
ಚಿಕ್ಕಮಗಳೂರು: ಗಟ್ಟಿ ಗುಂಡಿಗೆ ಇದ್ದವರಿಗೆ ಮಾತ್ರ ಈ ರಸ್ತೆಯಲ್ಲಿ ಸಂಚಾರ ಸಾಧ್ಯ ಎನ್ನುವಂತಾಗಿದೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಾಗುಂಡಿ ಗ್ರಾಮದ ರಾಜ್ಯ ಹೆದ್ದಾರಿಯ ಪರಿಸ್ಥಿತಿ. ರಸ್ತೆಯಲ್ಲಿ ಗುಂಡಿ ಇಲ್ಲ, ಗುಂಡಿಯಲ್ಲೇ ರಸ್ತೆ ಇದೆ ಎನ್ನುವಂತಾಗಿದ್ದು, ಇಲ್ಲಿ ಗುಂಡಿಯೇ ರಸ್ತೆಯಾಗಿದೆ. ಬಾಳೆಹೊನ್ನೂರಿನಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗ ಇದಾಗಿದ್ದು, ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯ ದುಸ್ಥಿತಿ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಬೇಸತ್ತು ಇದೀಗ ತಾವೇ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಗ್ರಾಮಸ್ಥರೇ ಹಣ ಸಂಗ್ರಹಿಸಿ, ರಾಜ್ಯ ಹೆದ್ದಾರಿಯಲ್ಲಿದ್ದ ಗುಂಡಿಗಳನ್ನು ಸಣ್ಣ ಪ್ರಮಾಣದಲ್ಲಿ ಮುಚ್ಚಿ ಕಾಯಕಲ್ಪ ನೀಡಿದ್ದಾರೆ. ದಿನನಿತ್ಯ ಗುಂಡಿಗಳ ನಡುವೆ ಎದ್ದು-ಬಿದ್ದು ಸಂಚರಿಸುತ್ತಿದ್ದ ವಾಹನ ಸವಾರರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಹೊರನಾಡು ಶ್ರೀಕ್ಷೇತ್ರಕ್ಕೆ ತೆರಳುವ ಪ್ರಮುಖ ಮಾರ್ಗವಾಗಿರುವ ಈ ರಸ್ತೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರ ವಾಹನಗಳ ಸಂಚಾರವೂ ಹೆಚ್ಚಾಗಿರುತ್ತದೆ. ಹೀಗಿದ್ದರೂ ರಸ್ತೆ ದುರಸ್ತಿಗೆ ಅಧಿಕಾರಿಗಳು ಗಮನ ಹರಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ: ಸಂತೋಷ್ ಅತ್ತಿಗೆರೆ




