
ಶೃಂಗೇರಿ: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರಕೃತಿ ವಿಕೋಪದಿಂದ ಉಂಟಾಗಿರುವ ಪರಿಸ್ಥಿತಿಗೆ ಶೃಂಗೇರಿ ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ತೀರ್ಥ ಮಹಾಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಸೂರು, ಆಪ್ತರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ. ನೇಪಾಳದಲ್ಲಿ ಜನಜೀವನ ಶೀಘ್ರವೇ ಸಹಜ ಸ್ಥಿತಿಗೆ ಮರಳಲಿ, ಮಹಾ ವಿಪತ್ತಿನಿಂದ ದೇಶವು ಬೇಗನೆ ಚೇತರಿಸಿಕೊಳ್ಳಲಿ ಎಂದು ಆಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೃಂಗೇರಿ ಶ್ರೀಮಠದಲ್ಲಿ ಶ್ರೀ ಶಾರದಾ ಪರಮೇಶ್ವರಿ ಹಾಗೂ ಶ್ರೀ ಚಂದ್ರಮೌಳೀಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೊಳಗಾದ ಸಂತ್ರಸ್ತರ ಕಣ್ಣೀರೊರೆಸಲು ಶ್ರೀಮಠ ನೆರವಿನ ಹಸ್ತ ಚಾಚಿದ್ದು, ತುರ್ತು ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಲು ಸಿದ್ಧವಿರುವುದಾಗಿ ತಿಳಿಸಿದೆ. ಸಂತ್ರಸ್ತರಿಗೆ ಅಗತ್ಯವಿರುವ ಪರಿಹಾರ ಸಾಮಗ್ರಿ ಹಾಗೂ ನೆರವನ್ನು ತಕ್ಷಣವೇ ಒದಗಿಸುವಂತೆ ಶ್ರೀಮಠದ ಆಡಳಿತ ಮಂಡಳಿಗೆ ಕಿರಿಯ ಜಗದ್ಗುರುಗಳು ಸೂಚನೆ ನೀಡಿದ್ದಾರೆ.




