
ಚಿಕ್ಕಮಗಳೂರು: ರೌಡಿ ಶೀಟರ್ಗಳ ಜೊತೆ ಎಣ್ಣೆ ಪಾರ್ಟಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣೆಯ ಎಎಸ್ಐ ವೀರೇಂದ್ರ ಅವರನ್ನು ಅಮಾನತು ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಕಡೂರು ತಾಲೂಕಿನ ಎಮ್ಮೆದೊಡ್ಡಿ ಮುಸ್ಲಾಪುರ ಗ್ರಾಮದಲ್ಲಿರುವ ಬಾರ್ನಲ್ಲಿ ಒಂದು ವಾರದ ಹಿಂದೆ ಎಎಸ್ಐ ವೀರೇಂದ್ರ ಪಾರ್ಟಿ ಆಯೋಜಿಸಿದ್ದರು ಎನ್ನಲಾಗಿದ್ದು, ಇಡೀ ರಾತ್ರಿ ಬಾರ್ನಲ್ಲಿ ಜೋರಾಗಿ ಹಾಡು ಹಾಕಿ ಪಾರ್ಟಿ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಬಾರ್ ಮುಂಭಾಗ ಗ್ರಾಮಸ್ಥರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದರು. ಬಾರ್ ಬಂದ್ ಮಾಡುವಂತೆ ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ನಿರಂತರವಾಗಿ ದೂರುಗಳು ಬಂದಿದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎಎಸ್ಐ ವೀರೇಂದ್ರ ಅವರನ್ನು ಅಮಾನತು ಮಾಡಲು ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ಆದೇಶಿಸಿದ್ದಾರೆ.




