
ನೆರೆಯ ರಾಷ್ಟ್ರ ನೇಪಾಳವು ತ್ರಿಶೂಲಿ ನದಿಯಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಿಂದ ಅಕ್ಷರಶಃ ತತ್ತರಿಸಿ ಹೋಗಿದೆ. ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾರದಷ್ಟು ಕೆಸರು ಮಿಶ್ರಿತವಾದ ಮಣ್ಣಿನಿಂದ ತುಂಬಿ ಅಡಚಣೆಯಾಗಿರುವ ಸುದ್ದಿ ಮನಕಲಕುವಂತಿದೆ. ಇದುವರೆಗೆ 980 ಮಂದಿ ಪ್ರಾಣ ಕಳೆದುಕೊಂಡಿರುವ, ಸಾವಿರಾರು ಮಂದಿ ಕಾಣೆಯಾಗಿರುವ ಬಗ್ಗೆ ವರದಿಗಳು ಬಂದಿವೆ. ನೇಪಾಳದ ಗಡಿಯಾಚೆಗಿನ 200 ಕಿಮೀ ದೂರದವರೆಗೂ ಆನೆಗಳ ಶವಗಳು ಕಂಡಿವೆ ಎಂದರೆ ಪ್ರವಾಹದ ವೇಗ ಮತ್ತು ಉಂಟು ಮಾಡಿರುವ ಪರಿಣಾಮವನ್ನು ತಿಳಿಸುತ್ತದೆ.

ಹಿಮ ಬಂಡೆಗಳ ಕುಸಿತವೇ ದಿಡೀರ್ ಪ್ರವಾಹಕ್ಕೆ ಕಾರಣ ಎಂದು ಅಧ್ಯಯನಗಳು ಹೇಳುತ್ತಿವೆ. 5200 ಮೀಟರ್ ಎತ್ತರದಿಂದ ಉರುಳಿದ ಹಿಮ ಬಂಡೆಗಳು ಇಂತಹ ಪ್ರವಾಹಕ್ಕೆ ಕಾರಣ ಎಂದು ಕೆನಡಾದ ಕ್ಯಲ್ಗರಿ ವಿಶ್ವವಿದ್ಯಾಲಯದ ಭೂಸ್ವರೂಪ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡೇನಿಯಲ್ ಶೂಗರ್ ಉಪಗ್ರಹ ಚಿತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸಿ ಹೇಳಿಕೆ ನೀಡಿದ್ದಾರೆ.
ತಾಪಮಾನದಲ್ಲಿ ಏರಿಕೆ, ಬಲವಾದ ಗಾಳಿ, ಸುರಿವ ಮಳೆಗಳಂತಹ ಸಣ್ಣ ಬದಲಾವಣೆಗಳೂ ತ್ವರಿತಗತಿಯಲ್ಲಿ ಹಿಮ ಕರಗಲು ಕಾರಣವಾಗುತ್ತವೆ. ಮೇಲ್ಮೈ ಕರಗುತ್ತಿದ್ದಂತೆಯೇ ಸಡಿಲಗೊಳ್ಳುವ ಹಿಮದ ಬೃಹಾದಾಕಾರದ ಬಂಡೆಗಳು ಕಣಿವೆಗೆ ಉರುಳಿದಾಗ ದಿಡೀರ್ ಪ್ರವಾಹಕ್ಕೆ ಕಾರಣವಾಗುವಿಕೆಯನ್ನು ಅಧ್ಯಯನದಿಂದ ತಿಳಿಸಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡಗಳ ಎತ್ತರಕ್ಕೆ ಅಂದರೆ ಅತೀ ಎತ್ತರದ ಅಡಿಕೆ ಮರದಷ್ಟು ಎತ್ತರದ ಅಲೆಗಳು ಚಿಮ್ಮಿ ಬಂದಿರುವುದು ಭಯಾನಕವಾದ ಘಟನೆಯೇ ಸರಿ. ಇಂತಹ ನೆರೆ ಪ್ರವಾಹ ಊಹಿಸಲು ಕಷ್ಟ.
ತ್ರಿಶೂಲಿ ನದಿಯಲ್ಲಿನ ಪ್ರವಾಹದ ಮುನ್ನೆಚ್ಚರಿಕೆಯಂತೆ ರುಸುವಾ ಪ್ರದೇಶದ ಜನರಿಗೆ ಸರಿಯಾದ ಸಮಯಕ್ಕೆ ಸುದ್ದಿ ತಲುಪದೇ ಹೋದದ್ದು, ತೀವ್ರತೆಯ ಅರಿವಾಗದಿದ್ದದು ಅಪಾರ ಪ್ರಮಾಣದ ಸಾವು, ನೋವುಗಳಿಗೆ ಕಾರಣವಾಯಿತು. ನವಾಕೋಟಾ ಜನತೆಗೆ ಸಿಕ್ಕ ಎಚ್ಚರಿಕೆಯ ಸಂದೇಶದಿಂದಾಗಿ ಸುರಕ್ಷಿತ ಸ್ಥಳಗಳಿಗೆ ಧಾವಿಸಿ ಪ್ರಾಣ ಉಳಿಸಿಕೊಂಡ ವರದಿಯೂ ಆಗಿದೆ. ಎಚ್ಚರಿಕೆ ಬಂದ ಕೆಲವೇ ಕ್ಷಣಗಳಲ್ಲಿ ತೂರಿ ಬಂದ ಪ್ರವಾಹದಿಂದ ಕಣ್ತೆರೆಯುವಷ್ಟರಲ್ಲಿ ಅಪಘಾತ ನಡೆದೇಹೋಗಿದೆ. ತಪ್ಪಿಸಿಕೊಳ್ಳುವಷ್ಟು ಸಮಯಾವಕಾಶ ಸಿಗದೇ ಅಪಾರವಾದ ಪ್ರಾಣ ಹಾನಿ, ಆಸ್ತಿಹಾನಿ ಲೆಕ್ಕಕ್ಕೆ ಸಿಗದಷ್ಟು ನಡೆದು ಘಾಸಿಯಾಯಿತು.
