
ಚಾಮರಾಜನಗರ: ಶ್ರೇಷ್ಠ ಗಾಯಕರ ಗಾಯನದಿಂದ ಸಾಹಿತಿಗಳ ಸಾಹಿತ್ಯಗಳು ಜನರ ಹೃದಯದಲ್ಲಿ ನೆಲೆಸಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್. ಋಗ್ವೇದಿ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಪಿ.ಬಿ. ಶ್ರೀನಿವಾಸ್ ಜನ್ಮದಿನ ಹಾಗೂ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅನಂತ್ ನಾಗ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಿ.ಬಿ. ಶ್ರೀನಿವಾಸ್ ಅವರು ಭಾರತೀಯ ಚಿತ್ರರಂಗದ ಶ್ರೇಷ್ಠ ಹಿನ್ನೆಲೆ ಗಾಯಕ, ಸಂಗೀತ ಸಂಯೋಜಕ, ಕವಿ, ಗೀತರಚನಕಾರ ಹಾಗೂ ವಾದ್ಯ ವಾದಕರಾಗಿದ್ದರು ಎಂದು ಸ್ಮರಿಸಿದರು. ಎಂಟು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಪಿ.ಬಿ. ಶ್ರೀನಿವಾಸ್ ಅವರ ವಿಶಿಷ್ಟ ಧ್ವನಿ ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಇಂದಿಗೂ ನೆಲೆಸಿದೆ. ಅವರು ಹಾಡಿದ ಸಾವಿರಾರು ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಡಾ. ರಾಜಕುಮಾರ್ ಅವರೇ ಪಿ.ಬಿ. ಶ್ರೀನಿವಾಸ್ ಅವರ ಧ್ವನಿ ತಮ್ಮ ಆತ್ಮದಂತಿತ್ತು ಎಂದು ಹೇಳಿರುವುದು ಅವರ ಗಾಯನದ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ರಾಜಕುಮಾರ್ ಅವರ ಚಿತ್ರಗಳಲ್ಲಿ 200ಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಅವರ ಅಭಿನಯಕ್ಕೆ ಪಿ.ಬಿ. ಶ್ರೀನಿವಾಸ್ ಅವರ ಗಾಯನ ಮತ್ತಷ್ಟು ಮೆರುಗು ನೀಡಿತ್ತು ಎಂದು ತಿಳಿಸಿದರು. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅನಂತ್ ನಾಗ್ ಅವರ ಕುರಿತು ಮಾತನಾಡಿದ ಬರಹಗಾರ ಲಕ್ಷ್ಮಿ ನರಸಿಂಹ, ಅನಂತ್ ನಾಗ್ ಅವರು ಅಭಿನಯದ ಜೊತೆಗೆ ಶ್ರೇಷ್ಠ ವ್ಯಕ್ತಿತ್ವ ಹೊಂದಿರುವ ಕಲಾವಿದರಾಗಿದ್ದಾರೆ. ಸಂಸ್ಕೃತ, ಇಂಗ್ಲಿಷ್, ಕನ್ನಡ ಹಾಗೂ ಮರಾಠಿ ಭಾಷೆಗಳಲ್ಲಿನ ಅವರ ಜ್ಞಾನ ಅಪಾರವಾಗಿದೆ. ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆ ಮತ್ತು ಗೌರವದ ಸಂಗತಿಯಾಗಿದೆ ಎಂದರು. ಕನ್ನಡಕ್ಕೆ ಮೂರನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಅನಂತ್ ನಾಗ್ ಅವರ ಅಭಿನಯ ಯುವ ನಟರಿಗೆ ಮಾದರಿಯಾಗಿದೆ. ಚಿತ್ರರಂಗದಲ್ಲಿ ತಾಳ್ಮೆ ಹಾಗೂ ಶ್ರೇಷ್ಠ ಅಭಿನಯವನ್ನು ಮೈಗೂಡಿಸಿಕೊಂಡು ದೀರ್ಘಕಾಲ ಕೀರ್ತಿವಂತರಾಗಿ ಉಳಿಯಲು ಯುವ ಪೀಳಿಗೆ ಅನಂತ್ ನಾಗ್ ಅವರ ಕಲಾ ಜೀವನದಿಂದ ಸ್ಫೂರ್ತಿ ಪಡೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರನ್ ಪ್ರಸಾದ್ ಅವರು ಪಿ.ಬಿ. ಶ್ರೀನಿವಾಸ್ ಅವರ ಚಲನಚಿತ್ರ ಗೀತೆಗಳನ್ನು ಹಾಡಿ ಸ್ಮರಿಸಿದರು. ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನೂರಾರು ಕನ್ನಡ ಗೀತೆಗಳನ್ನು ಹಾಡುವ ಮೂಲಕ ಕನ್ನಡದ ಕಲೆ, ಸಾಹಿತ್ಯ ಹಾಗೂ ಸಂಗೀತವನ್ನು ಜನರಿಗೆ ತಲುಪಿಸುವಲ್ಲಿ ಪಿ.ಬಿ. ಶ್ರೀನಿವಾಸ್ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗಮೂರ್ತಿ, ಬಿ.ಕೆ. ಆರಾಧ್ಯ, ನಿವೃತ್ತ ಶಿಕ್ಷಕಿ ಸರಸ್ವತಿ, ವೀರಶೆಟ್ಟಿ, ಸುರೇಶ್ ಗೌಡ, ಬಸವರಾಜು, ನಾಗೇಶ್, ಮಂಜುನಾಥ್, ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




