
ಚಿಕ್ಕಮಗಳೂರು: ಬಸ್ ಹತ್ತುವ ವೇಳೆ ಉಂಟಾದ ಜನದಟ್ಟಣೆಯನ್ನು ದುರುಪಯೋಗಪಡಿಸಿಕೊಂಡು ವ್ಯಕ್ತಿಯೊಬ್ಬರ ಕೈಯಲ್ಲಿದ್ದ ಚಿನ್ನ ಮತ್ತು ವಜ್ರದ ಬ್ರಾಸ್ಲೆಟ್ ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಆಗಸ್ಟ್ 26ರಂದು ವೈಯಕ್ತಿಕ ಕೆಲಸದ ನಿಮಿತ್ತ ಚಿಕ್ಕಮಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬರು, ಸಂಜೆ ಸುಮಾರು 5 ಗಂಟೆಗೆ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಸಂಜೆ 5.15ರ ಸುಮಾರಿಗೆ ಬೇಲೂರಿಗೆ ತೆರಳುವ ಬಸ್ ಬಂದಿದ್ದು, ಹೆಚ್ಚಿನ ಜನದಟ್ಟಣೆಯ ನಡುವೆ ಬಸ್ ಹತ್ತಿದ್ದಾರೆ. ಬಸ್ ಒಳಗೆ ಹತ್ತಿದ ಬಳಿಕ ತಮ್ಮ ಬಲಗೈಯನ್ನು ಗಮನಿಸಿದಾಗ, ಧರಿಸಿದ್ದ 15.138 ಗ್ರಾಂ ತೂಕದ ಗೋಲ್ಡ್ ಮತ್ತು ಡೈಮಂಡ್ ಬ್ರಾಸ್ಲೆಟ್ ಕಾಣೆಯಾಗಿರುವುದು ಗೊತ್ತಾಗಿದೆ. ಕಳ್ಳತನವಾಗಿರುವ ಬ್ರಾಸ್ಲೆಟ್ನ ಅಂದಾಜು ಮೌಲ್ಯ ₹2.33 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಸ್ ಹತ್ತುವ ಸಂದರ್ಭದಲ್ಲಿ ಉಂಟಾದ ಜನದಟ್ಟಣೆಯನ್ನೇ ದುರುಪಯೋಗಪಡಿಸಿಕೊಂಡು ಅಪರಿಚಿತ ವ್ಯಕ್ತಿ ಬ್ರಾಸ್ಲೆಟ್ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳ್ಳತನ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಸ್ವತಃ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ, ಆಗಸ್ಟ್ 28ರಂದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.




