗಳು, ಕಲಾವಿದರು, ಸಂಗೀತಗಾರರು ಹಾಗೂ ಜನಸಾಮಾನ್ಯರು ಕನ್ನಡವನ್ನು ಹೆಚ್ಚು ಬಳಸುವ ಮೂಲಕ ಕನ್ನಡತನವನ್ನು ಭವಿಷ್ಯಕ್ಕೂ ಉಳಿಸಿ ಬೆಳೆಸಬೇಕು ಎಂದರು. ಅಖಿಲ ಕರ್ನಾಟಕ ಕನ್ನಡ ಮಹಾಸಭೆಯ ಅಧ್ಯಕ್ಷ ಶ್ರೀನಿವಾಸ ಗೌಡ ಮಾತನಾಡಿ, ನವೆಂಬರ್ 1 ಕನ್ನಡಿಗರ ಹಬ್ಬವಾಗಿದ್ದು, ಪ್ರತಿ ಮನೆ ಮನೆಯಲ್ಲೂ ಕನ್ನಡದ ಜ್ಯೋತಿಯನ್ನು ಬೆಳಗಿಸಬೇಕು. ಮಕ್ಕಳಿಗೆ ಕನ್ನಡ ಕಲಿಸುವ ಜೊತೆಗೆ ಪ್ರತಿಯೊಬ್ಬರೂ ಕನ್ನಡವನ್ನು ಪ್ರೀತಿಸಿ ಬೆಳೆಸಬೇಕು ಎಂದು ತಿಳಿಸಿದರು. ಶ್ರೀ ಭುವನೇಶ್ವರಿ ಕನ್ನಡ ವೇದಿಕೆ ಅಧ್ಯಕ್ಷ ಜಿ. ಬಂಗಾರು ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿ, ಚಾಮರಾಜನಗರ ಜಿಲ್ಲೆಯಲ್ಲಿ ಕನ್ನಡದ ಅಭಿಮಾನ ಹೆಚ್ಚಾಗಿದ್ದು, ಕನ್ನಡ ಸಂಘ-ಸಂಸ್ಥೆಗಳು ಗ್ರಾಮ ಮಟ್ಟದಲ್ಲಿಯೂ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಹಾಗೂ ಅಭಿಮಾನ ಬೆಳೆಸುವ ಕಾರ್ಯ ಮಾಡುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್. ಶಿವಲಿಂಗಮೂರ್ತಿ, ಬಂಗಾರು ಜಿ., ಗುರುಲಿಂಗಮ್ಮ ವರದನಾಯಕ, ಬೊಮ್ಮನಹಳ್ಳಿ ಬಸವಣ್ಣ ಹಾಗೂ ಕನ್ನಡ ಚಳುವಳಿಗಾರ ವರದನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.





