ಚಿಕ್ಕಮಗಳೂರು: ದೇವಸ್ಥಾನ ಪ್ರವೇಶದ ವಿಚಾರವಾಗಿ ಜಾತಿ ನಿಂದನೆ, ಕತ್ತಿಯಿಂದ ಹಲ್ಲೆಗೆ ಯತ್ನ ಹಾಗೂ ಹಲ್ಲೆಗೆ ಪ್ರಚೋದನೆ ನೀಡಿದ ಆರೋಪದಡಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ, ಹೊಸಕೋಟೆ ಗ್ರಾಮದ 16 ವರ್ಷದ ವಿದ್ಯಾರ್ಥಿ ಸಂತೋಷ್ ಹೆಚ್ ಎಸ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಆಗಸ್ಟ್ 5ರಂದು ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಘಟನೆ ನಡೆದಿದೆ ಎನ್ನಲಾಗಿದೆ, ಸ್ನೇಹಿತನನ್ನು ಬಸ್ಗೆ ಹತ್ತಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ವಿಜಯರಾಜ್ ಎಂಬಾತ ಕತ್ತಿಯಿಂದ ಹಿಂಬದಿಯಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ ಎಂದು ಸಂತೋಷ್ ಆರೋಪಿಸಿದ್ದು, ಈ ವೇಳೆ ಸ್ಥಳೀಯ ಮಹಿಳೆಯೊಬ್ಬರು ಸಂತೋಷ್ನನ್ನು ಪಕ್ಕಕ್ಕೆ ಎಳೆದು ಅಪಾಯ ತಪ್ಪಿಸಿದ್ದಾರೆ ಎನ್ನಲಾಗಿದೆ, ಬಳಿಕ ದೇವಸ್ಥಾನಕ್ಕೆ ಬರುವ ವಿಚಾರವಾಗಿ ಜಾತಿ ನಿಂದನೆ ಮಾಡಿ ಊರು ಬಿಟ್ಟು ಓಡಿಸುವುದಾಗಿ ಬೆದರಿಸಿ ಮತ್ತೆ ಕತ್ತಿಯಿಂದ ಹಲ್ಲೆಗೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ, ಇದೇ ವೇಳೆ ಶ್ವೇತಾ ಎಂಬ ಮಹಿಳೆ ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡುವಂತೆ ಪ್ರಚೋದನೆ ನೀಡಿದ್ದಾಳೆ ಎಂಬ ಆರೋಪವೂ ಕೇಳಿಬಂದಿದೆ, ಘಟನೆಯ ವೇಳೆ ಸಂತೋಷ್ ವಿಡಿಯೋ ಹಾಗೂ ಫೋಟೋ ತೆಗೆದುಕೊಂಡಿದ್ದು, ಈ ಸಂಬಂಧ ನೀಡಿದ ದೂರಿನ ಆಧಾರದ ಮೇಲೆ ವಿಜಯರಾಜ್ ಹಾಗೂ ಶ್ವೇತಾ ವಿರುದ್ಧ ಗ್ರಾಮಾಂತರ ಪೊಲೀಸರು ಅಟ್ರಾಸಿಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ
