
ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 2026ನೇ ಸಾಲಿನ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ್ದು, ಒಟ್ಟು 3,395 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಜೂನ್ 5ರಿಂದ ಆನ್ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಅಭ್ಯರ್ಥಿಗಳು ಜುಲೈ 3ರೊಳಗೆ ಅರ್ಜಿ ಸಲ್ಲಿಸಬಹುದು. ಜುಲೈ 14 ಶುಲ್ಕ ಪಾವತಿಗೆ ಕೊನೆಯ ದಿನವಾಗಿದ್ದು, ಆಗಸ್ಟ್ 12ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಪಿಯುಸಿ ಅಥವಾ 12ನೇ ತರಗತಿ ಹಾಗೂ ಅದಕ್ಕೆ ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಸಿಬಿಎಸ್ಇ, ಐಎಸ್ಸಿ ಹಾಗೂ ಇತರ ರಾಜ್ಯ ಶಿಕ್ಷಣ ಮಂಡಳಿಗಳ 12ನೇ ತರಗತಿ ಪ್ರಮಾಣಪತ್ರಗಳನ್ನೂ ಮಾನ್ಯತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸು ಕಡ್ಡಾಯವಾಗಿದ್ದು, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷ, ಎಸ್ಸಿ, ಎಸ್ಟಿ, ವರ್ಗ-1, 2A, 2B, 3A ಹಾಗೂ 3B ಅಭ್ಯರ್ಥಿಗಳಿಗೆ 35 ವರ್ಷ ಹಾಗೂ ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯದ ಅಭ್ಯರ್ಥಿಗಳಿಗೆ 38 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮಾನುಸಾರ ಸೇವೆಯಲ್ಲಿರುವ ಕೆಲ ಅಭ್ಯರ್ಥಿಗಳು ಹಾಗೂ ವಿಶೇಷ ವರ್ಗಗಳಿಗೆ ವಯೋಮಿತಿ ಸಡಿಲಿಕೆಯೂ ಲಭ್ಯವಿದೆ. ಸಾಮಾನ್ಯ ಹಾಗೂ 2A, 2B, 3A ಮತ್ತು 3B ವರ್ಗದ ಅಭ್ಯರ್ಥಿಗಳಿಗೆ ₹750 ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಎಸ್ಸಿ, ಎಸ್ಟಿ, ವರ್ಗ-1, ಮಾಜಿ ಸೈನಿಕರು ಹಾಗೂ ತೃತೀಯಲಿಂಗಿ ಅಭ್ಯರ್ಥಿಗಳಿಗೆ ₹500 ಶುಲ್ಕ ವಿಧಿಸಲಾಗಿದೆ. ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕಾಗಿದ್ದು, ಒಮ್ಮೆ ಪಾವತಿಸಿದ ಬಳಿಕ ಮರುಪಾವತಿ ಇರುವುದಿಲ್ಲ. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ನೇಮಕಾತಿ ಪೋರ್ಟಲ್ಗೆ ಭೇಟಿ ನೀಡಿ ನೋಂದಣಿ ಮಾಡಿಕೊಂಡು, ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳು ಹಾಗೂ ಭಾವಚಿತ್ರ ಅಪ್ಲೋಡ್ ಮಾಡಿ, ಶುಲ್ಕ ಪಾವತಿಸಿದ ಬಳಿಕ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಬೇಕು. ಲಿಖಿತ ಪರೀಕ್ಷೆ OMR ವಿಧಾನದಲ್ಲಿ ನಡೆಯಲಿದ್ದು, 100 ಪ್ರಶ್ನೆಗಳಿಗೆ 100 ಅಂಕಗಳು ನಿಗದಿಯಾಗಿವೆ. ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಭಾರತೀಯ ಸಂವಿಧಾನ, ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿ, ಮಾನಸಿಕ ಸಾಮರ್ಥ್ಯ ಹಾಗೂ ನೈತಿಕ ಶಿಕ್ಷಣ ವಿಷಯಗಳಿಂದ ಪ್ರಶ್ನೆಗಳು ಕೇಳಲಾಗುತ್ತವೆ. ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಅಭ್ಯರ್ಥಿಗಳು ಕನಿಷ್ಠ 30 ಅಂಕ ಗಳಿಸಬೇಕು. ನಂತರ ದೈಹಿಕ ಮಾನದಂಡ ಪರೀಕ್ಷೆ (PST), ಸಹಿಷ್ಣುತೆ ಪರೀಕ್ಷೆ (ET), ವೈದ್ಯಕೀಯ ಪರೀಕ್ಷೆ ಹಾಗೂ ಅಂತಿಮ ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ 168 ಸೆಂ.ಮೀ. ಎತ್ತರ ಕಡ್ಡಾಯವಾಗಿದ್ದು, ಮಹಿಳೆ ಹಾಗೂ ತೃತೀಯಲಿಂಗಿ ಅಭ್ಯರ್ಥಿಗಳಿಗೆ 157 ಸೆಂ.ಮೀ. ಎತ್ತರ ಮತ್ತು 45 ಕೆ.ಜಿ. ತೂಕ ನಿಗದಿಪಡಿಸಲಾಗಿದೆ. ಬುಡಕಟ್ಟು ಪ್ರದೇಶದ ಅಭ್ಯರ್ಥಿಗಳು ಹಾಗೂ ಮಾಜಿ ಸೈನಿಕರಿಗೆ ಪ್ರತ್ಯೇಕ ದೈಹಿಕ ಮಾನದಂಡಗಳಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 9 ತಿಂಗಳ ಮೂಲ ಪೊಲೀಸ್ ತರಬೇತಿ ನೀಡಲಾಗುತ್ತಿದ್ದು, ನಂತರ 2 ವರ್ಷ 6 ತಿಂಗಳ ಪರೀಕ್ಷಾರ್ಥ ಸೇವೆ (ಪ್ರೊಬೇಷನ್) ಇರಲಿದೆ. ಹುದ್ದೆಗೆ ₹37,500 ರಿಂದ ₹76,100ರವರೆಗೆ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.





