
ಚಿಕ್ಕಮಗಳೂರು: ಮದ್ಯ ಸೇವಿಸಿ ಈಜಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಭೈರನಕಟ್ಟೆ ಸಮೀಪದ ಭದ್ರಾ ಬ್ಯಾಕ್ವಾಟರ್ನಲ್ಲಿ ನಡೆದಿದೆ. ಮೃತ ಯುವಕನನ್ನು 23 ವರ್ಷದ ನಿಖಿಲ್ ಆರ್. ಸಿಂಗ್ ಎಂದು ಗುರುತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿವಾಸಿಯಾಗಿರುವ ನಿಖಿಲ್, ನಿನ್ನೆ ಸಂಜೆ ಇಬ್ಬರು ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಬಳಿಕ ಭದ್ರಾ ಬ್ಯಾಕ್ವಾಟರ್ನಲ್ಲಿ ಈಜಲು ತೆರಳಿದ್ದ ಎನ್ನಲಾಗಿದೆ. ಈ ವೇಳೆ ನಿಖಿಲ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬ್ಯಾಕ್ವಾಟರ್ನಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಸಂತೋಷ್ ಅತ್ತಿಗೆರೆ




