
ಕೊಟ್ಟಿಗೆಹಾರ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ 88ನೇ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 6ರಂದು ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಪ್ರಾಜೆಕ್ಟ್ ಪಂಚತಂತ್ರ ನಾಟಕ ಪ್ರದರ್ಶನ ಹಾಗೂ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮ ಅಂದು ಸಂಜೆ 5.30ಕ್ಕೆ ಆರಂಭವಾಗಲಿದ್ದು, ತೇಜಸ್ವಿ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಕರ್ವಾಲೊ ಕೃತಿ ಆಧಾರಿತ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ನಿರ್ದಿಗಂತ ತಂಡದಿಂದ ಪ್ರಾಜೆಕ್ಟ್ ಪಂಚತಂತ್ರ ನಾಟಕ ಪ್ರದರ್ಶನಗೊಳ್ಳಲಿದ್ದು, ಅರುಣ್ಲಾಲ್ ಅವರು ನಾಟಕವನ್ನು ನಿರ್ದೇಶಿಸಿದ್ದಾರೆ. ಪಂಚತಂತ್ರದ ಪುರಾತನ ಕಥೆಗಳು ಇಂದಿನ ಬದುಕಿನೊಂದಿಗೆ ಸಂವಾದಿಸುವ ವಿಶಿಷ್ಟ ರಂಗಪ್ರಯೋಗ ಇದಾಗಿದ್ದು, 15ಕ್ಕೂ ಹೆಚ್ಚು ಕಥೆಗಳು ದೃಶ್ಯಕಾವ್ಯದ ಮೂಲಕ ಹೊಸ ರೂಪ ಪಡೆಯಲಿವೆ. ನಾಟಕಕ್ಕೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಮಾಹಿತಿಗಾಗಿ 9663098873 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.




