
ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿರೋಧ ಪಕ್ಷದ ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕ ಜಯ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ವಿಧಾನಸಭೆಯ ಒಳಗಡೆ ಹಾಗೂ ಹೊರಗಡೆ ನಡೆಸಿದ ಹೋರಾಟದಿಂದ ದಲಿತರಿಗೆ ನ್ಯಾಯ ಸಿಕ್ಕಿದೆ ಎಂದು ಹೇಳಿದ ಅವರು, ರಾಜ್ಯಾದ್ಯಂತ ಹೋರಾಟದಲ್ಲಿ ಭಾಗವಹಿಸಿದ ಎಲ್ಲರಿಗೂ, ವಿಶೇಷವಾಗಿ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು. ಇನ್ನು ಮುಂದಾದರೂ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ದಲಿತರ ಹಣವನ್ನು ದುರುಪಯೋಗಪಡಿಸಿಕೊಂಡರೆ ಉಳಿಗಾಲವಿಲ್ಲ ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದರು. ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಗಳ ಹಣ ದುರುಪಯೋಗದ ವಿಚಾರ ಮುಂದಿನ ದಿನಗಳಲ್ಲಿ ದೊಡ್ಡ ವಿಷಯವಾಗಲಿದೆ ಎಂದು ಅವರು ಹೇಳಿದರು. ಸರ್ಕಾರ ರಚನೆಯಾದ ಕೆಲವೇ ತಿಂಗಳಲ್ಲಿ ವಿರೋಧ ಪಕ್ಷದ ಹೋರಾಟದಿಂದ ಮೊದಲ ವಿಕೆಟ್ ಪತನವಾಗಿದೆ ಎಂದು ವ್ಯಂಗ್ಯವಾಡಿದ ಆರ್. ಅಶೋಕ್, ನಾಗೇಂದ್ರ ರಾಜೀನಾಮೆ ನೀಡಿದರೂ ಹೋರಾಟ ನಿಲ್ಲುವುದಿಲ್ಲ ಎಂದರು. ಬರಗಾಲ, ನೈಸ್, ಬಿಡದಿ ಹಾಗೂ ಕೆಪಿಎಸ್ಸಿ ಸೇರಿದಂತೆ ಇನ್ನೂ ಹಲವು ವಿಚಾರಗಳು ಚರ್ಚೆಗೆ ಬರಬೇಕಿದೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಪಾದಯಾತ್ರೆ ನಡೆಸಲಾಗುವುದು ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದರು.




