ಮೂಡಿಗೆರೆ: ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ವತಿಯಿಂದ ಸೆಪ್ಟೆಂಬರ್ 4ರಂದು ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ 2ನೇ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 4ರಂದು ಬೆಳಗ್ಗೆ 8.30ಕ್ಕೆ ರಾಷ್ಟ್ರಧ್ವಜಾರೋಹಣ ನಡೆಯಲಿದ್ದು, ಶಾಸಕಿ ನಯನಾ ಮೋಟಮ್ಮ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಕಸಾಪ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹಾಗೂ ನಾಡಧ್ವಜಾರೋಹಣವನ್ನು ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ ನೆರವೇರಿಸಲಿದ್ದಾರೆ ಎಂದರು. ಬೆಳಗ್ಗೆ 10 ಗಂಟೆಗೆ ಸಮ್ಮೇಳನಾಧ್ಯಕ್ಷೆ ಭಾಗ್ಯ ಲಕ್ಷ್ಮಣ್ ಗೌಡ ಅವರ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ನಡೆಯಲಿದೆ. ಬಳಿಕ ಮೈಸೂರಿನ ಸಾಹಿತಿ ಡಾ. ಲತಾ ರಾಜಶೇಖರ್ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಮಾಜಿ ಸಚಿವೆ ಮೋಟಮ್ಮ ಅವರ ಅಧ್ಯಕ್ಷತೆಯಲ್ಲಿ ‘ಸ್ತ್ರೀ ಎಂದರೆ ಅಷ್ಟೇ ಸಾಕೇ’ ಎಂಬ ವಿಷಯದ ಕುರಿತು ಗೋಷ್ಠಿ ನಡೆಯಲಿದೆ. ಜಿಲ್ಲಾ ಪಂಚಾಯತ್ ಸಿಇಒ ಎಚ್.ಎಸ್. ಕೀರ್ತನಾ ಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಚಿಕ್ಕಮಗಳೂರು ಐಡಿಎಸ್ಜಿ ಕಾಲೇಜಿನ ಪ್ರಾಂಶುಪಾಲೆ ಡಾ. ಪುಷ್ಪಭಾರತಿ ಅವರ ಅಧ್ಯಕ್ಷತೆಯಲ್ಲಿ ಖ್ಯಾತ ಗಾಯಕಿ ಎಸ್. ಜಾನಕಿ ಅವರಿಗೆ ‘ಗಾನನಮನ’ ಗೋಷ್ಠಿ ಆಯೋಜಿಸಲಾಗಿದೆ. ನಂತರ ಸಮಾರೋಪ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಕಳಸದ ಡಾ. ಜಾನಕಿ ಸುಂದ್ರೇಶ್, ಚಿಕ್ಕಮಗಳೂರಿನ ಡಾ. ನಾಗಶ್ರೀ ತ್ಯಾಗರಾಜ್ ಹಾಗೂ ತರೀಕೆರೆಯ ಡಾ. ನಾಗಜ್ಯೋತಿ ಅವರಿಗೆ ‘ಸಾಹಿತ್ಯ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಜಿಲ್ಲೆಯ ಎಲ್ಲಾ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಿಗೆ ‘ಕನ್ನಡಶ್ರೀ’ ಪ್ರಶಸ್ತಿ ಹಾಗೂ ತಾಲೂಕುಗಳಲ್ಲಿ ಕನ್ನಡದ ಸೇವೆ ಮಾಡುತ್ತಿರುವವರಿಗೆ ‘ಕನ್ನಡ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಮ್ಮೇಳನಕ್ಕೆ ಜಿಲ್ಲೆಯ ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಸಾಪ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರೇಖಾ ರವಿರಾಜ್ ಹಾಗೂ ಲೇಖಕರ ಬಳಗದ ಅಧ್ಯಕ್ಷೆ ಪ್ರೇಮಾ ಪುಣ್ಯಮೂರ್ತಿ ಉಪಸ್ಥಿತರಿದ್ದರು.
ವರದಿ: ಸಂತೋಷ್ ಅತ್ತಿಗೆರೆ
