
ನೊಂದ ಹೃದಯಿಗಳಿಗೆ ಮಾತ್ರ ಕಣ್ಣೀರಿನ ಬೆಲೆ ಗೊತ್ತಿರುತ್ತದೆ ಎನ್ನುವ ಸಂದೇಶವೊಂದು ನನ್ನ ವಾಟ್ಸ್ಪ್ನೊಳಕ್ಕೆ ಬಂದು ಕುಳಿತಿತ್ತು. ಈ ಮೊಬೈಲ್ ಎಂಬ ಸಾಧನ ನಮ್ಮನ್ನು ಅದೆಷ್ಟು ಸ್ಟುಪ್ಪಿಡ್ ಗಳನ್ನಾಗಿಸುತ್ತದೆಯೋ, ಸೂಕ್ಮವಾಗಿ ಗಮನಿಸಿದರೆ ಈ ವಾಟ್ಸ್ಪ್ ಬಳಸುವಾಗ ನಾವೆಷ್ಟು ಅವಿವೇಕಿಗಳಾಗಿ ವರ್ತಿಸುತ್ತೇವೆ ಎಂಬುದು ಗೊತ್ತಾಗುತ್ತದೆ. ಫಾರ್ವಡ್ ಮೆಸೇಜ್ಗಳನ್ನು ಕಳುಹಿಸುವಾಗ ಅದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನಂತರ ಅದನ್ನು ಯಾರಿಗೆ ಕಳುಹಿಸಬಹುದು ಎಂಬುದನ್ನು ಯೋಚಿಸಿಯೇ ಕಳುಹಿಸಬೇಕೆ ಹೊರತು ಸಿಕ್ಕಿದ ಎಲ್ಲಾ ನಂಬರ್ಗಳಿಗೆ ಕಳಿಸುವುದಲ್ಲ. ಕೆಲವು ಸಲ ಸವಾಲ್ ಹಾಕುವಂತಹ ಒಗಟುಗಳು ಹರಿದಾಡುತ್ತವೆ. ಆದರೆ ಅಲ್ಲಿ ತಲೆ ಇದ್ರೆ ಉತ್ತರಿಸು ಎಂಬುದೊಂದು ಸಾಲು ಸೇರಿರುತ್ತದೆ. ಈ ಸಂದೇಶ ಗೆಳೆಯರ ನಡುವೆ ಹರಿದಾಡಿದರೆ ಸೂಕ್ತ. ಆದರೆ ಇದನ್ನು ನಮಗಿಂತ ಹಿರಿಯರಿಗೆ ನಾವು ಗೌರವದಿಂದ ಕಾಣುವವರಿಗೆ ನಮ್ಮ ಗುರುಗಳಿಗೆ ಕಳುಹಿಸುವುದು ಥರವೇ? ಹಾಗೊಂದು ವೇಳೆ ಅವರು ಎದಿರು ಸಿಕ್ಕರೆ ಇದೇ ಪ್ರಶ್ನೆಯನ್ನು ತಲೆ ಇದ್ರೆ ಉತ್ತರಿಸು ಅಂತ ಹೇಳುತ್ತಿವಾ? ಈ ಥರದ್ದೊಂದಾದರೆ ಸ್ವಾಮಿ ಅಯ್ಯಪ್ಪ, ಮಂಜುನಾಥ, ಆಂಜನೇಯ, ಶನೀಶ್ವರನ್ನು ಎಳೆದು ತರುವವರದ್ದೊಂದು ಕಾಟ. ಹತ್ತು ಜನರಿಗೆ ಕಳುಹಿಸಿ, ಇಪ್ಪತ್ತೊಂದು ಜನರಿಗೆ ಕಳುಹಿಸಿ ಅಂತ.. ನಾನ್ಸೆನ್ಸ್!