ಈ ಎಲ್ಲ ದುರಂತಗಳಿಗೆ ಪರಿಸರದಲ್ಲಾಗುತ್ತಿರುವ ಬದಲಾವಣೆಗಳೆ ಎಂದು ಸಾಕಷ್ಟು ವರದಿಗಳು, ಅಧ್ಯಯನಗಳು, ಮಾಧ್ಯಮಗಳ ಮುಖಾಂತರ ವಿಚಾರಗಳು ಪ್ರಕಟವಾಗಿವೆ. ಸಾರ್ವಜನಿಕರು ಮಾಧ್ಯಮಗಳಲ್ಲಿ ಓದಿಯೂ ಅನುಭವಕ್ಕೆ ತಂದುಕೊಂಡಿದ್ದಾರೆ. ಆದರೆ ಪ್ರಾಯೋಗಿಕ ಜೀವನಕ್ಕೆ ಬಂದಾಗ ಮತ್ತದೇ ತಪ್ಪುಗಳನ್ನು ಮಾಡುತ್ತಾನೆ. ಅದೇ ತಪ್ಪಿನಿಂದ ಇಂತಹ ದುರಂತಗಳಿಗೆ ಎದುರಾಗುತ್ತಾನೆ. ಕೈಗಾರಿಕೆಗಳಿಂದ ಹೊಮ್ಮುತ್ತಿರುವ ಧೂಮಗಳು. ಯುದ್ದಗಳು, ಬೇಕಂತೆಲೇ ಅಜ್ಞಾನದಿಂದ ಉರಿಸುವ ಕಾಳ್ಗಿಚ್ಚುಗಳು, ನದಿಗಳಿಗೆರಚುವ ತ್ಯಾಜ್ಯವಸ್ತುಗಳು, ಭೂಮಿಯ ಮೇಲೆ ಎಲ್ಲೆಂದರಲ್ಲಿ ಎಸೆಯುವ ಪ್ಲಾಸ್ಟಿಕ್, ನೀರಿನ ಬಾಟಲಿಗಳು ಇಂತಹ ಅನಾಹುತಗಳನ್ನು ತಂದೊಡ್ಡುತ್ತವೆ ಎಂಬ ವಿಚಾರವನ್ನು ನಾಗರೀಕರ ಗಮನಕ್ಕೆ ತಂದು ಮನದಟ್ಟು ಮಾಡುವವರು ಯಾರು ? ಬೆಂಗಳೂರನ್ನು ಸ್ವರೂಪಕ್ಕೆ ತರಲು ಸಚಿವ ಕೃಷ್ಣ ಬೈರೇಗೌಡರು ಪ್ರಯತ್ನಿಸುತ್ತಿದ್ದರೂ, ತೆರವುಗೊಳಿಸಿದ ಸ್ಥಾನದಲ್ಲಿ ಮರುದಿನ ಪುಟ್ಪಾತ್ ನಲ್ಲೇ ಅಂಗಡಿ ತೆರೆಯುವವರ, ರಸ್ತೆ ನಮ್ಮದೇ ಆಸ್ತಿ ಎಂಬಂತೆ ತಮ್ಮ ವಾಹನ ನಿಲ್ಲಿಸುವವರ ಮನಸ್ಥಿತಿ ಎಂತಹುದು. ಇಂತಹ ನೇಪಾಳದ ಮನಕಲಕುವ ದೃಶ್ಯಗಳು, ಘಟನೆಗಳು ಕಲಿಸದ ಪಾಠವನ್ನು ಇನ್ನಾವುದರಿಂದ ಕಲಿಯಬೇಕು. ಮನಸ್ಸಿಗಿಂತ ಶಕ್ತಿಯುತವಾದದ್ದು, ಮನಸ್ಸಿಗಿಂತ ಹರಿತವಾದದ್ದು ಯಾವುದೂ ಇಲ್ಲವೆನ್ನುತ್ತಾರೆ. ಮನುಷ್ಯನಿಗೆ ಎಲ್ಲವೂ ಗೊತ್ತು. ಆದರೆ ಇಂತಹ ನನ್ನ ಮನೋದೋರಣೆಗಳೇ ಇಂತಹ ಅನಾಹುತಕ್ಕೆ ಕಾರಣವಾಗುತ್ತಲಿವೆ ಎಂಬ ಅರಿವು ಮೂಡುವುದು ಯಾವಾಗ ? ಇಂತಹ ಹತ್ತಾರು ಪ್ರಶ್ನೆಗಳಿಗೆ ನಮಗೆ ನಾವೇ ಜಾಗೃತಾರಾಗದೇ ಇದ್ದರೆ ಉತ್ತರವೆಲ್ಲಿ ಸಿಕ್ಕೀತು ?







