
ಮೂಡಿಗೆರೆ: ಮೂಡಿಗೆರೆ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದು, 2025-26ನೇ ಸಾಲಿನಲ್ಲಿ ಸಂಘವು ₹64.75 ಲಕ್ಷ ಅಂದಾಜು ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎಲ್.ಕಲ್ಲೇಶ್ ತಿಳಿಸಿದರು. ಹೆಚ್.ಎಸ್.ಚಂದ್ರೇಗೌಡ ಬಡಾವಣೆಯಲ್ಲಿರುವ ರೈತಭವನದಲ್ಲಿ ನಡೆದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರು ಹಾಗೂ ರೈತರಿಗೆ ಅನುಕೂಲವಾಗುವಂತೆ 2,500ರಿಂದ 3,000 ಜನರಿಗೆ ಅಡುಗೆ ವ್ಯವಸ್ಥೆ ಕಲ್ಪಿಸಲು ಅಗತ್ಯ ಪಾತ್ರೆಗಳನ್ನು ಖರೀದಿಸಲಾಗಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯುತ್ತಿರುವುದು ಸಂತಸದ ವಿಚಾರ ಎಂದರು. ರೈತಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಪಟ್ಟಣದ ಮುಖ್ಯ ರಸ್ತೆಯಲ್ಲಿದ್ದ ಶಿಥಿಲಾವಸ್ಥೆಯಲ್ಲಿನ ಸಂಘದ ಹಳೆಯ ಕಚೇರಿ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು. ಇದೇ ವೇಳೆ ಮಾಕೋನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎನ್.ಅಶ್ವತ್ ಅವರು ನೂತನ ಕಟ್ಟಡದಲ್ಲಿ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು. ರೈತಭವನದಲ್ಲಿನ ಹಳೆಯ ಹಾಗೂ ಹಾನಿಗೊಳಗಾದ ಕುರ್ಚಿಗಳನ್ನು ಬದಲಾಯಿಸುವಂತೆ ಸದಸ್ಯರು ಹಾಗೂ ಮುಖಂಡರು ಅಧ್ಯಕ್ಷರ ಗಮನಕ್ಕೆ ತಂದಿದ್ದು, ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುವ ಭರವಸೆಯನ್ನು ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ನೀಡಿದರು. ಕಾರ್ಯಕ್ರಮದಲ್ಲಿ ಸಾಧನೆಗೈದ ವಿದ್ಯಾರ್ಥಿಗಳು, ನಿವೃತ್ತ ನೌಕರರು ಹಾಗೂ ಸಂಘದ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವ್ಯವಸ್ಥಾಪಕ ನಿರ್ದೇಶಕ ಹೆಚ್.ಹೆಚ್.ವಿವೇಕ್ ವಾರ್ಷಿಕ ವರದಿ ಮಂಡಿಸಿದ್ದು, 2025-26ನೇ ಸಾಲಿನ ನಿವ್ವಳ ಲಾಭದ ವಿನಿಯೋಗಕ್ಕೆ ಸಂಬಂಧಿಸಿದಂತೆ ₹30,12,839 ಮೊತ್ತವನ್ನು ವಿವಿಧ ನಿಧಿಗಳು, ನೌಕರರ ಬೋನಸ್, ಸರ್ಕಾರ ಹಾಗೂ ಸದಸ್ಯರ ಷೇರು ಡಿವಿಡೆಂಡ್, ಕಟ್ಟಡ ನಿಧಿ, ಕಲ್ಯಾಣ ನಿಧಿ, ರಿಬೇಟ್, ಪ್ರತಿಭಾ ಪುರಸ್ಕಾರ ಸೇರಿದಂತೆ ವಿವಿಧ ಉದ್ದೇಶಗಳಿಗೆ ವಿನಿಯೋಗಿಸುವ ಪ್ರಸ್ತಾವನೆಯನ್ನು ಸರ್ವ ಸದಸ್ಯರ ಅನುಮೋದನೆಗೆ ಮಂಡಿಸಲಾಯಿತು. ಕಾರ್ಯಕ್ರಮವನ್ನು ಸಹಕಾರ ಕ್ಷೇತ್ರದ ಹಿರಿಯರಾದ ಒ.ಎಸ್.ಗೋಪಾಗೌಡ ಉದ್ಘಾಟಿಸಿದರು, ನಿರ್ದೇಶಕ ಎಂ.ಕೆ.ಚಂದ್ರೇಶ್ ಸ್ವಾಗತಿಸಿದರು. ಉಪಾಧ್ಯಕ್ಷ ಕೆ.ಬಿ.ಗಣೇಶ್ ಸೇರಿದಂತೆ ನಿರ್ದೇಶಕರುಗಳಾದ ಟಿ.ಎಂ.ಗಜೇಂಧ್ರ, ಎಂ.ಎಸ್.ಪ್ರಸನ್ನ, ಜಿ.ಎಂ.ಪ್ರಸನ್ನ ಕುಮಾರ್, ರಂಜನ್ ಅಜಿತ್ ಕುಮಾರ್, ಪಿ.ಜಿ.ಅನುಕುಮಾರ್, ಬಿ.ಎಲ್.ವಿದ್ಯಾ, ಪುಟ್ಟಮ್ಮ ಎಸ್.ಸಿ., ಟಿ.ಎ.ಶೇಖರ್ ಬಂಗೇರ, ರಮೇಶ್, ಈಶ್ವರ್ ಗೌಡ, ಹೆಚ್.ಜಿ.ಉತ್ತಮ ಕುಮಾರ್ ಹಾಗೂ ಹೆಚ್.ಎಸ್.ಮಂಜುನಾಥ್ ಉಪಸ್ಥಿತರಿದ್ದರು.




