
ಉಡುಪಿ: ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ) ಉಡುಪಿ ವತಿಯಿಂದ ಸಂಸ್ಥೆಯ 32ನೇ ವಾರ್ಷಿಕೋತ್ಸವ ಹಾಗೂ ಓಣಂ ಆಚರಣೆಯನ್ನು ಸೆಪ್ಟೆಂಬರ್ 20ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಹಾಲ್ನಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಗಿದೆ ಎಂದು ಕೆಸಿಎಸ್ಸಿ ಕಾರ್ಯಕಾರಿ ಸಮಿತಿ ಸದಸ್ಯೆ ಡಾ. ಪಾರ್ವತಿ ಐತಾಳ್ ತಿಳಿಸಿದ್ದಾರೆ. ಮಲೆಯಾಳಿ ಸಮುದಾಯದ ಸಂಸ್ಕೃತಿ, ಸಂಪ್ರದಾಯ ಹಾಗೂ ಜೀವನಶೈಲಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಳೆದ 32 ವರ್ಷಗಳಿಂದ ಓಣಂ ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದು, ಕೆಸಿಎಸ್ಸಿ ಅಧ್ಯಕ್ಷ ರಾಜನ್ ಫಿಲಿಪ್ಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ, ಕಲೆ-ಸಂಸ್ಕೃತಿ ಹಾಗೂ ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರಿಗೆ 2026ರ ಕೆಸಿಎಸ್ಸಿ ಪಂಚರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಅಶಕ್ತರಿಗೆ ಧನಸಹಾಯ ಸೇರಿದಂತೆ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳ ಜೊತೆಗೆ ‘ಸೂಪರ್ ಸೆವೆಂಟಿ’ ಹಾಗೂ ‘ಯೂಥ್ ವಿಂಗ್’ ಆರಂಭಿಸಲಾಗುತ್ತಿದೆ. ವಿಶೇಷ ಆಕರ್ಷಣೆಯಾಗಿ ಮಲಯಾಳಂ ನಟ ರಾಜೇಶ್ ಹೆಬ್ಬಾರ್ ಭಾಗವಹಿಸಲಿದ್ದು, ಪ್ರಸಿದ್ಧ ಗಾಯಕರ ಆರ್ಕೆಸ್ಟ್ರಾ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ‘ಅತ್ತಾಪೂಕಲಂ’ ಹೂವಿನ ರಂಗೋಲಿ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 10ರಿಂದ 12.30ರವರೆಗೆ ಮಿತ್ರ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ಹಾಗೂ ಮಧ್ಯಾಹ್ನ ಕೇರಳದ ಸಾಂಪ್ರದಾಯಿಕ ಖಾದ್ಯಗಳೊಂದಿಗೆ ಓಣಂ ಸದ್ಯ ಆಯೋಜಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.
ವರದಿ: ಅರುಣ್ ಭಟ್ ಕಾರ್ಕಳ