ಆದರೆ ನಾನು ಹೇಳಲು ಹೊರಟಿರುವುದು ಈ ಥರದ ಮೆಸೇಜ್ಗಳ ಬಗೆಯಲ್ಲಿ ಒಂದು ಸಂಬಂಧದಲ್ಲಿ ಒಡಕು ಹೇಗೆ ಮಾಡುತ್ತದೆ ಎಂಬುದರ ಕುರಿತು ಹೇಳಿ ಬಿಡುತ್ತೇನೆ. ತುಂಬಾ ಸಲ ಗೆಳೆತನಗಳು ಮುರಿದು ಬೀಳಲು ಕಾರಣವಾಗುವುದು ಸಲಿಗೆ! ಹೌದು, ಗೆಳೆತನದ ನಡುವೆ ಬೆಸೆದುಕೊಳ್ಳುವ ಸಲುಗೆ ಇದೆಯಲ್ಲ ಅದು ಆ ಸ್ನೇಹವನ್ನು ಗಟ್ಟಿಗೊಳಿಸುವುದು ಎಷ್ಟು ಸತ್ಯವೋ.. ತುಂಡಾಗಿಸುವುದು ಕೂಡ ಅಷ್ಟೇ ಸತ್ಯ. ನಿಮ್ಮ ಆತ್ಮೀಯ ಗೆಳೆಯನೊಬ್ಬ ಕುಡಿದು ರಸ್ತೆಯಲ್ಲಿ ಬಿದ್ದಿದ್ದಾನೆ ಅಂತಾದ್ರೆ ನೀವು ಆತನನ್ನು ಮನೆಗೆ ತಲುಪಿಸಿ ಆ ಕ್ಷಣ ಅವನನ್ನು ಉಗಿದು ಉಪ್ಪಿನಕಾಯಿ ಹಾಕ್ತೀರಿ ವೆಲ್, ತಪ್ಪಿಲ್ಲ. ಕುಡಿದು ಹಾಗೆ ರಸ್ತೇಲಿ ಬಿದ್ದವನು ನಿಮ್ಮ ಗೆಳೆಯ ನೀವು ಬೈಯೋದ್ರಲ್ಲಿ ತಪ್ಪಿಲ್ಲ. ಹಾಗೆ ಬೈಯೋ ಅಧಿಕಾರ (?) ಒಬ್ಬ ಆತ್ಮೀಯ ಗೆಳೆಯನಾಗಿ ನಿಮಗಿದೆ. ಅದಕ್ಕಿಂತ ಹೆಚ್ಚಾಗಿ ನಿಮ್ಮ ನಡುವೆ ಸಲುಗೆ ಇದೆ. ಅದನ್ನಾತ ಒಪ್ಪಿಕೊಳ್ಳುತ್ತಾನೆಂಬ ನಂಬಿಕೆಯಿಂದ ತಾನೆ ನೀವು ಗದರಿರುತ್ತೀರಿ. ಆದರೆ ಆತ ತಿರುಗಿ ನನ್ನ ದುಡ್ಡು, ನನ್ನಿಷ್ಟ ಎಂದರೆ ಏನೆಂದು ಉತ್ತರಿಸುತ್ತೀರಿ? ಇಷ್ಟಕ್ಕು ಆತ ಹೇಳಿದ್ದರಲ್ಲೇನು ತಪ್ಪಿದೆ? ನಿಮ್ಮ ಗೆಳತಿಯೊಬ್ಬಳ ಉಡುಗೆ ನಿಮಗೆ ಚೆನ್ನಾಗಿಲ್ಲ ಅಂತ ಅನಿಸಿರುತ್ತದೆ. (ತುಂಬಾ ಸಲ ಹುಡುಗಿಯರು ಹಾಕೋ ಆಕರ್ಷಕ ಉಡುಪುಗಳು ಕೆಲವರಿಗೆ ಅಸಹ್ಯಕರವಾಗಿ ಕಾಣಿಸುತ್ತದೆ) ಏನೇ ಇದು ಇಂತಹ ಡ್ರೆಸ್ ಹಾಕ್ಕೊಂಡಿದೀಯ ಅಂತ ಕೇಳುತ್ತೀರಿ. ಅದಕ್ಕವಳು ನಿನ್ನ ದೃಷ್ಠಿ ಸರಿ ಇಲ್ಲ ನನ್ನ ಅವಮಾನಿಸಲು ಹೀಗೆ ಮಾತಾಡ್ತೀಯ ಅಂತ ರೇಗಿದರೆ ನಿವೇನು ಉತ್ತರಿಸುತ್ತೀರಿ? ಆಫ್ಕೋರ್ಸ್ ಆತ್ಮೀಯ ಗೆಳತಿಯನ್ನು ಅವಮಾನಿಸಲು ನಿಮಗೆ ಕಾರಣವೇ ಇಲ್ಲ. ಆದರೂ ಆಕೆಗೆ ನೀವು ಅವಳ ಉಡುಪಿನ ಬಗ್ಗೆ ಆಡಿದ ಮಾತು ನೋವಾಗಿದೆ. ಯಾಕೆ ಹೀಗಾಗುತ್ತದೆ ಅಂದ್ರೆ ನಿಮ್ಮ ನಡುವೆ ಸಲುಗೆ ಇರಬಹುದು. ಆದರೆ ಸಂಬಂಧದ ಗಟ್ಟಿತನ ಇಲ್ಲವಾಗಿರುತ್ತದೆ. ಕೆಲವು ಸಲ ನಾವು ಆತ್ಮೀಯರು ಅಂತ ಅಂದುಕೊಂಡಿರುತ್ತೇವೆಯೇ ಹೊರತು ಅವರು ನಮ್ಮನ್ನು ಹಾಗಂದುಕೊಂಡಿರುವುದಿಲ್ಲ ಇನ್ನು ಕೆಲ ಗೆಳೆಯರು ನಾಲ್ಕು ಜನರ ಮದ್ಯೆ ತಮಾಷೆಗಾಗಿ ನಮ್ಮ ಕಾಲೆಳೆದು ಬಿಡುತ್ತಾರೆ. ನಾನವರ ಕಣ್ಣನ್ನು ನೋಡುತ್ತೇನೆ. ಅಲ್ಲಿ ಅವಮಾನಿಸುವ ಇರಾದೆ ಇದೆಯಾ ಅಥವಾ ಜಸ್ಟ್ಫನ್ ಆಗಿ ಮಾತಾಡಿದ್ದಾನಾ ಅಂತ. ಊಹುಂ ಅವಮಾನಿಸುವ ಉದ್ದೇಶ ಅವನಿಗಿರುವುದಿಲ್ಲ. ಯಾಕೆಂದರೆ ಆತ ಗೆಳೆಯ! ಅವನು ಆಡಿದ ಮಾತಿನಿಂದ ನನ್ನ ಬಗ್ಗೆ ಅಕ್ಕಪಕ್ಕದವರು ಏನಾದರು ಅಂದುಕೊಳ್ಳಲಿ, ನಾನು ಅವನನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು. ಯಾಕೆಂದರೆ ನಮ್ಮ ನಡುವೆ ಆತ್ಮೀಯತೆ ಇದೆ. ಆದರೆ, ಗೆಳೆಯರೇ ಮತ್ತು ಗೆಳತಿಯರೇ, ಇತ್ತೀಚಿನ ದಿನಗಳಲ್ಲಿ ಗೆಳೆತನದ ಆಯಸ್ಸು ಬಹಳ ಕಡಿಮೆ ಇರುತ್ತದೆ. ಫೇಸ್ಬುಕ್,ಇನ್ಸ್ಟಾದಲ್ಲಿ , ವಾಟ್ಸ್ಪ್ಗಳಲ್ಲಿ ಗೆಳೆಯರು (?) ಬೇಕಾದಷ್ಟು ಮಂದಿ ಸಿಗುತ್ತಾರೆ. ಕೆಲವು ಸಲ ಅವರು ಯಾರು ಎಂಬುದೂ ಗೊತ್ತಿರುವುದಿಲ್ಲ!! ಅವರ ಅಭಿರುಚಿ, ಹವ್ಯಾಸ, ವೃತ್ತಿ, ಯಾವುದೂ ನಮಗೆ ಗೊತ್ತಿರುವುದಿಲ್ಲ. ಆದರೂ ಅವರು ನಮ್ಮ ಗೆಳೆಯರು! ಅವರು ಕೊಡುವ ಲೈಕ್, ಕಮೆಂಟ್ ಇವುಗಳಿಂದಲೇ ನಮಗೆ ಅವರು ‘ಆಪ್ತ’ ಎನಿಸಿಬಿಡುತ್ತಾರೆ. ಹಾಗಿರುವಾಗ ಪ್ರತಿದಿನ ನಮ್ಮನ್ನು ನೋಡಿ ಬಲಹೀನತೆಗಳನ್ನು ಗುರುತಿಸುವ ಗೆಳೆಯನ ಹಿತೋಪದೇಶ ಯಾರಿಗೆ ಬೇಕು ಹೇಳಿ! ಈ ಸೂಕ್ಷ್ಮ ಸಂಗತಿಯನ್ನು ಅರಿತುಕೊಂಡು ನಾವು ನಮ್ಮ ಗೆಳೆತನಕ್ಕೊಂದು ಚೌಕಟ್ಟನ್ನು ಹಾಕಿಕೊಳ್ಳಬೇಕು. ಇತ್ತೀಚೆಗೆ ನಾನೂ ಕೂಡ ನನ್ನ ಆಪ್ತ ವಲಯವನ್ನು ಕಿರಿದಾಗಿಸಿಕೊಳ್ಳುತ್ತಿದ್ದೇನೆ. ಅವರ ಬದುಕನ್ನು ತಿದ್ದಿ, ಅವರ ಈಗೋಗೆ ಹರ್ಟ್ ಮಾಡಲು ನಂಗಾದರೂ ಏನು ಹಕ್ಕಿದೆ ಅಲ್ವಾ? ತಿಂದ ಉಪ್ಪು ಹೆಚ್ಚಾದರೆ ನೀರಿಗೇನು ಬರವೇ? ಬೇಕಾದಷ್ಟು ಕುಡಿಯುತ್ತಾರೆ ಬಿಡಿ! ನಾನು
ಪುಸ್ತಕಗಳ ಜೊತೆ ಬೆರೆತು ಹೋಗುತ್ತೇನೆ. ಅಲ್ಲಿ ಕಂಡಿದ್ದನ್ನು ಇಲ್ಲಿ ಹೇಳುತ್ತೇನೆ. ನನಗೆ ನಿಮಗಿಂತ ಆತ್ಮೀಯರು ಇನ್ನಾರಿದ್ದಾರೆ ?







