
ಅಸ್ತಿತ್ವ! ಇದೊಂದು ಶಬ್ಧ ಪ್ರತಿಯೊಬ್ಬ ಮನುಷ್ಯನನ್ನು ಕಾಡಿರುತ್ತದೆ. ಕೇವಲ ಮನುಷ್ಯರನ್ನಲ್ಲ ಇಂದು ಮಾರುಕಟ್ಟೆಯಲ್ಲಿರುವ ಪ್ರತಿಯೊಂದು ಉತ್ಪನ್ನಗಳೂ ಕೂಡ ತನ್ನ ಅಸ್ತಿತ್ವಕ್ಕಾಗಿಯೇ ಪರದಾಡುತ್ತವೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಾಕಷ್ಟು ಸರ್ಕಸ್ ಮಾಡಬೇಕಾಗುತ್ತದೆ. ಈಗ ನಮ್ಮ ಪತ್ರಿಕೆಯನ್ನೇ ತೆಗೆದುಕೊಳ್ಳಿ. ಪ್ರತಿ ಸಂಚಿಕೆಯನ್ನೂ ರೂಪಿಸುವಾಗಲೂ ನಾವು ಯೋಚಿಸುವುದು ಮಾರುಕಟ್ಟೆಯಲ್ಲಿ ನಮ್ಮ ಅಸ್ತಿತ್ವ ಸ್ಥಾಪನೆ ಆಗಬೇಕು ಎಂಬುದಾಗಿಯೇ ಇರುತ್ತದೆ. ಇದೆಲ್ಲ ಉತ್ಪನ್ನಗಳು, ಮಾರುಕಟ್ಟೆ ಇವುಗಳ ಸಂಗತಿಗಳಾಯಿತು. ಆದರೆ ಮನುಷ್ಯ ಅಸ್ತಿತ್ವ ಗಳಿಸುವುದು, ಉಳಿಸಿಕೊಳ್ಳುವುದು ಹೇಗೆ..? ಇದು ಬಹಳ ಮುಖ್ಯವಾದ ಸಂಗತಿ. ನೀವು ಗಮನಿಸಿ ನೋಡಿ, ಆಗಷ್ಟೇ ಹೈಸ್ಕೂಲ್ ಸೇರಿಕೊಂಡಿರೋ ಹುಡುಗ ಅಥವಾ ಹುಡುಗಿ ನಿಮ್ಮ ಮಾತಿಗೆ ಎದಿರಾಡಲು ಶುರು ಮಾಡಿಕೊಂಡಿರುತ್ತಾರೆ. ನಾಲ್ಕು ಮಂದಿ ಯಾವುದೋ ವಿಚಾರದಲ್ಲಿ ಚರ್ಚಿಸುವಾಗ ಮಧ್ಯ ಬಾಯಿ ಹಾಕಿ ಬಿಡುತ್ತಾರೆ. ಕೆಲ ತಂದೆ ತಾಯಿಗಳು ಇದನ್ನು ಸಹವಾಸ ದೋಷ, ನಮ್ಮ ಮಕ್ಕಳು ಈಗ ನಮಗೇ ಬುದ್ಧಿ ಹೇಳೋ ಹಂಗೆ ಆಗಿ ಬಿಟ್ರು ಅಂತ ಆತಂಕಗೊಳ್ಳುತ್ತಾರೆ. ಆದರೆ ಇದು ಅದಾವುದು ಅಲ್ಲ. ನಿಮ್ಮ ಮಗ/ಮಗಳು ಅವರ ಅಸ್ತಿತ್ವ ಸ್ಥಾಪನೆಗೆ ಅಣಿಯಾಗುತ್ತಿದ್ದಾರೆ ಅಂತ ಅರ್ಥ! ಅಪಾಯವಿರುವುದೇ ಇಲ್ಲಿ. ಪಿಯುಸಿ ಹುಡುಗಿಯೊಬ್ಬಳು ತೀರಾ ಪೊರ್ಕಿಯಂತಹ, ಕುಡಿದು ತೂರಾಡುವ, ಸದಾ ತಂಬಾಕು ಸೇವಿಸುವ ಗುಂಡ್ರಗೋವಿಯಂತಹ ಹುಡುಗನೊಬ್ಬನಿಗೆ ತನ್ನ ಮನಸ್ಸನ್ನು ಒಪ್ಪಿಸಿ ಬಿಡುತ್ತಾಳೆ! ನೀವು ಯಾವುದೇ ಸಾಕ್ಷಾಧಾರ ಕೊಟ್ಟರು ಅವಳು ನಂಗೊತ್ತು ಅವನನ್ನ ನಾನು ಸರಿ ಮಾಡ್ತೀನಿ ಅಂತಲೇ ಮಾತಾಡುತ್ತಾಳೆ. ಅಂಥದ್ದೊಂದು ಭ್ರಮೆಯಲ್ಲಿಯೇ ತನ್ನದೆಲ್ಲವನ್ನು ಕಳೆದುಕೊಂಡ ಹುಡುಗಿಯರ ಸಂಖ್ಯೆ ಬಹಳಷ್ಟಿದೆ. ಇದು ಕೂಡ ಹುಡುಗಿಯೊಬ್ಬಳು ತಾನು ಜವಾಬ್ದಾರಿ ನಿಭಾಯಿಸಬಲ್ಲೆ ಎಂಬ ಅಸ್ತಿತ್ವಕ್ಕಾಗಿ ಮಾಡಿಕೊಂಡ ಅವಾಂತರಗಳು. ಅದಿರಲಿ, ಕಾಲೇಜಿನಲ್ಲಿ, ಸಮಾಜದಲ್ಲಿ ಹೀಗೆ ನಮ್ಮ ಬದುಕಿನುದ್ದಕ್ಕೂ ನಾವು ನಮ್ಮ ಅಸ್ತಿತ್ವದ ಕುರಿತು ಯೋಚಿಸುತ್ತಲೇ ಇರಬೇಕು. ಒಬ್ಬ ಸಿನಿಮಾ ನಟ ಬೆಳಗಾಗುವುದರ ಒಳಗೆ ಹೀರೋ ಆಗಿ ಬಿಡಬಲ್ಲ. ಆದರೆ ಅವನ ಮುಂದಿನ ನಿರ್ಧಾರಗಳು ಬಹಳ ಮಹತ್ವದ್ದಾಗಿರಬೇಕು! ನನ್ನ ಪ್ರಕಾರ ಒಮ್ಮೆ ಒಂದು ಕ್ಷೇತ್ರದಲ್ಲಿ ಅಸ್ತಿತ್ವ ಕಂಡುಕೊಂಡ ನಂತರ ಅದನ್ನ ಉಳಿಸಿಕೊಳ್ಳವುದು ಅಷ್ಟು ಸುಲಭದ ಮಾತಲ್ಲ. ನಾನಾಗಲೇ ಹೇಳಿದಂತೆ ಇದು ಸ್ಪರ್ಧಾತ್ಮಕ ಯುಗ. ಒಬ್ಬ ಅದ್ಭುತವಾಗಿ ಪಾನಿಪೂರಿ ಕೊಡುತ್ತಿದ್ದವನ ಗಾಡಿಯ ಅನತಿ ದೂರದಲ್ಲೇ ಮತ್ತೊಬ್ಬನ ಗಾಡಿ ಬಂದು ನಿಲ್ಲುತ್ತದೆ. ನೋಡ ನೋಡುತ್ತಲೇ ಹತ್ತಾರು ಗಾಡಿಗಳು ತೆರೆದುಕೊಂಡು ಬಿಡುತ್ತವೆ. ಈತ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕ್ವಾಲಿಟಿಯೊಂದಿಗೆ ಸ್ಪರ್ಧೆಯೊಡ್ಡಬೇಕು, ದರ ಸಮರ ಎದುರಿಸಬೇಕಾಗುತ್ತದೆ. ನಿಮಗೆ ಗೊತ್ತಿರಲಿ, ಜಾಣ ಕೆಲಸಗಾರ ತನ್ನ ಕಾರ್ಯ ವೈಖರಿಯನ್ನು ಸಂಪೂರ್ಣವಾಗಿ ಬಿಚ್ಚಿಡುವುದಿಲ್ಲ. ಅವನಿಗೆ ಗೊತ್ತು ತನ್ನ ಬಳಿ ಕೆಲಸ ಕಲಿತವನು ನಾಳೆ ನನ್ನದೇ ಅಸ್ತಿತ್ವಕ್ಕೆ ಕುತ್ತು ತಂದಿಡುತ್ತಾನೆ ಎಂದು! ಇಷೆಲ್ಲ ಇದ್ದರೂ ಕೆಲವರು ತಮಗೇ ಗೊತ್ತಿಲ್ಲದಂತೆ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿರುತ್ತಾರೆ. ಡೌಟೇ ಬೇಡ, ಅವರು ತಮ್ಮ ಕೆಲಸದಲ್ಲಿ ಉತ್ಸಾಹ ಕಳೆದುಕೊಂಡು ಬಿಟ್ಟಿರುತ್ತಾರೆ. ಇಲ್ಲವೇ ಇದು ನನ್ನಿಂದಲೇ ಆಗಿದ್ದು ಅನ್ನೋ ಅಹಂಭಾವ ಮೊಳಕೆಯೊಡೆದಿರುತ್ತದೆ. ಅದಿಲ್ಲವಾದರೆ ಇದನ್ನು ನಾನೇ ತಾನೆ ಮಾಡಬೇಕು. ನಂಗಲ್ಲದೆ ಇನ್ನಾರಿಗೆ ಗೊತ್ತು ಅನ್ನೋ ಅಸಡ್ಡೆ. ಅಂತಹವರ ಪಕ್ಕದಲ್ಲಿಯೇ ಇನ್ನೊಬ್ಬ ಅವರು ಮಾಡುತ್ತಿದ್ದ ಕೆಲಸವನ್ನೇ ಮಾಡುತ್ತಾ ಮಾಡುತ್ತಾ ಮೇಲೆ ಬಂದಿರುತ್ತಾನೆ. ಇವರು ಅದನ್ನು ಗಮನಿಸಿಯೇ ಇರುವುದಿಲ್ಲ. ಒಂದು ದಿನ ತನ್ನ ಅಸ್ತಿತ್ವಕ್ಕೆ ಕುತ್ತು ಬಂದಾಗಲೇ ಮೈಮರೆತಿದ್ದು ಗೊತ್ತಾಗುತ್ತದೆ. ನೀವು ನಿಮ್ಮ ಅಸ್ತಿತ್ವವನ್ನು ಸದಾ ಕಾಪಾಡಿಕೊಳ್ಳಲು ಬಯಸುವಿರಾದರೆ ನಿಮ್ಮ ಕ್ಷೇತ್ರದಲ್ಲಿನ ಸಹೋದ್ಯೋಗಿಗಳ ಮೇಲೊಂದು ಕಣ್ಣಿಟ್ಟಿರಿ. ಸದಾ ಹೊಸ ಹೊಸ ಪ್ರಯೋಗಕ್ಕೆ ಆಲೋಚಿಸುತ್ತೀರಿ. ನಿಮ್ಮ ಐಡಿಯಾಗಳನ್ನು ಇನ್ನೊಬ್ಬರಿಗೆ ಹೇಳಿಕೊಳ್ಳುವಾಗ ಆತ ನಿಮಗೆ ಸ್ಪರ್ಧಿಯಾಗಲಾರ ಎಂಬುದನ್ನು ಖಾತ್ರಿಗೊಳಿಸಿಕೊಳ್ಳಿ. ಎಲ್ಲದಕ್ಕಿಂತ ಮುಖ್ಯವಾಗಿ ಇವತ್ತಿನ ಪರಿಸ್ಥಿತಿಗೆ ಅಪ್ಡೇಟ್ ಆಗುವುದು ಬಹಳ ಮುಖ್ಯ. ತೀರಾ ಹೊರಗಿನವರೇನಲ್ಲ. ನಿಮ್ಮದೇ ಗೆಳೆಯರೊಂದಿಗೆ, ಒಮ್ಮೊಮ್ಮೆ ನಿಮ್ಮದೇ ಅಣ್ಣ ತಮ್ಮಂದಿರೊಂದಿಗೆ ಸ್ಪರ್ಧೆಗೆ ಬೀಳಬೇಕಾಗುತ್ತದೆ. ಆದರೆ ಹೋರಾಟ ಅನಿವಾರ್ಯ, ಕಾರಣ ಅಸ್ತಿತ್ವ!







