
ಚಾಮರಾಜನಗರ: ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸುವ ಮೂಲಕ ಕನ್ನಡ–ಕನ್ನಡಿಗ–ಕರ್ನಾಟಕದ ಸಮಗ್ರ ಚಿಂತನೆ ಮತ್ತು ಬೆಳವಣಿಗೆಗೆ ಕಾರಣರಾದ ಸರ್ ಎಂ. ವಿಶ್ವೇಶ್ವರಯ್ಯ ಅವರು ಕನ್ನಡಿಗರ ಹೆಮ್ಮೆಯ ಕಣ್ಮಣಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವೇಶ್ವರಯ್ಯ ಅವರು ಆಧುನಿಕ ಭಾರತದ ನಿರ್ಮಾಪಕರಲ್ಲಿ ಒಬ್ಬರಾಗಿದ್ದು, ಕಡುಬಡತನದಲ್ಲಿಯೂ ಕಠಿಣ ಪರಿಶ್ರಮದಿಂದ ಇಂಜಿನಿಯರ್ ಆಗಿ, ಮೈಸೂರು ದಿವಾನರಾಗಿ ಶಿಸ್ತು, ದೂರದೃಷ್ಟಿ, ಕಾರ್ಯದಕ್ಷತೆ ಹಾಗೂ ಬದ್ಧತೆಯಿಂದ ವಿಶ್ವಪ್ರಸಿದ್ಧಿ ಪಡೆದರು ಎಂದು ತಿಳಿಸಿದರು. ಭಾರತೀಯ ನೀರಾವರಿ ಪದ್ಧತಿ, ರೈತರ ಸಮಸ್ಯೆಗಳ ಪರಿಹಾರ, ಕೈಗಾರಿಕೆ, ಶಿಕ್ಷಣ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಮೈಸೂರು ಸಿಲ್ಕ್, ಮೈಸೂರು ಶುಗರ್ ಕಾರ್ಖಾನೆ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವರ ಕೊಡುಗೆ ಅಪಾರವಾಗಿದ್ದು, ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣದಲ್ಲೂ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಪ್ರಾಚಾರ್ಯ ಹಾಗೂ ಗಾಯಕ ಕಾಗಲವಾಡಿ ರಂಗಸ್ವಾಮಿ ಅವರು ವಿಶ್ವೇಶ್ವರಯ್ಯನವರ ಜ್ಞಾನ, ಸೇವೆ ಮತ್ತು ಪರಿಶ್ರಮ ಕನ್ನಡಿಗರಿಗೆ ಸದಾ ಸ್ಫೂರ್ತಿಯಾಗಿದೆ ಎಂದರು. ಇದೇ ವೇಳೆ ಗಾಯಕರಾದ ಮೊಹಮ್ಮದ್ ಗೌಸ್ ಹಾಗೂ ಶಿವಲಿಂಗಮೂರ್ತಿ ಅವರು ಕನ್ನಡ ನಾಡು, ನುಡಿ, ಜಲ ಹಾಗೂ ಭಾಷೆಗೆ ಸಂಬಂಧಿಸಿದ ಕನ್ನಡ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರಪ್ರಸಾದ್, ಜಯರಾಜ ರಾಮಸಮುದ್ರ, ಶಿವು, ಬಿ.ಕೆ. ಆರಾಧ್ಯ, ದಿವಾಕರ್ ಹಾಗೂ ಗಣೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




