
ನಮ್ಮಲ್ಲಿ ಹೆಚ್ಚಿನವರಿಗೆ ಅದೊಂದು ಅಭ್ಯಾಸವೇ ಇರುವುದಿಲ್ಲ. ಒಬ್ಬ ವ್ಯಕ್ತಿಯೆಡೆಗಿನ ಮೆಚ್ಚುಗೆ, ಅಭಿಮಾನವನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ಮುಂದಾಗುವುದೇ ಇಲ್ಲ. ನೀವು ಗಮನಿಸಿ ನೋಡಿ, ಯಾವ ಗಂಡನೂ ತನ್ನ ಹೆಂಡತಿಯ ಕೈ ರುಚಿಯ ಬಗ್ಗೆ, ಆಕೆಯ ಅಲಂಕಾರಿಕ ಅಭಿರುಚಿಯ ಬಗ್ಗೆ, ಹಾಕಿದ ರಂಗೋಲಿಯ ಬಗ್ಗೆ ಮೆಚ್ಚುಗೆ ಸೂಚಿಸುವುದಿಲ್ಲ. ಇದು ಕೇವಲ ಗಂಡ ಹೆಂಡತಿಯ ನಡುವಿನ ಕುರಿತಲ್ಲ. ಸಮಾಜದ ಒಟ್ಟಾರೆ ಮನಸ್ಥಿತಿಯೇ ಹೀಗಿರುತ್ತದೆ. ಯಾರನ್ನಾದರೂ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಮೆಚ್ಚುಗೆಯ ಮಾತಾಡುವುದಕ್ಕಿಂತ, ಕಾಲೆಳೆದು ಹೀಯಾಳಿಸಿ ಮಾತಾಡುವುದರಲ್ಲೆ ನಾವೆಲ್ಲ ನಿಸ್ಸೀಮರಾಗಿದ್ದೇವೆ! ಹೌದಲ್ವಾ ಗೆಳೆಯರೇ, ನಾವು ಟೀಕಿಸುವುದು, ವ್ಯಂಗ್ಯ ಮಾಡಿ ನಗುವುದನ್ನು ಅದೆಷ್ಟು ರೂಢಿಸಿಕೊಂಡಿದ್ದೇವೆ. ಕಾಲೆಳೆದು ಅಪಹಾಸ್ಯ ಮಾಡಲು ನಮಗೆ ಯಾರಾದರೇನು? ಆತ ನಮ್ಮ ವಿರೋಧಿ ಆಗಿರಬೇಕೆಂದೇನಿಲ್ಲ. ನಮ್ಮದೇ ಗುಂಪಿನ ಗೆಳೆಯನಾದರೂ ಸೈ ನಾವು ತಮಾಷೆಯ ಹೆಸರಿನಲ್ಲಿ ಆತನನ್ನು ಆಡಿಕೊಳ್ಳುತ್ತೇವೆ. ಆತನ ಸೋಲಿಗೆ ಹಂಗಿಸುತ್ತೇವೆ. ತುಂಬಾ ಸಲ ನಮಗೆ ಇದರ ಪರಿಣಾಮಗಳು ಅರ್ಥವಾಗುವುದೇ ಇಲ್ಲ. ನಾಲ್ಕು ಜನರ ಮಧ್ಯೆ ನಾವು ಗೆಳೆಯನೊಬ್ಬನ ಬಗ್ಗೆ ಮಾಡಿದ ಲೇವಡಿ ಆ ಕ್ಷಣಕ್ಕೆ ಎಲ್ಲರನ್ನೂ ರಂಜಿಸಿರಬಹುದು. ಎಲ್ಲರೂ ಮನಸಾರೆ ನಕ್ಕಿರಬಹುದು. ಆದರೆ ನೀವು ಮಾಡಿದ ಲೇವಡಿ ಒಬ್ಬನ ಮನಸ್ಸನ್ನ ಎಷ್ಟರಮಟ್ಟಿಗೆ ಘಾಸಿಗೊಳಿಸಿರಬಹುದು ಎಂದು ಊಹಿಸಿದ್ದೀರಾ? ಸ್ನೇಹಿತರು ಎಂದ ಮೇಲೆ ಇಂಥಹ ತಮಾಷೆಗಳು ಸಹಜ ಅಲ್ಲವೇ ಎಂದು ನೀವಂದುಕೊಳ್ಳಬಹುದು. ನಿಜ, ಬದುಕು ಎಂದ ಮೇಲೆ ಸುಖ, ದುಃಖ, ಸಡಗರ, ಸಂಭ್ರಮ, ತಮಾಷೆ ಎಲ್ಲವು ಇರುತ್ತದೆ. ಆದರೆ ಬದುಕಿನಲ್ಲಿ ತಮಾಷೆ ಇರಬೇಕೆ ಹೊರತು ಬದುಕೇ ತಮಾಷೆ ಆಗಬಾರದು. ಒಬ್ಬ ವ್ಯಕ್ತಿ ತನ್ನ ಹೊಸ ಪ್ರಯತ್ನದಲ್ಲಿ ಸೋತಾಗ ಆತನನ್ನು ಸಮಾಜ ಆಡಿಕೊಳ್ಳುತ್ತದೆ. ಅದು ಈ ಸಮಾಜದ ಹಳೇ ಚಾಳಿ. ಆದರೆ ಜೊತೆಗಿದ್ದ ಗೆಳೆಯರು? ನಮ್ಮ ತಮಾಷೆ ನಗುವಿನ ಸರಕಾಗಬೇಕೇ ಹೊರತು ಗೆಳೆಯನೊಬ್ಬನ ಹತಾಶೆಗೆ ಕಾರಣವಾಗಬಾರದು. ನಾವು ಮಾಡಿದ ಲೇವಡಿಯಿಂದಾಗಿ ಆತ ತನ್ನ ಪ್ರಯತ್ನವನ್ನೇ ಕೈಬಿಡುವಂತಾಗಬಾರದು. ಬಿಡಿ ನಾನು ಹೇಳ ಹೊರಟಿದ್ದು ಈ ಸಂಗತಿಯನ್ನಲ್ಲ. ಹತ್ತಾರು ಬಾರಿ ಸೋತು ನಾವು ಮಾಡಿದ ತಮಾಷೆಯನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳದೆ ಕೊನೆಗೊಂದು ದಿನ ಎಸ್! ನಾನು ಗೆದ್ದೆ ಎಂದು ಸಂತೋಷದಿಂದ ಬಂದು ನಿಂತ ಗೆಳೆಯನಿಗೆ ನಾವು ಒಂದು ಮೆಚ್ಚುಗೆ ಸೂಚಿಸುವ, ಆತನ ಗೆಲುವನ್ನೂ ಸಂಭ್ರಮಿಸುವ, ಆತನ ಹೆಗ್ಗಳಿಕೆಯನ್ನೂ ಒಪ್ಪಿಕೊಳ್ಳುವ, ಆತನ ಸಾಧನೆಯ ಬಗ್ಗೆ ನಾಲ್ಕು ಜನರ ಮುಂದೆ ಮಾತಾಡುವ ಹೃದಯ ವೈಶಾಲ್ಯತೆ ನಮಗೆ ಯಾಕಿಲ್ಲ? ಆತನ ಸೋಲನ್ನು ಆಡಿಕೊಂಡಾಗಿನ ಉತ್ಸಾಹ, ಗೆದ್ದಾಗ ಮೆಚ್ಚುಗೆ ಸೂಚಿಸುವಲ್ಲಿ ಇರುವುದಿಲ್ಲ. ಇದು ಸಣ್ಣತನ ಅಲ್ಲವೇ? ನಮ್ಮ ಸ್ವಭಾವ ಹೇಗಿರುತ್ತದೆ ನೋಡಿ. ಮಗಳಿಗಿಂತ ಮಗ ಕಡಿಮೆ ಮಾರ್ಕು ತೆಗೆದಾಗ ನೋಡೋ ಅವಳನ್ನ… ನಿಂಗೇನೋ ದಾಡಿ ಅಂತ ಉಗಿದಿರುತ್ತೇವೆ. ಅದೇ ಮಗ ನೂರು ಮೀಟರ್ ಓಡಿ ಚಿನ್ನ ಗೆದ್ದರೆ ಊಹುಂ ಭೇಷ್ ಅನ್ನುವ ಔದಾರ್ಯತೆ ನಮಗಿರುವುದಿಲ್ಲ. ಮಗ ಬೆಳೆದು ದುಡಿಯಲು ಶುರು ಮಾಡಿದರೆ ಅದು ಹೆಮ್ಮೆ. ಆದರೆ ಮನೆಯಲ್ಲಿರೋ ಮಗಳು ಇಡೀ ಮನೆಯನ್ನು ಸಂಭಾಳಿಸುತ್ತಾಳೆ. ಅದ್ಭುತವಾಗಿ ಹಾಡುತ್ತಾಳೆ, ಚಂದನೆಯ ರಂಗೋಲಿ ಹಾಕುತ್ತಾಳೆ. ಇದನ್ನ ನಾವು ಗುರುತಿಸುವುದೇ ಇಲ್ಲ. ಪಕ್ಕದ ಮನೆಯನ್ನು ಹೊಗಳುವ ನಮಗೆ ನಮ್ಮದೇ ಮನೆಯಲ್ಲಿರೋ ಪ್ರತಿಭೆಯನ್ನ ಗುರುತಿಸಲು ಯಾಕೆ ಸಾಧ್ಯವಾಗುವುದಿಲ್ಲ? ಒಬ್ಬ ಕಲಾವಿದನಿಗೆ, ಸಾಹಿತಿಗೆ, ಬರಹಗಾರನಿಗೆ, ಹಾಡುಗಾರನಿಗೆ ಅಷ್ಟೇಕೆ, ನಮ್ಮ ಮನೆಯಲ್ಲಿ ರುಚಿಯಾಗಿ ಅಡುಗೆ ಮಾಡೋ ಹೆಂಗಸರು ಕೂಡ ಒಂದು ಮೆಚ್ಚುಗೆ, ಪ್ರಶಂಸೆಯನ್ನ ನಿರೀಕ್ಷಿಸುತ್ತಾರೆ. ಅದು ತಪ್ಪಲ್ಲ. ಆದರೆ ಪ್ರಶಂಸಿಸುವ ದೊಡ್ಡತನ ನಮಗಿರಬೇಕು ಅಷ್ಟೆ. ಪ್ರಾಣ ಉಳಿಸಿದ ಅಂಬುಲೆನ್ಸ್ ಡ್ರೈವರ್, ಪರೀಕ್ಷೆಗೆ ಸರಿಯಾಗಿ ತಲುಪಿಸಿದ ಆಟೋ ಚಾಲಕ, ನಯವಾಗಿ ಮಾತಾಡಿ ಊಟ ಬಡಿಸಿದ ಹೊಟೇಲ್ ವೇಟರ್, ಒಂದು ಅದ್ಭುತ ಪ್ರವಾಸವನ್ನು ಮುಗಿಸಿಕೊಟ್ಟ ಟ್ಯಾಕ್ಸಿಯವನಿಗೆ ನಾವು ಯಾವತ್ತಾದರೂ ಒಂದು ಅಭಿಮಾನದ ಮಾತಾಡಿ ಬೆನ್ನು ತಟ್ಟಿದ್ದೇವೆಯೇ? ಕೊನೆಯದಾಗಿ ಒಂದು ಮಾತು ಓದುಗರೇ, ನಮ್ಮ ಹೊಗಳಿಕೆ ಯಾರಿಗೂ ಅಗತ್ಯವಿರುವುದಿಲ್ಲ. ಆದರೆ ಒಂದು ಮೆಚ್ಚುಗೆ ಸ್ಪೂರ್ತಿಯನ್ನು ತುಂಬಿಸುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬರನ್ನು ಮೆಚ್ಚಿ ಪ್ರಶಂಸಿಸಿದರೆ ನಮ್ಮ ವ್ಯಕ್ತಿತ್ವ ಇನ್ನಷ್ಟು ದೊಡ್ಡದಾಗುತ್ತದೆ. ಬದುಕಿನಲ್ಲಿ ತಮಾಷೆ ಇರಬೇಕೇ ಹೊರತು ಬದುಕೇ ತಮಾಷೆ ಆಗಬಾರದು ಹೌದೋ, ಅಲ್ವೋ?







